)
ಕೊಟ್ಟೂರು: ಜೆಡಿಎಸ್‌ನಿಂದ 12 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಪದೇಪದೇ ಹೇಳುವ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ಕೇವಲ ಅವರ ಭ್ರಮೆ ಎಂದು ಹಗರಿಬೊಮ್ಮನಹಳ್ಳಿ ಜೆಡಿಎಸ್ ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಹಿರಿಯ ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಯಾವುದೇ ಶಾಸಕರು ಪಕ್ಷ ತೊರೆಯುವ ಸಾಧ್ಯತೆ ಇಲ್ಲವೇ ಇಲ್ಲ. ನಮ್ಮ ನಾಯಕ ಕುಮಾರಸ್ವಾಮಿ ಸದಾ ನಮ್ಮ ಬೇಕು- ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದಾರೆ. ಅವರಿಂದ ಯಾವುದೇ ಕಾರಣಕ್ಕೂ ದೂರವಾಗುವ ಮಾತೇ ಇಲ್ಲ. ನಾನಂತೂ ಕೊನೆವರೆಗೂ ಅವರೊಂದಿಗೆ ಇರುತ್ತೇನೆ ಎಂದು ಅವರು ಸ್ಪಷ್ಟ ಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಸರ್ಕಾರದಿಂದ ಪ್ರತಿ ಕ್ಷೇತ್ರಕ್ಕೆ ₹10 ಕೋಟಿ ಅನುದಾನ ಬಿಡುಗಡೆ ಮಾಡಿರುವುದು ಸ್ವಾಗತ. ಆದರೆ ಈ ಅನುದಾನ ಯಾವುದಕ್ಕೂ ಉಪಯೋಗಕ್ಕೆ ಬಾರದಂತಿದೆ ಎಂದರು.ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಯಾವುದೇ ಅಪಸ್ವರ ಇಲ್ಲ. ಅಪಸ್ವರಕ್ಕೆ ಆಸ್ಪದ ಇಲ್ಲದಂತೆ ವರಿಷ್ಠರು ಸೂಕ್ತರನ್ನು ಆಯ್ಕೆ ಮಾಡುತ್ತಾರೆ ಎಂದು ಅವರು ಹೇಳಿದರು.