ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದಲ್ಲಿ ನಡೆಯುತ್ತಿದ್ದ ಕುಟುಂಬಸ್ಥರ ಧರಣಿ ಸ್ಥಳಕ್ಕೆ ಭೇಟಿಕೊಟ್ಟು ಮನವೊಲಿಸುವ ಪ್ರಯತ್ನ ಮಾಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರಕರಣದ ತನಿಖೆಯ ಹೊಣೆಯನ್ನು ಮ್ಯಾಜಿಸ್ಟ್ರೇಟ್‌ಗೆ ವಹಿಸಿದೆ. ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸರ್ಕಾರದಿಂದ ತಾತ್ಕಾಲಿಕವಾಗಿ ₹5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ ಜೊತೆಗೆ ವೈಯಕ್ತಿಕವಾಗಿ ತಾನು ಸಹ ತಲಾ ₹10 ಲಕ್ಷ ಪರಿಹಾರ ನೀಡಲಿದ್ದು ಒಟ್ಟು ₹15 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.ಗುಂಡು ಹಾರಿಸಿದ ಪ್ರಕರಣ ಸಂಬಂಧ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತನಿಖಾ ತಂಡವನ್ನೂ ರಚಿಸಲಾಗಿದ್ದು ವರದಿ ಸಲ್ಲಿಕೆಯಾದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಅವರು ಭರವಸೆ ನೀಡಿದರು.
ಅರಣ್ಯ ಇಲಾಖೆ ನಡೆಸಲಾಗಿರುವ ಶೂಟ್ ಔಟ್ ಪ್ರಕರಣದಲ್ಲಿ ಮೂವರು ಬಲಿಯಾದ ಕುಟುಂಬದವರ ಜೊತೆ ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ ಮನವೊಲಿಸಿದ್ದು, ಮೈಸೂರಿನಲ್ಲಿದ್ದ ಮೃತ ದೇಹಗಳನ್ನು ಪಡೆಯಲು ಕುಟುಂಬಸ್ಥರು ಒಪ್ಪಿದ ಹಿನ್ನೆಲೆ ನಿಮ್ಮ ಜೊತೆ ನಾನು ಇರುತ್ತೇನೆ. ಹೀಗಾಗಿ ಮೃತ ದೇಹ ಪಡೆದು ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ಮಾಡಲು ವ್ಯವಸ್ಥೆ ಮಾಡುವಂತೆ ಕುಟುಂಬದ ಸದಸ್ಯರನ್ನು ಮನವೊಲಿಸಿದರು. ಪ್ರತಿಭಟನೆ ಹಿಂಪಡೆದಿದ್ದರಿಂದ ಕುಟುಂಬಸ್ಥರಿಗೆ ಹಾಗೂ ಸಂಘಟನೆಗಳಿಗೆ ಧನ್ಯವಾದ ತಿಳಿಸಿದರು.ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಮೈಸೂರು ಐಜಿಪಿ ಬೋರಲಿಂಗಯ್ಯ, ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಎಎಸ್ ಪಿ ಶಶಿಧರ್ , ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಮೋಹನ್, ಹನೂರು ಇನ್ಸ್ಪೆಕ್ಟರ್ ಆನಂದ್ ಮೂರ್ತಿ, ಬೇಗೂರು ಠಾಣೆಯ ಇನ್ಸ್ಪೆಕ್ಟರ್ ಮೋಹಿತ್ ಸಹದೇವ್, ಮಳವಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಸವರಾಜ್ ಸೇರಿ ಇಡೀ ಪೊಲೀಸ್ ಇಲಾಖೆ ಪಟ್ಟಣದಲ್ಲಿ ಯಾವುದೇ ಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ಎಂದಿನಂತೆ ವಾಹನ ಸಂಚಾರ ಆರಂಭಗೊಂಡಿದ್ದು ಜನಜೀವನ ಸಹಜ ಸ್ಥಿತಿಗೆ ಮರಳಿತು.