ಹಿಂದೂಗಳ ಒಗ್ಗಟ್ಟಿಗಾಗಿ ಹನುಮಾನ ಸೇವಾ ಕೇಂದ್ರ!

KannadaprabhaNewsNetwork |  
Published : Jul 02, 2025, 12:21 AM IST
ಹುಬ್ಬಳ್ಳಿಯ ಮಂದಿರವೊಂದರಲ್ಲಿ ಹನುಮಾನ ಚಾಲೀಸಾ ಮಂತ್ರ ಪಠಿಸುತ್ತಿರುವುದು. | Kannada Prabha

ಸಾರಾಂಶ

ಹಿಂದೂಗಳ ರಕ್ಷಣೆಯಾಗಬೇಕು. ಬಡ ಹಿಂದೂಗಳಿಗೆ ನೆರವು ನೀಡುವಂತಾಗಬೇಕು. ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂಬ ಕಲ್ಪನೆಯಿಂದ ಹುಟ್ಟುಕೊಂಡಿರುವ ಸೇವಾ ಕೇಂದ್ರಗಳಿವು.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹಿಂದೂಗಳ ರಕ್ಷಣೆ, ಒಗ್ಗೂಡಿಸಲು, ಧಾರ್ಮಿಕ ಸಂಸ್ಕಾರ ನೀಡಲು ರಾಜ್ಯದಲ್ಲಿ ಹನುಮಾನ ಸೇವಾ ಕೇಂದ್ರಗಳು ತಲೆ ಎತ್ತುತ್ತಿವೆ. ಅಂತಾರಾಷ್ಟ್ರೀಯ ಹಿಂದೂ ಪರಿಷತ್‌ ಕಾರ್ಯಕರ್ತರು ಈ ಸೇವಾ ಕೇಂದ್ರಗಳನ್ನು ನಡೆಸುತ್ತಿದ್ದಾರೆ.

ಕಳೆದ ತಿಂಗಳು ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಪ್ರವೀಣಬಾಯ್‌ ತೊಗಾಡಿಯಾ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದರು. ಆ ವೇಳೆ ದೇಶದ ಪ್ರತಿ ಹಳ್ಳಿಹಳ್ಳಿಗಳಲ್ಲಿ ಹನುಮಾನ ಸೇವಾ ಕೇಂದ್ರ ತೆರೆಯುವಂತೆ ಸಲಹೆ ಮಾಡಿದ್ದರು. ಅದರಂತೆ ಇದೀಗ ಸೇವಾ ಕೇಂದ್ರಗಳು ತಲೆ ಎತ್ತುತ್ತಿದ್ದು, ಹುಬ್ಬಳ್ಳಿಯಲ್ಲಿ ಈಗಾಗಲೇ 3 ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಏನಿದು ಕೇಂದ್ರ?: ಹಿಂದೂಗಳ ರಕ್ಷಣೆಯಾಗಬೇಕು. ಬಡ ಹಿಂದೂಗಳಿಗೆ ನೆರವು ನೀಡುವಂತಾಗಬೇಕು. ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂಬ ಕಲ್ಪನೆಯಿಂದ ಹುಟ್ಟುಕೊಂಡಿರುವ ಸೇವಾ ಕೇಂದ್ರಗಳಿವು. ಹನುಮಾನ ಮಂದಿರ ಸೇರಿದಂತೆ ವಿವಿಧ ಮಂದಿರಗಳಲ್ಲಿ ಸಣ್ಣದಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಶನಿವಾರ ಸಂಜೆ ಒಂದು ಗಂಟೆ ಹನುಮಾನ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಸಾಮೂಹಿಕ ಹನುಮಾನ ಚಾಲೀಸಾ ಪಠಿಸುವುದು. ಬಳಿಕ "ಮುಷ್ಟಿ ಭರ್‌ ಅನಾಜ್‌ " ಕಾರ್ಯಕ್ರಮ ಶುರು ಮಾಡುವುದು ಅಂದರೆ, ಪ್ರತಿನಿತ್ಯ ಅಡುಗೆ ಮಾಡುವಾಗ ಒಂದು ಮುಷ್ಟಿಯಷ್ಟು ದವಸ- ಧಾನ್ಯ ತೆಗೆದಿಡುವುದು. ತಿಂಗಳಿಗೊಮ್ಮೆ ಅದನ್ನು ಬಡ ಹಿಂದುಗಳ ಮನೆಗೆ ನೀಡುವುದು. ಜತೆಗೆ ಹಿಂದೂ ವೈದ್ಯರನ್ನು ಪಟ್ಟಿ ಮಾಡಿ ಅವರನ್ನು ಕಂಡು ದಿನಕ್ಕೊಬ್ಬರಂತೆ ಹಿಂದೂಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿಸುವುದು. ಈ ಮೂಲಕ ಹಿಂದೂಗಳ ಸ್ವಾಸ್ಥ್ಯ ಕಾಪಾಡಿಕೊಳ್ಳಲು ನೆರವಾಗುವುದು. ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ ಎಲ್ಲರೂ ಒಟ್ಟಾಗಿ ಹೋರಾಟ ನಡೆಸುವುದು. ಕಾನೂನು ನೆರವು ಬೇಕಾಗಿದ್ದರೆ, ಹಿಂದೂ ವಕೀಲರ ಮೂಲಕ ಒದಗಿಸುವುದು. ಏನಾದರೂ ಸಮಸ್ಯೆಗೆ ಸಿಲುಕಿದರೆ ಸಹಾಯವಾಣಿ ಕೇಂದ್ರ, ಆನ್‌ಲೈನ್‌ ಮೂಲಕ ನೆರವು ಪಡೆಯಲು ವೆಬ್‌ಸೈಟ್‌ ತೆರೆಯಲಿದೆ ಈ ಸೇವಾ ಕೇಂದ್ರ.

ಹುಬ್ಬಳ್ಳಿಯ ತುಳಜಾಭವಾನಿ ಸರ್ಕಲ್‌ನಲ್ಲಿರುವ ಆಂಜನೇಯ ದೇವಸ್ಥಾನ, ವಿಶ್ವೇಶ್ವರ ನಗರದ ವರಸಿದ್ಧಿ ವಿನಾಯಕ ಮಂದಿರ, ಹೆಗ್ಗೇರಿಯಲ್ಲಿರುವ ದೇವಸ್ಥಾನ ಹೀಗೆ ಮೂರು ಕಡೆಗಳಲ್ಲಿ ಸೇವಾ ಕೇಂದ್ರ ತೆರೆಯಲಾಗಿದೆ. ಸದ್ಯ ಹನುಮಾನ ಚಾಲೀಸಾ ಪಠಣ ಮಾಡಲಾಗುತ್ತಿದೆ. ಚಾಲೀಸಾ ರೂಢಿಯಾದ ಬಳಿಕ "ಮುಷ್ಟಿ ಭರ್‌ ಅನಾಜ್‌ " ಸೇರಿದಂತೆ ಮತ್ತಿತರರ ಸೇವೆ ಆರಂಭಿಸಲಾಗುವುದು ಎಂದು ಕಾರ್ಯಕರ್ತರು ತಿಳಿಸುತ್ತಾರೆ. ಮಕ್ಕಳಿಗೆ ಹನುಮಾನ ಚಾಲೀಸಾ ಪಠಣ ಮಾಡಲಾಗುತ್ತಿದೆ. ಈ ಮೂಲಕ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡಲಾಗುತ್ತಿದೆ ಎಂದು ವಿವರಿಸುತ್ತಾರೆ.

ಹಿಂದೂಗಳಲ್ಲಿ ಧಾರ್ಮಿಕ ಸಂಸ್ಕಾರ, ಶ್ರದ್ಧೆ ಬೆಳೆದರೆ ಮತಾಂತರವನ್ನೂ ತಡೆಯಬಹುದು. ಹಿಂದೂಗಳ ರಕ್ಷಣೆಗೂ ಒಗ್ಗಟ್ಟು ಆಗುತ್ತದೆ ಎಂಬ ಕಾರಣಕ್ಕೆ ಈ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಂಘಟಕರು ತಿಳಿಸುತ್ತಾರೆ.

ಒಟ್ಟಿನಲ್ಲಿ ಹಿಂದೂಗಳನ್ನು ಒಗ್ಗಟ್ಟಿಸಲು ತೊಗಾಡಿಯಾ ನೇತೃತ್ವದ ಅಂತಾರಾಷ್ಟ್ರೀಯ ಹಿಂದೂ ಪರಿಷತ್‌ ಸೇವಾ ಕೇಂದ್ರಗಳ ಮೂಲಕ ಮಾಡಲು ಹೊರಟಿರುವುದಂತೂ ಸತ್ಯ.

ಹುಬ್ಬಳ್ಳಿಯಲ್ಲಿ 3 ಕಡೆಗಳಲ್ಲಿ ಹನುಮಾನ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮಕ್ಕಳಿಗೆ ಹನುಮಾನ ಚಾಲೀಸಾ ಹೇಳಿಕೊಡಲಾಗುತ್ತಿದೆ. ರಾಜ್ಯದಲ್ಲಿ ಕನಿಷ್ಠ 501 ಕೇಂದ್ರ ಮಾಡುವ ಗುರಿ ಇದೆ. ಈ ಮೂಲಕ ವಿವಿಧ ಸೇವೆಗಳನ್ನು ಈ ಸೇವಾ ಕೇಂದ್ರ ಮಾಡಲಿದೆ. ಇದು ಪ್ರಾರಂಭಿಕ ಹಂತ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್‌ ರಾಜ್ಯ ಕಾರ್ಯಾಧ್ಯಕ್ಷ ರಮೇಶ ಕುಲಕರ್ಣಿ ಹೇಳಿದರು.

ಹುಬ್ಬಳ್ಳಿಯ ತುಳಜಾ ಭವಾನಿ ಸರ್ಕಲ್‌ನಲ್ಲಿರುವ ಹನುಮಾನ ಮಂದಿರದಲ್ಲಿ ಸೇವಾ ಕೇಂದ್ರ ತೆರೆಯಲಾಗಿದೆ. 50ಕ್ಕೂ ಹೆಚ್ಚು ಜನ ಪ್ರತಿ ಶನಿವಾರ ರಾತ್ರಿ ಸೇರುತ್ತಾರೆ. ಸದ್ಯಕ್ಕೆ ಸಾಮೂಹಿಕ ಹನುಮಾನ ಚಾಲೀಸಾ ಪಠಣ ನಡೆಯುತ್ತಿದೆ ಎಂದು ಕಾರ್ಯಕರ್ತ ಗಣೇಶ ಜರತಾರಘರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ