ಸಾಮಾನ್ಯ ಸಭೆ । ಅಭಿವೃದ್ಧಿಗೆ ₹100 ಕೋಟಿ ನೀಡಲು ಸದಸ್ಯರ ಒತ್ತಾಯ
ಹರಪನಹಳ್ಳಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಪುರಸಭಾ ಸದಸ್ಯರು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟುಹಿಡಿದರು.
ಸಾಮಾನ್ಯ ಸಭೆಯ ಅಜೆಂಡದಲ್ಲಿನ ವಿಷಯ ಓದುತ್ತಾ ಹೋದಾಗ ಕೆಕೆಆರ್ ಡಿಬಿಯಲ್ಲಿ ಪಟ್ಟಣದ ಮೇಗಳಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ₹15 ಲಕ್ಷ ಅನುದಾನ ಬಂದಿರುವ ಬಗ್ಗೆ ಪ್ರಸ್ತಾಪಿಸಿದಾಗ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಪಟ್ಟಣದಲ್ಲಿ ನಿಮಗೆ 6 ವರೆ ಸಾವಿರ ಮತ ಲೀಡ್ ಕೊಟ್ಟಿದ್ದೇವೆ, ಪಟ್ಟಣಕ್ಕೆ ಅನುದಾನ ಕಡಿಮೆಯಾಗುತ್ತದೆ ಎಂದರು.ಅದಕ್ಕೆ ಅಬ್ದುಲ್ ರಹಿಮಾನ್, ಎಚ್.ಎಂ. ಅಶೋಕ, ಉದ್ದಾರ ಗಣೇಶ, ಲಾಟಿದಾದಾಪೀರ, ಗೊಂಗಡಿ ನಾಗರಾಜ ಮುಂತಾದವರು ಪಟ್ಟಣದ ಅಭಿವೃದ್ಧಿಗೆ ₹100 ಕೋಟಿ ಕೊಡಿ ಎಂದು ಬಲವಾಗಿ ಪಕ್ಷಭೇದ ಮರೆತು ವಾದಿಸಿದರು.
ಎಂ.ವಿ. ಅಂಜಿನಪ್ಪ ನಿಮ್ಮದಿನ್ನು 3 ವರ್ಷವಿದೆ, ನಮ್ಮದು ಇನ್ನು 9 ತಿಂಗಳು ಅವಧಿ ಇದೆ, ಪಟ್ಟಣಕ್ಕೆ ನೂರು ಕೋಟಿ ಅನುದಾನ ಕೊಡಿ ಎಂದು ಶಾಸಕರಲ್ಲಿ ಕೋರಿದರು.
ಪಟ್ಟಣದ ಪೂರ್ವಚಾರಿ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂದು ಸದಸ್ಯ ಕಿರಣ್ ಶಾನ್ಬಾಗ್ ಆರೋಪಿಸಿದರು.
ಪಟ್ಟಣದ ಅಭಿವೃದ್ದಿಗೆ ರೂಪಿಸಿರುವ ಮಾಸ್ಟರ್ ಪ್ಲಾನ್ ಅನುಷ್ಠಾನ ವಿಳಂಬವಾಗುತ್ತಿದೆ. ಹೀಗಾದರೆ ಧರಣಿ ಸತ್ಯಾಗ್ರಹ ನಡೆಸುತ್ತೇನೆ ಎಂದು ಹರಾಳು ಅಶೋಕ ಹೇಳಿದರು.
ಹರಪನಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ₹43.36 ಕೋಟಿ ಅನುದಾನಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ತಿಳಿಸಿದರು.