ಹೊಸ ಇತಿಹಾಸ ಸೃಷ್ಟಿಯಿಂದ ಸಂತಸ: ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Oct 29, 2025, 01:00 AM IST
28ಕೆಎಂಎನ್‌ಡಿ-5ಎನ್‌.ಚಲುವರಾಯಸ್ವಾಮಿ | Kannada Prabha

ಸಾರಾಂಶ

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಚುನಾವಣೆ ಗೆದ್ದಾಗ ಹಿಗ್ಗುವುದು, ಸೋತಾಗ ಓಡಿಹೋಗೋದು ಎರಡೂ ತಪ್ಪು. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಜೆಡಿಎಸ್‌ನವರು ಚೇಷ್ಟೆಯನ್ನು ಬಿಟ್ಟು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಬೇಕು. ಎಂಟು ಮಂದಿ ಅವಿರೋಧ ಆಯ್ಕೆಯಾಗಿದ್ದು, ಮತ್ತೊಂದು ಸ್ಥಾನವೂ ಅವಿರೋಧವಾಗುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಂಟು ಮಂದಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿರುವುದು ಸಂತಸ ಉಂಟುಮಾಡಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಚುನಾವಣೆ ಗೆದ್ದಾಗ ಹಿಗ್ಗುವುದು, ಸೋತಾಗ ಓಡಿಹೋಗೋದು ಎರಡೂ ತಪ್ಪು. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಜೆಡಿಎಸ್‌ನವರು ಚೇಷ್ಟೆಯನ್ನು ಬಿಟ್ಟು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಬೇಕು. ಎಂಟು ಮಂದಿ ಅವಿರೋಧ ಆಯ್ಕೆಯಾಗಿದ್ದು, ಮತ್ತೊಂದು ಸ್ಥಾನವೂ ಅವಿರೋಧವಾಗುವ ಸಾಧ್ಯತೆ ಇದೆ. ಮೂರು ಸ್ಥಾನಗಳಿಗೆ ಚುನಾವಣೆ ನಡೆಯಬಹುದು ಎಂದು ಮಂಗಳವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೆಲವರು ರಾಜಕೀಯವಾಗಿ ಮಾತನಾಡುವುದು, ಟೀಕೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ನಮ್ಮ ಗೆಲುವಿಗೆ ಕಾರಣರಾದ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ನಿಜವಾದ ನಾಯಕರ ಲಕ್ಷಣ. ಕಾಂಗ್ರೆಸ್ ಅತಿ ಹೆಚ್ಚು ಸ್ಥಾನವನ್ನು ಗಳಿಸಿ ಅಧಿಕಾರಜ ಹಿಡಿದಿದೆ. ಅದಕ್ಕಾಗಿ ನಮ್ಮ ಪಕ್ಷ ಎಲ್ಲರಿಗೂ ಅವಕಾಶ ಕೊಟ್ಟು ಬೆಂಬಲಿಸುತ್ತಿದೆ. ನೂರಾರು ಕೋಟಿ ರು. ಹಣವನ್ನು ರೈತರಿಗೆ ಸಾಲವಾಗಿ ನೀಡಿದೆ. ನಮ್ಮ ಸರ್ಕಾರ ಬಂದ ಮೇಲೆ ಬದಲಾವಣೆ ಬೆಳಕು ನೀಡಿದ್ದು, ಈ ಕಾರಣದಿಂದಲೇ ೧೨ ಸ್ಥಾನಗಳಲ್ಲಿ ೮ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನುಡಿದರು.ನಾವು ಜೆಡಿಎಸ್ ಮುಗಿಸೋಲ್ಲ: ಚಲುವರಾಯಸ್ವಾಮಿ

ಕನ್ನಡಪ್ರಭ ವಾರ್ತೆ ಮಂಡ್ಯ

ಜೆಡಿಎಸ್ ಇಂದಿಗೂ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ. ಕೇಂದ್ರ ಉಕ್ಕಿನ ಸಚಿವರಿರುವ ಕ್ಷೇತ್ರವಿದು. ಹಾಗಾಗಿ ನಾವು ಅವರನ್ನು ಟೀಕಿಸುವುದೂ ಇಲ್ಲ, ಲಘುವಾಗಿ ಮಾತನಾಡುವುದೂ ಇಲ್ಲ. ನಾವು ಜೆಡಿಎಸ್‌ನ್ನು ಮುಗಿಸುವುದೂ ಇಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಗಿ ಹೇಳಿದರು.

ನಾನು ಜೆಡಿಎಸ್‌ನಲ್ಲಿದ್ದಾಗಲೂ ನೂರಾರು ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೆ. ಕಾಂಗ್ರೆಸ್ ಈಗ ನನಗೆ ಹೆಚ್ಚಿನ ಜವಾಬ್ದಾರಿ ಕೊಟ್ಟಿದೆ. ನಾವು ಮತ್ತು ನಮ್ಮ ಪಕ್ಷ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಜಿಲ್ಲೆಯ ಅಭಿವೃದ್ಧಿ ಶ್ರಮಿಸುತ್ತಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಮ್ಮೆ ಜೆಡಿಎಸ್ ಗೆದ್ದು ನಾವೇನಾದರೂ ಈ ಪರಿಸ್ಥಿತಿಯಲ್ಲಿದ್ದಿದ್ದರೆ ನಾವೆಲ್ಲರೂ ಒಂದು ತಿಂಗಳು ಊರು ಬಿಡಬೇಕಿತ್ತು. ಆ ಮಟ್ಟಿಗೆ ಅವರ ಕಾರ್ಯಕರ್ತರು ಟೀಕಿಸುತ್ತಿದ್ದರು. ನಾವೆಂದಿಗೂ ಆ ಕೆಲಸವನ್ನು ಮಾಡುವುದಿಲ್ಲ. ಚುನಾವಣೆಯನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸುತ್ತೇವೆ ಎಂದಷ್ಟೇ ಹೇಳಿದರು.

ನಿಮ್ಮನ್ನೇ ಮುಗಿಸುತ್ತೆ:

ಇಪ್ಪತ್ತು ವರ್ಷದ ಹಿಂದೆ ಜೆಡಿಎಸ್ ಬಿಜೆಪಿ ಜೊತೆ ಸೇರಿದ್ದಾಗ ದೇವೇಗೌಡರು ಒಂದು ಮಾತು ಹೇಳಿದ್ದರು. ನೀನು ಮತ್ತು ನಿನ್ನ ಸ್ನೇಹಿತರು ಬಿಜೆಪಿ ಜೊತೆ ಹೋಗಿದ್ದೀರಾ. ಯಾವುದೇ ಕಾರಣಕ್ಕೂ ನೀವು ಸಕ್ಸಸ್ ಆಗೋಲ್ಲ. ಬಿಜೆಪಿಯವರು ನಿಮ್ಮನ್ನ ಮುಗಿಸುತ್ತಾರೆ ಎಂದಿದ್ದರು. ಇದೀಗ ಕುಮಾರಸ್ವಾಮಿ ಈಗ ಕೇಂದ್ರ ಮಂತ್ರಿ ಆಗಿರುವುದರಿಂದ ಬಿಜೆಪಿಯೊಂದಿಗೆ ಮೈತ್ರಿ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಆದರೆ, ಜನತಾ ಪರಿವಾರ ಹುಟ್ಟಿನಿಂದ ಇಲ್ಲಿಯವರೆಗೆ ಯಾರೊಂದಿಗೇ ಅಧಿಕಾರ ಆರಂಭಿಸಿದರೂ ಮುಂದಿನ ಚುನಾವಣೆಯನ್ನು ಅವರೊಂದಿಗೆ ಮಾಡಿಲ್ಲ. ೨೦೨೮ ಕ್ಕೆ ಬಿಜೆಪಿ-ಜೆಡಿಎಸ್ ಸ್ನೇಹ ಇರುತ್ತಾ ನೋಡೋಣ ಎಂದು ಕುಟುಕಿದರು.

ಗೊಂದಲವಿಲ್ಲದೆ ತೀರ್ಮಾನ:

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್‌ಗೆ ಶಾಸಕರು ಎಷ್ಟು ಮುಖ್ಯವೋ, ಹೈಕಮಾಂಡ್ ಕೂಡ ಅಷ್ಟೇ ಮುಖ್ಯ. ಸಂಪುಟ ಬದಲಾವಣೆ ಅಥವಾ ನಾಯಕತ್ವ ಬದಲಾವಣೆಯಾದರೂ ಯಾವುದೇ ಗೊಂದಲವಿಲ್ಲದೆ ಒಳ್ಳೆಯ ರೀತಿಯಲ್ಲಿ ತೀರ್ಮಾನ ಆಗಲಿದೆ ಎಂದು ಪರೋಕ್ಷವಾಗಿ ನವೆಂಬರ್ ಕ್ರಾಂತಿಯ ಬಗ್ಗೆ ಸುಳಿವು ನೀಡಿದರು.

ಪರಮೇಶ್ವರ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು, ಬಹಳ ಹಿರಿಯರಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತು ನಮ್ಮೊಂದಿಗೆ ಹೈಕಮಾಂಡ್ ಮಾತನಾಡಿಲ್ಲ. ನಾನು ಅದರ ಬಗ್ಗೆ ಹೇಳೋಕೆ ಆಗೋಲ್ಲ. ಬಿಹಾರ ಚುನಾವಣೆ ಮುಗಿದ ಬಳಿಕ ಎಲ್ಲವನ್ನು ಚರ್ಚೆ ಮಾಡುತ್ತಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ.1ರಿಂದ ಭೂರಹಿತರಿಂದ ಹೋರಾಟಕ್ಕೆ ನಿರ್ಣಯ
ಚಿನ್ನಕ್ಕಿಂತ ಆರೋಗ್ಯ, ನೆಮ್ಮದಿ ಮುಖ್ಯ: ಮಹಂತೇಶ್‌