ಕೊಡಗಿನಲ್ಲೂ ಫೈನಾನ್ಸರ್‌ಗಳ ಕಿರುಕುಳ: ಊರು ತೊರೆದ ನಾಗರಿಕರು

KannadaprabhaNewsNetwork |  
Published : Jan 23, 2025, 12:46 AM ISTUpdated : Jan 23, 2025, 12:47 AM IST
ಚಿತ್ರ : 22ಎಂಡಿಕೆ6 : ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಖಾಸಗಿ ಹಣಕಾಸು ಸಂಸ್ಥೆ ಕಿರುಕುಳಕ್ಕೆ ಒಳಗಾದವರ ಬಗ್ಗೆ ಗ್ರಾಪಂ ಅಧ್ಯಕ್ಷರು‌ ಮಾಹಿತಿ ನೀಡಿದರು. | Kannada Prabha

ಸಾರಾಂಶ

ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರು ಸಾಲ ಮರುಪಾವತಿ ಸಾಧ್ಯವಾಗದೆ ಫೈನಾನ್ಸರ್‌ಗಳ ಕಿರುಕುಳದಿಂದ ಊರು ಬಿಟ್ಟ ಪ್ರಕರಣ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಖಾಸಗಿ ಹಣಕಾಸು ಸಂಸ್ಥೆಗಳ ಕಿರುಕುಳದಿಂದ ರಾಮನಗರ ತಾಲೂಕು ತಿಮ್ಮಯ್ಯನದೊಡ್ಡಿ ಗ್ರಾಮಸ್ಥರು ಊರು ಬಿಟ್ಟ ಆತಂಕಕಾರಿ ಬೆಳವಣಿಗೆ ಕೊಡಗು ಜಿಲ್ಲೆಯಲ್ಲೂ ನಡೆದಿರುವುದು ಬೆ‍ಳಕಿಗೆ ಬಂದಿದೆ.

ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರು ಸಾಲ ಮರುಪಾವತಿ ಸಾಧ್ಯವಾಗದೆ ಫೈನಾನ್ಸರ್‌ಗಳ ಕಿರುಕುಳದಿಂದ ಊರು ಬಿಟ್ಟ ಪ್ರಕರಣ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಮೀನುಕೊಲ್ಲಿ ಹಾಡಿ, ದಾಸವಾಳ ಪೈಸಾರಿ, ಬೆಳ್ಳಿ ಕಾಲನಿ ಈ ಭಾಗಗಳಲ್ಲಿ ಹಲವಾರು ಜನ ಕೂಲಿ ಕಾರ್ಮಿಕರಿದ್ದಾರೆ. ಇಲ್ಲಿನ ಕೆಲವು ನಿವಾಸಿಗಳು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದೆ ಊರು ಬಿಟ್ಟಿದ್ದಾರೆ ಎಂದು ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್. ವಿಶ್ವ ತಿಳಿಸಿದ್ದಾರೆ.

ಸ್ಥಳೀಯ ಸಹಕಾರ ಸಂಘಗಳಿಂದ ಸಾಲ ನೀಡುವಾಗ ಕನಿಷ್ಠ ಮೂರು ಮಂದಿಯ ಜಾಮೀನು ಪಡೆದು ಸಾಲ ನೀಡಲಾಗುತ್ತದೆ. ಆದರೆ ಖಾಸಗಿ ಹಣಕಾಸು ಸಂಸ್ಥೆಗಳು ಸಾಲಗಾರರು ಕೇವಲ ಆಧಾರ್ ಕಾರ್ಡ್ ಆಧಾರವಾಗಿರಿಸಿ ಲಕ್ಷಗಟ್ಟಲೆ ಹಣ ಸಾಲ ನೀಡಿದ್ದು, ಇದೇ ರೀತಿ ಹಲವು ಸಂಸ್ಥೆಗಳಿಂದ ಸಾಲ‌ ಪಡೆದವರು ಇದೀಗ ಮರುಪಾವತಿ ಸಾಧ್ಯವಾಗದೆ ಊರು ಬಿಟ್ಟಿದ್ದಾರೆ.

ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಿ ನೊಂದವರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ತಾಲೂಕು ದಂಡಾಧಿಕಾರಿಗಳಿಗೆ ಗ್ರಾ.ಪಂ. ಅಧ್ಯಕ್ಷ ಸಿ.ಎಲ್.ವಿಶ್ವ, ಉಪಾಧ್ಯಕ್ಷೆ ಕುಸುಮಾ, ಸದಸ್ಯೆ ಸಮೀರಾ, ಜಾಜಿ ತಮ್ಮಯ್ಯ ಮನವಿ ಸಲ್ಲಿಸಿದರು.

ವಿವಿಧ ಖಾಸಗಿ ಫೈನಾನ್ಸರ್‌ಗಳು ಗ್ರಾಮ ವ್ಯಾಪ್ತಿಯಲ್ಲಿ ಕೂಲಿ‌ ಕಾರ್ಮಿಕ ಮಹಿಳೆಯರಿಗೆ ಲಕ್ಷ ಲಕ್ಷ ರು. ಸಾಲ ನೀಡಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಸಾಲ ಪಾವತಿಸದವರ ಮನೆಗಳಿಗೆ ಹಗಲು ರಾತ್ರಿ ಎನ್ನದೆ ದಾಳಿ ಮಾಡಿ ಸಾಲ ಪಾವತಿಸಲು ಒತ್ತಡ ಹೇರುತ್ತಿದ್ದಾರೆ. ಇದರಿಂದ ಒಂದಿಬ್ಬರು ಮಹಿಳೆಯರು ಆತ್ಮಹತ್ಯೆಗೆ ಕೂಡ ಶ್ರಮಿಸಿ ಅಕ್ಕಪಕ್ಕದವರ ಸಮಯ ಪ್ರಜ್ಞೆ ಯಿಂದ ಬದುಕುಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಿರುಕುಳದಿಂದ ನೊಂದ 10 ಕ್ಕೂ ಅಧಿಕ ಮಹಿಳೆಯರು ರಾಜ್ಯವನ್ನೇ ತೊರೆದು ನೆರೆ ರಾಜ್ಯಕ್ಕೆ‌ ಕೆಲಸಕ್ಕೆ ತೆರಳಿದ್ದಾರೆ. ಮನೆ ತೊರೆದ ಮಹಿಳೆಯರ‌ ಪತಿಯಂದಿರು, ಮಕ್ಕಳು ತೀವ್ರ ಅನಾನುಕೂಲ ಹಾಗೂ ಅವಮಾನಕ್ಕೆ‌ ಒಳಗಾಗಿದ್ದಾರೆ. ಕೆಲವು ಮಹಿಳೆಯರು ಸಾಲ‌ ನೀಡಿದವರಿಗೆ ಹೆದರಿ ಅರಣ್ಯ ಹಾಗೂ ತೋಟದಲ್ಲೇ ಹೆಚ್ಚಿನ ಸಮಯ ಕಳೆಯುವಂತಾಗಿದೆ ಎಂದು ಅವರು ವಿವರಿಸಿದ್ದಾರೆ.

ಹಣಕಾಸು ಸಂಸ್ಥೆಯವರು ಸಾಲ ವಸೂಲಾತಿಗೆ ತಡರಾತ್ರಿ, ಮುಂಜಾನೆ ಎನ್ನದೆ ಮನೆಗೆ ಬರುತ್ತಿದ್ದು ಇದರಿಂದ ನಮಗೆ ತೀವ್ರ ತೊಂದರೆ ಉಂಟಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಸಮಯಕ್ಕೆ ಸರಿಯಾಗಿ ಸಾಲದ ಕಂತು ಪಾವತಿಸಲು ಸಾಧ್ಯವಾಗದೆ ಕಾಲವಕಾಶ ಕೇಳಿದರೂ ನೀಡದೆ ಸತಾಯಿಸುತ್ತಾರೆ. ಇದರಿಂದ ಮನೆಯಲ್ಲಿ ಅಡುಗೆ ಮಾಡಲು, ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮದ ಸುಮಿತ್ರಾ ಹಾಗೂ‌ ಮಣಿ ಅಳಲು ತೋಡಿಕೊಂಡಿದ್ದಾರೆ.

ಕೂಡಲೆ ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ‌ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಕ್ಕೆ ಮುಂದಾಗಬೇಕಿದೆ ಎಂದು ಗ್ರಾ.ಪಂ. ಅದ್ಯಕ್ಷ ಸಿ.ಎಲ್.ವಿಶ್ವ ಒತ್ತಾಯಿಸಿದ್ದಾರೆ.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು