ಸಾವಿನಲ್ಲೂ ಸಾರ್ಥಕತೆ ಮೆರೆದ ಹನುಮಂತ

KannadaprabhaNewsNetwork |  
Published : Jul 21, 2024, 01:21 AM IST
ಬಿಜಿಎಂ 2 | Kannada Prabha

ಸಾರಾಂಶ

ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅಂಗಾಂಗ ದಾನ ಮಾಡಿ ಇಬ್ಬರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅಂಗಾಂಗ ದಾನ ಮಾಡಿ ಇಬ್ಬರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಸವದತ್ತಿ ತಾಲೂಕಿನ ಕುಟರನಟ್ಟಿ (ಹಿರೆಬುದ್ನೂರ) ಗ್ರಾಮದ ಹನುಮಂತ ಸರ್ವಿ ಎಂಬುವವರು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಕೆಎಲ್‌ ಇಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಮೆದುಳು ನಿಷ್ಕ್ರಿಯಗೊಂಡು ಚಿಕಿತ್ಸೆ ಫಲಿಸದೇ ಗರ್ಭಿಣಿ ಹೆಂಡತಿ ಹಾಗೂ 2 ವರ್ಷದ ಮಗಳನ್ನು ಬಿಟ್ಟು ಅಗಲಿದ್ದಾರೆ.ಆರ್ಥಿಕ ಹಾಗೂ ಶಿಕ್ಷಣದಿಂದ ಹಿಂದುಳಿದಿರುವ ಕುಟಂಬ ಮಡುಗಟ್ಟಿದ ದುಃಖದಲ್ಲಿದ್ದರೂ ಗರ್ಣಿಣಿ ಹೆಂಡತಿಯ ಧೈರ್ಯದಿಂದಲೇ ಅಂಗಾಂಗ ದಾನ ಮಾಡಿ ಸಮಾಜಕ್ಕೆ ಸಂದೇಶ ರವಾನಿಸಿದ್ದಾರೆ. ಹನುಮಂತನ ಲೀವರ್‌, ಎರಡು ಮೂತ್ರಪಿಂಡ ಮತ್ತು ಕಣ್ಣುಗಳನ್ನು ದಾನ ಮಾಡಿ, ಮೂವರಿಗೆ ಹೊಸ ಜೀವನ ನೀಡಿದರೆ, ಇಬ್ಬರು ಅಂಧರಿಗೆ ದೃಷ್ಟಿ ನೀಡಿ ಬೆಳಕಾಗಿದ್ದಾರೆ.

ಹನುಮಂತ ಮೃತಪಟ್ಟ ಕೆಲ ಘಳಿಗೆಯಲ್ಲಿಯೇ ಅವರ 2 ವರ್ಷದ ಮಗಳಿಗೆ ಜನ್ಮತಃವಾಗಿದ್ದ ಹೃದ್ರೋಗ ತೀವ್ರಗೊಂಡಿತ್ತು. ತುರ್ತು ಚಿಕಿತ್ಸೆಗಾಗಿ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಿದಾಗ ಚಿಕ್ಕಮಕ್ಕಳ ಹೃದ್ರೋಗ ತಜ್ಞವೈದ್ಯ ಡಾ.ವೀರೇಶ ಮಾನ್ವಿ ಅವರು ತಪಾಸಣೆಗೊಳ್ಪಡಿಸಿದಾಗ ಹೃದಯದಲ್ಲಿ ರಂದ್ರವಿರುವುದು ಕಂಡು ಬಂದಿದೆ. ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಮಾಡಿಸಲೇಬೇಕು ಎಂದು ಸಲಹೆ ನೀಡಿದರು. ಇದರಿಂದ ಕುಟುಂಬ ಮತ್ತೆ ಆಘಾತಕ್ಕೊಳಗಾಯಿತು. ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಕಲ್ಪಿಸಿದ ರೋಟರಿ ಕ್ಲಬ್ ಆಫ್ ಬೆಳಗಾವಿ (ದಕ್ಷಿಣ)ವು ಗಿಫ್ಟ್‌ ಆಫ್ ಲೈಫ್ (ಜೀವನದ ಉಡುಗೊರೆ) ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲು ಸಹಕರಿಸಿದರು. ಚಿಕ್ಕಮಕ್ಕಳ ಹೃದಯ ಶಸ್ತ್ರಚಿಕಿತ್ಸಕ ಡಾ.ಗಣಂಜಯ ಸಾಳ್ವೆ ಅವರಿಗೆ ಅರವಳಿಕೆ ತಜ್ಞವೈದ್ಯ ಡಾ.ಶರಣಗೌಡ ಪಾಟೀಲ ಹಾಗೂ ಅವರ ತಂಡ ಸಹಕರಿಸಿತು. ತಜ್ಞವೈದ್ಯರ ಆರೈಕೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಕುಟುಂಬದಲ್ಲಿ ಹೊಸ ಭರವಸೆ ಮೂಡಿಸಿದೆ. ‘ಗಿಫ್ಟ್ ಆಫ್ ಲೈಫ್’ ಯೋಜನೆಯಡಿ ಇಲ್ಲಿಯವರೆಗೆ 15 ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ರೋಟರಿ ಇಂಟರ್‌ನ್ಯಾಶನಲ್‌ನಿಂದ ರೋಟರಿ ಕ್ಲಬ್ ಆಫ್ ಬೆಳಗಾವಿ (ದಕ್ಷಿಣ) ಸಹಕಾರದೊಂದಿಗೆ ಧನಸಹಾಯ ನೀಡಲಾಗುತ್ತದೆ.

ರೋಟರಿ ಕ್ಲಬ್ ಬೆಳಗಾವಿ (ದಕ್ಷಿಣ)ದ ನೀಲೇಶ್ ಪಾಟೀಲ, ಭೂಷಣ ಮೋಹಿತ್ರೆ, ಚೈತನ್ಯ ಕುಲಕರ್ಣಿ, ಆರತಿ ಅಂಗಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಅಜ್ಜಿಯೊಂದಿಗೆ ಮಾತನಾಡಿ, ನಿಮ್ಮ ಕಷ್ಟದಲ್ಲಿ ನಾವೂ ಕೂಡ ಭಾಗಿಯಾಗಿದ್ದು, ಮಗುವಿನ ಆರೋಗ್ಯದ ಕಾಳಜಿ ವಹಿಸುತ್ತೇವೆ ಎಂದು ಅಭಯ ನೀಡಿ ಮಗು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿ, ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ರೋಟರಿ ಕ್ಲಬ್‌ಗಳಂತಹ ಸಮುದಾಯ ಸಂಸ್ಥೆಗಳು ಅಗತ್ಯವಿರುವ ಕುಟುಂಬಗಳಿಗೆ ಕಾಳಜಿ ತೋರ್ಪಡಿಸುತ್ತ ಆರ್ಥಿಕ ಸಹಾಯ ಮಾಡುತ್ತಿರುವುದು ಮಾದರಿಯಾಗಿದೆ ಎಂದು ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮೋಹನ ಗಾನ ಹೇಳಿದರು.

ರೋಟರಿ ಕ್ಲಬ್‌ ಕಾರ್ಯಕ್ಕೆ ಡಾ.ಕೋರೆ ಪ್ರಶಂಸೆ:

ಮಕ್ಕಳಲ್ಲಿರುವ ಹೃದಯ ತೊಂದರೆ ಗುಣಮುಖಗೊಳಿಸಲು ರೋಟರಿ ಕ್ಲಬ್ ಆಫ್ ಬೆಳಗಾವಿ (ದಕ್ಷಿಣ)ವು ಶ್ರಮಿಸುತ್ತಿರುವುದಕ್ಕೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಹೃತ್ಪೂರ್ವಕ ಕೃತಜ್ಞತೆ ಅರ್ಪಿಸಿದ್ದಾರೆ. ಹಣಮಂತನ ಅಗಲಿಕೆಯಿಂದ ದುಃಖದಲ್ಲಿರುವ ಕುಟುಂಬಕ್ಕೆ ಗಂಡು ಮಗು ಜನಿಸಿದ್ದು, ಶೋಕದಲ್ಲಿಯೂ ಕುಟುಂಬದವರಲ್ಲಿ ಭರವಸೆಯ ಬೆಳಕು ಮೂಡಿದೆ.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ