ಸುಖ ಕ್ಷಣಿಕವಾದದ್ದು, ಆನಂದ ನಿರಂತರವಾದದ್ದು: ರಾಜು

KannadaprabhaNewsNetwork |  
Published : Nov 20, 2024, 12:30 AM IST
೧೯ಎಸ್.ಎನ್.ಡಿ.೦೨ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಶಿಕ್ಷಕರು ಹಾಗೂ ಸಿಬ್ಬಂದಿಗೆ ಸೋಮವಾರ ವ್ಯಕ್ತಿತ್ವ ವಿಕಸನ ಶಿಬಿರ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಬೋಧಿಸಿದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಸಹ ಉತ್ತಮ ಶಿಕ್ಷಣವಂತನಾಗಬಲ್ಲ ಎಂದು ಹುಬ್ಬಳ್ಳಿಯ ರಾಜು ಧರಿಯಣ್ಣನವರ್ ತಿಳಿಸಿದರು.

ಸಂಡೂರು: ಮನುಷ್ಯರಾದ ನಾವೆಲ್ಲರೂ ಒತ್ತಡದ ಜೀವನದಲ್ಲಿ ನಿರಂತರ ಆನಂದವನ್ನು ಕಳೆದುಕೊಂಡಿದ್ದೇವೆ. ಆನಂದ ಮತ್ತು ಸುಖ ಇವೆರಡು ಬೇರೆ ಬೇರೆ. ಸುಖ ಕ್ಷಣಿಕವಾದದ್ದು, ಆನಂದ ನಿರಂತರವಾದದ್ದು. ಅದಕ್ಕಾಗಿ ನಾವೆಲ್ಲರೂ ಒತ್ತಡ ಮುಕ್ತವಾದ ಜೀವನ ಶೈಲಿ ರೂಪಿಸಿಕೊಳ್ಳುವುದರೊಂದಿಗೆ ಆನಂದಮಯವಾದ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ಹುಬ್ಬಳ್ಳಿಯ ರಾಜು ಧರಿಯಣ್ಣನವರ್ ತಿಳಿಸಿದರು.

ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆವರಣದಲ್ಲಿ ಸೋಮವಾರ ನಡೆದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಉಪನ್ಯಾಸ ನೀಡಿದರು.

ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಬೋಧಿಸಿದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಸಹ ಉತ್ತಮ ಶಿಕ್ಷಣವಂತನಾಗಬಲ್ಲ. ಅದಕ್ಕಾಗಿ ತಾವು ಜೀವನದಲ್ಲಿ ಕೋಪ ಮಾಡಿಕೊಳ್ಳಬಾರದು. ಕೋಪವನ್ನು ತ್ಯಜಿಸಿದರೆ ಶಾಂತವಾದ ಮನಸ್ಸಿನಿಂದ ಉತ್ತಮ ಕಾರ್ಯ ಮಾಡಲು ಸಾಧ್ಯ. ಪ್ರತಿಯೊಂದು ಕಾರ್ಯ ಮಾಡುವಾಗ ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದರೆ ಯಶಸ್ಸು ಕಾಣಲು ಸಾಧ್ಯ. ಪ್ರತಿದಿನ ನಾವು ಮಾಡುವ ತಪ್ಪುಗಳನ್ನು ಪಟ್ಟಿ ಮಾಡಿಕೊಂಡು ರಾತ್ರಿ ಮಲಗುವ ಮುನ್ನ ನನ್ನಿಂದ ಆದ ಈ ತಪ್ಪುಗಳು ಮುಂದೆ ಮರುಕಳಿಸದಂತಿರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುವುದರಿಂದ ನಾವು ತಪ್ಪುಗಳನ್ನು ಮಾಡುವುದಿಲ್ಲ ಎಂದರು.

ನಮ್ಮ ಜೊತೆ ಇರುವವರು ತಪ್ಪುಗಳನ್ನು ಮಾಡಿದಲ್ಲಿ ನೇರವಾಗಿ ಅವರಿಗೆ ಹೇಳಬೇಕು. ನೀನು ಮಾಡುತ್ತಿರುವುದು ತಪ್ಪು. ಇದು ಸರಿಯಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಡಬೇಕು. ಆಗ ನಾವು ಮತ್ತು ನಮ್ಮ ಜೊತೆ ಇರುವವರು ತಪ್ಪಿನಿಂದ ಹೊರಬಂದಂತಾಗುತ್ತದೆ. ಇದನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು, ಚಂಚಲಗೊಳಿಸುವ ವಸ್ತುಗಳಿಂದ ನಾವು ದೂರವಿರಬೇಕು. ಸದಾ ನಾವು ಆನಂದ ರೂಪಿಗಳಾಗಿದ್ದಾಗ ನಮ್ಮ ಬದುಕು ಹಸನಾಗುತ್ತದೆ. ದೇವರು ಕೊಟ್ಟ ಈ ಭವ್ಯ ಜೀವನವನ್ನು ಇದ್ದುದ್ದರಲ್ಲಿ ತೃಪ್ತಿಪಟ್ಟುಕೊಂಡು ಆನಂದಮಯವಾಗಿ ಸಾಗಿಸುವ ಮೂಲಕ ಇತರರಿಗೆ ಆದರ್ಶವಾಗಿರಬೇಕು ಎಂದು ತಿಳಿಸಿದರು.

ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕಾರ್ಯದರ್ಶಿ ಚಿದಂಬರ ಎಸ್. ನಾನಾವಟೆ ಮಾತನಾಡಿ, ನಮ್ಮ ಮನಸ್ಸನ್ನು ಹತೋಟಿಗೆ ತರಬಲ್ಲ ಅಸ್ತ್ರವೆಂದರೆ ಅದುವೇ ಧ್ಯಾನ. ಚಂಚಲವಾದ ಮನಸ್ಸನ್ನು ಶಾಂತ ಸ್ವರೂಪಕ್ಕೆ ತರುವಂತಹ ಅಸ್ತ್ರವೇ ಧ್ಯಾನ. ಪ್ರತಿನಿತ್ಯ ನಮ್ಮ ಜೀವನದಲ್ಲಿ ಬೆಳಗ್ಗೆ ಮತ್ತು ರಾತ್ರಿ ಸಾಧ್ಯವಾದಷ್ಟು ಸಮಯ ಧ್ಯಾನ ಮಾಡಿದರೆ ನಮ್ಮ ಬದುಕು ಬಂಗಾರವಾಗುತ್ತದೆ. ಅನೇಕ ಆಲೋಚನೆಗಳಿಂದ ನಮ್ಮ ಮನಸ್ಸುನ್ನು ಕೇಂದ್ರೀಯ ಸ್ಥಾನಕ್ಕೆ ತರಬೇಕಾದರೆ, ನಾವು ಸಾಧಕರಾಗಬೇಕಾದರೆ ಪ್ರತಿನಿತ್ಯ ನಮ್ಮ ಜೀವನದಲ್ಲಿ ಧ್ಯಾನ ಮಾಡಬೇಕು. ಧ್ಯಾನಕ್ಕೆ ಜಾತಿ, ಮತ, ಧರ್ಮ ಯಾವುದು ಅಡ್ಡಿಯಲ್ಲ. ನಮಗೆ ಸುಖ ಕೊಡುವ ಆಸನದಲ್ಲಿ ಕುಳಿತುಕೊಂಡು ಧ್ಯಾನ ಮಾಡಿದರೆ ಸಾಕು ನಮ್ಮ ಮನಸ್ಸು ಕೇಂದ್ರೀಕೃತವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆ ಆಡಳಿತಾಧಿಕಾರಿಗಳಾದ ಕುಮಾರ್‌ಎಸ್ ನಾನಾವಟೆ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಶಿಕ್ಷಕ ಮತ್ತು ಶಿಕ್ಷಕಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!