ಹನೂರು ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಸರತ್ತು

KannadaprabhaNewsNetwork | Published : Aug 24, 2024 1:22 AM

ಸಾರಾಂಶ

ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಪಟ್ಟಣದಲ್ಲಿ ಅಧಿಕಾರದ ಗದ್ದುಗೆ ಏರಲು ದಿನಾಂಕ ಸಹ ನಿಗದಿಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಸರತ್ತು ಪ್ರಾರಂಭವಾಗಿದೆ.

ಜಿ ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಪಟ್ಟಣದಲ್ಲಿ ಅಧಿಕಾರದ ಗದ್ದುಗೆ ಏರಲು ದಿನಾಂಕ ಸಹ ನಿಗದಿಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಸರತ್ತು ಪ್ರಾರಂಭವಾಗಿದೆ.

ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ಥಾನ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ‌ ನಿಗದಿಯಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 13 ಸದಸ್ಯರಿದ್ದು ಅಧಿಕಾರದ ಗದ್ದುಗೆ ಏರಲು 7 ಸದಸ್ಯರ ಸಂಖ್ಯಾಬಲ ಅನಿವಾರ್ಯವಾಗಿದೆ.

2019ರಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 6 ಜೆಡಿಎಸ್, 4 ಕಾಂಗ್ರೆಸ್ ಹಾಗೂ 3 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಪೈಕಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಗರಾಜು ಅಕಾಲಿಕ ಮರಣಕ್ಕೆ ತುತ್ತಾದ ಹಿನ್ನೆಲೆಯಲ್ಲಿ ನಡೆದ ಮರುಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸುವ ಮೂಲಕ ಕಾಂಗ್ರೆಸ್ ಸಂಖ್ಯಾಬಲ 4 ರಿಂದ 5ನೇ ಸ್ಥಾನಕ್ಕೇರಿದೆ. ಈಚೆಗೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಮ್ಮ ಅವರು ಕಳೆದ ತಿಂಗಳು ಮೃತಪಟ್ಟಿದ್ದಾರೆ. ಈಗ ಒಟ್ಟು ಸದಸ್ಯರ ಸಂಖ್ಯೆ 12 ಕ್ಕೆ ಇಳಿದಿದೆ. ಈಗಾಗಲೆ ಕಾಂಗ್ರೆಸ್‌ನಲ್ಲಿ 5 ಮತ್ತು ಸಂಸದರ ಮತ ಸೇರಿ ಒಟ್ಟು 6 ಸ್ಥಾನಗಳಿದ್ದು, ಬೆಜೆಪಿ ಒಬ್ಬ ಸದಸ್ಯರಿದ್ದು, ಜೆಡಿಎಸ್‌ನಲ್ಲಿ 6 ಮತ್ತು ಶಾಸಕರ ಮತ ಸೇರಿ ಒಟ್ಟು 7 ಸಂಖ್ಯಾಬಲವಿದ್ದು ಪಟ್ಟಣ ಪಂಚಾಯಿತಿ ಅಧಿಕಾರದ ಗದ್ದುಗೆ ಏರುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ.

ಈ ಮಧ್ಯೆ, ರಾಜ್ಯಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿರುವುದರಿಂದ ಬಿಜೆಪಿ ಬೆಂಬಲಿತ ಸದಸ್ಯರು ಜೆಡಿಎಸ್ ಗೆ ಬೆಂಬಲ ವ್ಯಕ್ತಪಡಿಸುವುದರಿಂದ ಒಟ್ಟು ಸಂಖ್ಯಾಬಲ 8 ಕ್ಕೇರಲಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಟ್ಟಣ ಪಂಚಾಯಿತಿ ಈ ಬಾರಿ ಜೆಡಿಎಸ್ ಪಕ್ಷದ ವತಿಯಿಂದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ.ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ?: ಜೆಡಿಎಸ್‌ಗೆ ಸ್ಪಷ್ಟ ಬಹುಮತ ಇರುವುದರಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯೇ ಅಧ್ಯಕ್ಷ ಗಾದಿ ಏರುವ ಎಲ್ಲ ಸಾಧ್ಯತೆಯಿದೆ. ಜೆಡಿಎಸ್ ಬೆಂಬಲಿತ ಸದಸ್ಯರಲ್ಲಿ ಇಬ್ಬರು ಹಿಂದುಳಿದ ವರ್ಗಗಳ ಅಲ್ಪ ಸಂಂಖ್ಯಾತ ಮಹಿಳೆಯರಿದ್ದಾರೆ. ಒಂದನೇ ವಾರ್ಡಿನ ಮುಮ್ತಾಜ್ ಭಾನು ಹಾಗೂ ಏಳನೆ ವಾರ್ಡಿನ ಪವಿತ್ರ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇಬ್ಬರು ಸದಸ್ಯರು ತಮಗೆ ವರಿಷ್ಠರು ಮಣೆ ಹಾಕಲಿದ್ದಾರೆ ಎಂಬ ನಂಬಿಕೆಯಲ್ಲಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್ ಯಾರಿಗೆ ಆಶೀರ್ವಾದ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಇಬ್ಬರು ಮಹಿಳೆಯರನ್ನು ಹೊರತುಪಡಿಸಿ ಉಳಿದ ನಾಲ್ಕು ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹತೆವುಳ್ಳವರಾಗಿದ್ದಾರೆ. ಆದರೆ, ಇದರಲ್ಲಿ ಕೆಲವರು ಮಾತ್ರ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ವರಿಷ್ಠರ ತೀರ್ಮಾನವೇ ಅಂತಿಮವಾಗಿದೆ. ಈ ನಡುವೆ ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಿರುವುದರಿಂದ ಹನೂರು ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಬಿಟ್ಟುಕೊಟ್ಟು, ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ‌ಗೆ ಕೊಡಬೇಕು ಎಂಬ ಆಲೋಚನೆಯಲ್ಲಿ ಬಿಜೆಪಿ ಮುಖಂಡರು ತೊಡಗಿದ್ದಾರೆ. ಸರ್ಕಾರ ಮೀಸಲಾತಿ ಪ್ರಕಟಿಸಿ ಆ.29 ರಂದು ಚುನಾವಣೆ ದಿನಾಂಕ ನಿಗದಿಯಾಗಿದೆ ತಾಲೂಕು ದಂಡಾಧಿಕಾರಿಗಳು ಚುನಾವಣಾ ಸಭೆ ಅಧಿಕಾರಿಗಳಾಗಿ ಅವರ ನೇತೃತ್ವದಲ್ಲಿ ನಡೆಯುವ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.

ಹೈಕಮಾಂಡ್ ತೀರ್ಮಾನದಂತೆ ಪಪಂ ಜೆಡಿಎಸ್ ಬೆಂಬಲಿತ ಸದಸ್ಯರ ಸಭೆ ಕರೆದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಬಾರಿ ಪಪಂ ಅಧಿಕಾರ ಗದ್ದುಗೆ ಹಿಡಿಯಲು ಪೂರಕವಾಗಿದೆ. ಆ.29ರಂದು ನಡೆಯುವ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲು ಒಮ್ಮ ತೀರ್ಮಾನ ಮಾಡಲಾಗುವುದು.ಎಂ.ಆರ್. ಮಂಜುನಾಥ್, ಶಾಸಕರು.ಕಳೆದ ಬಾರಿ ಕಾಂಗ್ರೆಸ್, ಬಿಜೆಪಿ ಮೈತ್ರಿಯಿಂದ ಪಪಂಯಲ್ಲಿ ಅಧಿಕಾರ ಹಿಡಿಯಲಾಗಿತ್ತು. ಎರಡನೇ ಅವಧಿ ಬಗ್ಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಮುಖಂಡರ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.ಆರ್.ನರೇಂದ್ರ, ಮಾಜಿ ಶಾಸಕಪಪಂ ಇಬ್ಬರು ಬಿಜೆಪಿ ಸದಸ್ಯರಿದ್ದು ಕೆಲವು ದಿನಗಳ ಹಿಂದೆ ಅಧ್ಯಕ್ಷರಾಗಿದ್ದ ಚಂದ್ರಮ್ಮ ಮೃತಪಟ್ಟಿದ್ದು, ಇನ್ನು ಒಬ್ಬರು ಸದಸ್ಯರಿದ್ದಾರೆ. ಮುಖಂಡರು ಹಾಗೂ ಸದಸ್ಯರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗುವುದು.ಪರಿಮಳಾ ನಾಗಪ್ಪ, ಮಾಜಿ ಶಾಸಕಿ

Share this article