ಮಾ.11-12ಕ್ಕೆ ಹನುಮಂತ ದೇವರ ಸವಾರಿ ಮೂರ್ತಿಯ ಕಲಾವೃದ್ಧಿ ಮಹೋತ್ಸವ

KannadaprabhaNewsNetwork |  
Published : Mar 02, 2026, 02:45 AM IST
ಫೋಟೋ : ೨೮ಕೆಎಂಟಿ_ಎಫ್‌ಇಬಿ_ಕೆಪಿ೧: ಚಂದಾವರ ಸೀಮೆ ಹನುಮಂತ ದೇವಸ್ಥಾನದ ಕಾರ್ಯಕ್ರಮ ಆಮಂತ್ರಣ ಪತ್ರಿಕೆಯನ್ನು ಆಡಳಿತ ಮಂಡಳಿ ಹಾಗೂ ಕಲಾವೃದ್ಧಿ ಸಮಿತಿ ಶನಿವಾರ ಬಿಡುಗಡೆಗೊಳಿಸಿದರು. ಆರ್.ಜಿ.ನಾಯ್ಕ, ಎಂ.ಕೆ.ಪಟಗಾರ, ಎನ್.ಎಸ್.ನಾಯ್ಕ, ಸೀತಾರಾಮ ನಾಯ್ಕ, ಉಮೇಶ ನಾಯ್ಕ, ದೇವು ಗೌಡ, ಸೂರಜ ನಾಯ್ಕ, ಜಿ.ಎನ್.ನಾಯ್ಕ, ಎಂ.ಜಿ.ಪಟಗಾರ, ಗುರು ಐಗಳ, ಎಂ.ಜಿ.ಚಂದಾವರ ಇತರರು ಇದ್ದರು. | Kannada Prabha

ಸಾರಾಂಶ

ಸೀಮೆಯ ಒಡೆಯನೆಂದೇ ಪ್ರಸಿದ್ಧಿ ಹೊಂದಿದ ಚಂದಾವರದ ಹನುಮಂತ ದೇವರ ಸವಾರಿ ಮೂರ್ತಿಯ ಕಲಾವೃದ್ಧಿ ಮಹೋತ್ಸವವನ್ನು ಮಾ. ೧೧ ಹಾಗೂ ೧೨ರಂದು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕುಮಟಾ

ಸೀಮೆಯ ಒಡೆಯನೆಂದೇ ಪ್ರಸಿದ್ಧಿ ಹೊಂದಿದ ಚಂದಾವರದ ಹನುಮಂತ ದೇವರ ಸವಾರಿ ಮೂರ್ತಿಯ ಕಲಾವೃದ್ಧಿ ಮಹೋತ್ಸವವನ್ನು ಮಾ. ೧೧ ಹಾಗೂ ೧೨ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಲಾವೃದ್ಧಿ ಸಮಿತಿ ಅಧ್ಯಕ್ಷ ಆರ್.ಜಿ. ನಾಯ್ಕ ತಿಳಿಸಿದರು.

ಚಂದಾವರ ಹನುಮಂತ ದೇವಸ್ಥಾನದಲ್ಲಿ ಶನಿವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಸ್ಥಾನದಲ್ಲಿ ನಿತ್ಯ ಪೂಜಿತ ಸ್ಥಿರಮೂರ್ತಿಯ ಕಲಾವೃದ್ಧಿಯನ್ನು ೨೦೨೪ರಲ್ಲಿ ಅತ್ಯಂತ ವಿಜೃಂಭಣೆಯಿಂದ ಮಾಡಲಾಗಿದ್ದು ಲಕ್ಷಾಂತರ ಭಕ್ತರು ಪಾಲ್ಗೊಂಡು ಸೇವೆಗೈದಿದ್ದಾರೆ. ಹಿಂದೆ ೧೯೮೨ರಲ್ಲಿ ಇದೇ ಸವಾರಿ ಮೂರ್ತಿಯು ಭಿನ್ನವಾಗಿದ್ದು ಬೆಸುಗೆ ಹಾಕಿ ಕಲಾವೃದ್ಧಿ ಮಾಡಲಾಗಿತ್ತು. ಈಗ ಪುನಃ ಅಂದು ಬೆಸುಗೆ ಹಾಕಿದ ಜಾಗದಲ್ಲೇ ಈಗ ಪುನಃ ಬಿರುಕು ಬಿಟ್ಟಿದ್ದರಿಂದ ಇಲ್ಲಿನ ಪರಂಪರೆಯಂತೆ ದೇವರ ಪ್ರಸಾದ ಅಪ್ಪಣೆ ಪಡೆದು ಸವಾರಿ ಮೂರ್ತಿಯ ದುರಸ್ತಿಯೊಂದಿಗೆ ಕಲಾವೃದ್ಧಿಗೆ ಸಿದ್ಧತೆ ನಡೆದಿದೆ.

ಸೀಮೆ ಒಡೆಯನ ದರ್ಶನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ದೇವಸ್ಥಾನದ ಪಕ್ಕದಲ್ಲೇ ಒಂದೂವರೆ ಎಕರೆ ಜಾಗ ಖರೀದಿಸಿದ್ದೇವೆ. ಆ ಜಾಗವನ್ನು ಕಾರ್ಯುಕ್ರಮ ಸಂದರ್ಭದಲ್ಲಿ ವಾಹನ ನಿಲುಗಡೆ, ಊಟೋಪಚಾರ ಇತರ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಹಾಗೂ ಅನ್ನ ಸಂತರ್ಪಣೆಗೆ ಹೊರೆಗಾಣಿಕೆ ಸ್ವೀಕರಿಸುತ್ತೇವೆ. ೨೦೦೦ಕ್ಕೂ ಹೆಚ್ಚು ಕಾರ್ಯಕರ್ತರು ಎರಡು ದಿನದ ಕಲಾವೃದ್ಧಿ ಮಹೋತ್ಸವದಲ್ಲಿ ಮಂದಿರ ಹಾಗೂ ಭಕ್ತಾದಿಗಳ ಸೇವೆಯಲ್ಲಿ ದುಡಿಯಲಿದ್ದಾರೆ. ಕಾರ್ಯಕ್ರಮದ ದಿನಗಳಲ್ಲಿ ಅಪಾರ ಭಕ್ತಾದಿಗಳ ದಟ್ಟಣೆ ಹಾಗೂ ಇಕ್ಕಟ್ಟಾದ ರಸ್ತೆ ಇರುವುದರಿಂದ ದೇವರ ದರ್ಶನ ವ್ಯವಸ್ಥೆ ಸುಸೂತ್ರಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಮೊಕ್ತೇಸರ ಎಂ.ಕೆ. ಪಟಗಾರ ಮಾತನಾಡಿ, ನಮ್ಮ ಮಂದಿರದಲ್ಲಿ ೧೮೮೫ರ ದಸ್ತಾವೇಜೊಂದರಲ್ಲಿ ಮಂದಿರದಲ್ಲಿ ೧೮೫೦ರಿಂದ ನಡಾವಳಿಗಳ ದಾಖಲೆಯಿದ್ದು ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆಯುತ್ತಾ ಬಂದಿದ್ದರ ಉಲ್ಲೇಖವಿದೆ. ಅನಾದಿಯಿಂದಲೂ ಗ್ರಾಮದವರು ಮತ್ತು ನಾಲ್ಕು ವರ್ಗದವರು ಸೇವೆಗೈದ ಪರಂಪರೆ ಇದೆ. ಇಲ್ಲಿನ ಯಾವುದೇ ಕಾರ್ಯಕ್ರಮದಲ್ಲಿ ಹಾಲಕ್ಕಿಗಳು ಸಂಪೂರ್ಣ ಶ್ರಮದಾನ ಮಾಡುತ್ತಾ ಬಂದಿದ್ದು ವಿಶೇಷ. ಕಲಾವೃದ್ಧಿ ಧಾರ್ಮಿಕ ಕಾರ್ಯಕ್ರಮವನ್ನು ಗೋಕರ್ಣದ ಆಗಮ ವಿದ್ವಾನ್ ವರದೇಶ್ವರ ಹಿರೇಗಂಗೆ ನೇತೃತ್ವದಲ್ಲಿ ನಡೆಯಲಿದೆ.

ಮಂದಿರದ ಪ್ರಧಾನ ಅರ್ಚಕ ಬಾಲಕೃಷ್ಣ ಅಡಿ ಮಾತನಾಡಿದರು. ಊಟೋಪಚಾರ ವಿಭಾಗದ ಎಂ.ಎಸ್. ನಾಯ್ಕ ಮಾತನಾಡಿದರು. ಎನ್.ಎಸ್. ನಾಯ್ಕ, ಉಮೇಶ ನಾಯ್ಕ, ದೇವು ಗೌಡ, ಸೂರಜ ನಾಯ್ಕ, ಜಿ.ಎನ್. ನಾಯ್ಕ, ಎಂ.ಜಿ. ಪಟಗಾರ, ಗುರು ಐಗಳ, ಎಂ.ಜಿ. ಚಂದಾವರ ಇತರರು ಇದ್ದರು. ಕಲಾವೃದ್ಧಿ ಸಮಿತಿಯ ಕಾರ್ಯದರ್ಶಿ ಸೀತಾರಾಮ ನಾಯ್ಕ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳು ಎಲ್ಲಿಯೂ ಯಾರ ಮೇಲೆ ದಾಳಿ ಮಾಡಿಲ್ಲ: ಸುಧೀರ ಸಿಂಹ ಘೋರ್ಪಡೆ
ಮಾನವ ಧರ್ಮದ ಉನ್ನತಿಗೆ ಶ್ರಮಿಸಿದ ರೇಣುಕಾಚಾರ್ಯರು