ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಪಿ.ಎಸ್ ಕ್ಯಾಂಪ್ ನಿವಾಸಿಗಳಾದ ವೆಂಕಟೇಶ್, ಚಿನ್ನಿ ಪ್ರಕಾಶ್, ಪಚ್ಚಿಮುತ್ತು, ಮಾಳಶೆಟ್ಟಿ ಮತ್ತು ಮತ್ತೋರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಗುಂಡಿನ ದಾಳಿಯ ಬಳಿಕ ಉದ್ವಿಘ್ನತೆ ಮುಂದುವರಿದಿರುವ ಬೆನ್ನಲ್ಲೇ ಅರಣ್ಯ ಇಲಾಖೆ ಜೀಪ್ ಅನ್ನು ದ್ವಂಸ ಮಾಡಲು ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಐವರ ವಿರುದ್ಧ ಚಾಲಕ ಅರುಣ್ ಕುಮಾರ್ ಅವರು ರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಪಿ.ಎಸ್ ಕ್ಯಾಂಪ್ ನಿವಾಸಿಗಳಾದ ವೆಂಕಟೇಶ್, ಚಿನ್ನಿ ಪ್ರಕಾಶ್, ಪಚ್ಚಿಮುತ್ತು, ಮಾಳಶೆಟ್ಟಿ ಮತ್ತು ಮತ್ತೋರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಆರ್ ಎಫ್ಓ ಅವರ ಮಾರ್ಗದರ್ಶನದಂತೆ ಆಗಸ್ಟ್ 15ರ ರಾತ್ರಿ 10 ಗಂಟೆಗೆ ಅರಣ್ಯ ಸಿಬ್ಬಂದಿ ಚನ್ನೂರು ಗ್ರಾಮದ ಕಡೆಗೆ ಗಸ್ತು ಮಾಡಿ ಹೊಸಳ್ಳಿ ಗ್ರಾಮದ ಕಡೆಗೆ ತೆರಳುತ್ತಿದ್ದರು. ಈ ವೇಳೆ ನಾಲ್ಕು ಜನರು ಎರಡು ದ್ವಿಚಕ್ರ ವಾಹನಗಳಲ್ಲಿ ಬಂದು ಜೀಪ್‌ಗೆ ಅಡ್ಡ ನಿಲ್ಲಿಸಿದ್ದಾರೆ.
ಅರಣ್ಯ ಸಿಬ್ಬಂದಿ ಕೆಳಗೆ ಇಳಿಯುತ್ತಿದ್ದಂತೆ ಆರೋಪಿಗಳು ಅವರನ್ನು ಸುತ್ತುವರೆದು ಅಸಭ್ಯವಾಗಿ ಮಾತನಾಡಿದ್ದಾರೆ. ನಂತರ ಜೀಪ್ ಮೇಲೆ ಕಲ್ಲು ಎಸೆದು, ಜೀಪಿನ ಟಾರ್ಪಲ್ ಹರಿದು ಹಾಕಿದ್ದಾರೆ. ನೀವು ಈ ಕಡೆ ಬಂದರೆ ನಿಮ್ಮನ್ನು ಜೀಪ್ ಸಮೇತ ಸುಟ್ಟು ಹಾಕುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.
ಕಾವೇರಿ ವನ್ಯಜೀವಿಧಾಮದ ಹೊಳೆಮುರಿ ದಟ್ಟ ಅರಣ್ಯದಲ್ಲಿ ಆಗಸ್ಟ್ 15 ರಂದು ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಇಡೀ ಪ್ರದೇಶದಲ್ಲಿ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.