ಆನ್‌ಲೈನ್‌ ಟ್ರೇಡಿಂಗ್ 33 ಲಕ್ಷ ರು. ವಂಚನೆ: ನಾಲ್ವರ ಬಂಧನ

KannadaprabhaNewsNetwork | Published : Aug 24, 2024 1:22 AM

ಸಾರಾಂಶ

ಉಡುಪಿಯ ಕಿದಿಯೂರು ನಿವಾಸಿ ಉಪೇಂದ್ರ ಭಟ್ ಅವರ ಮೊಬೈಲಿಗೆ ಅಪರಿಚಿತರು ಕರೆ ಮಾಡಿ, ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್ ಜೊತೆ ಶೇರು ವ್ಯವಹಾರ ನಡೆಸಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ಆಸೆ ತೋರಿಸಿದ್ದರು. ಇದನ್ನು ನಂಬಿದ ಉಪೇಂದ್ರ ಭಟ್ ಆರೋಪಿಗಳು ಹೇಳಿದ ಬ್ಯಾಂಕ್ ಖಾತೆಗೆ 33,10,000 ರು. ಗಳನ್ನು ವರ್ಗಾವಣೆ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಆನ್ಲೈನ್ ಟ್ರೇಡಿಂಗ್‌ನಲ್ಲಿ ಲಾಭದ ಆಮಿಷ ತೋರಿಸಿ 33.10 ಲಕ್ಷ ರು. ವಂಚಿಸಿದ 4 ಮಂದಿ ಆರೋಪಿಗಳನ್ನು ಉಡುಪಿ ಸೆನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಕಾಸರಗೋಡು ಜಿಲ್ಲೆಯ ಕುಂಬ್ಳೆ ಬಂಬ್ರಾಣದ ಖಾಲೀದ್ (39) ಮತ್ತು ಕನ್ಯಪಾಡಿ ಗ್ರಾಮದ ನಿರ್ಚಾಲಿನ ನಿವಾಸಿ ಮೊಹಮ್ಮದ್ ಸಫ್ವಾನ್ (22), ದ.ಕ. ಜಿಲ್ಲೆಯ ಕುರಿಯ ಗ್ರಾಮದ ಈಶ್ವರಮಂಗಲ ನಿವಾಸಿ ಮಹಮ್ಮದ್ ಮುಸ್ತಾಫ (36) ಮತ್ತು ಮಂಗಳೂರಿನ ಬಿಜೈ ನಿವಾಸಿ ಸತೀಶ್ ಶೇಟ್ (52) ಎಂದು ಗುರುತಿಸಲಾಗಿದೆ.ಉಡುಪಿಯ ಕಿದಿಯೂರು ನಿವಾಸಿ ಉಪೇಂದ್ರ ಭಟ್ ಅವರ ಮೊಬೈಲಿಗೆ ಅಪರಿಚಿತರು ಕರೆ ಮಾಡಿ, ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್ ಜೊತೆ ಶೇರು ವ್ಯವಹಾರ ನಡೆಸಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ಆಸೆ ತೋರಿಸಿದ್ದರು. ಇದನ್ನು ನಂಬಿದ ಉಪೇಂದ್ರ ಭಟ್ ಆರೋಪಿಗಳು ಹೇಳಿದ ಬ್ಯಾಂಕ್ ಖಾತೆಗೆ 33,10,000 ರು. ಗಳನ್ನು ವರ್ಗಾವಣೆ ಮಾಡಿದ್ದರು.

ನಂತರ ತನಗೆ ಲಾಭಾಂಶವೂ ಇಲ್ಲ, ಹೂಡಿದ ಹಣವೂ ಇಲ್ಲ ಎಂದು ತಿಳಿದಾಗ ತಾನು ಮೋಸ ಹೋಗಿದ್ದು ಗೊತ್ತಾಯಿತು. ನಂತರ ಅವರು ಉಡುಪಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಅದರಂತೆ ಸೆನ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ವಿಶೇಷ ತಂಡವೊಂದನ್ನು ರಚಿಸಿ ಆರೋಪಿಗಳ ಮೊಬೈಲ್ ನಂಬರಿನ ಜಾಡು ಹಿಡಿದು ನಾಲ್ವರು ಆರೋಪಿಗಳ‍ನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಂದ 13,00,000 ರು. ಹಾಗೂ 5 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಪ್ರಕರಣದ ಸೂತ್ರಧಾರಿ ಕಾಸರಗೋಡು ಜಿಲ್ಲೆಯ ಚೆಂಗಳ ವಾಸಿ ಬದ್ರುಲ್ ಸಿದ್ಧಿಕ್ ದುಬೈಯಲ್ಲಿದ್ದಾನೆ. ಅಲ್ಲದೇ ಇತರ ಆರೋಪಿಗಳಾದ ಕಾಸರಗೋಡು ಪೊವ್ವಲ್ ವಾಸಿಗಳಾದ ರಶೀದ್, ನಂಶಾದ್, ಬಂಬ್ರಾಣ ನಿವಾಸಿ ಮಹಮ್ಮದ್, ನೀರ್ಚಾಲ್ ನಿವಾಸಿ ಮುಸ್ತಾಫ, ಕನ್ಯಾಪಾಡಿ ನಿವಾಸಿ ಅರ್ಷದ್, ಕೊಲ್ಲಂಗಾಣ ನಿವಾಸಿ ಮರ್ಷದ್, ದ.ಕ ಜಿಲ್ಲೆಯ ಪುತ್ತೂರಿನ ಅಬ್ದುಲ್ ಸಮದ್ ತಲೆಮರೆಸಿಕೊಂಡಿದ್ದಾರೆ.

Share this article