ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದ ದಲಿತ ಆದಿಜಾಂಬವ ಸಮುದಾಯದ ಜನರಿಗೆ ನಿವೇಶನ ಕೊರತೆಯಿದ್ದು, ಸದರಿ ಗ್ರಾಮದಲ್ಲಿರುವ ಸರ್ಕಾರಿ ಜಾಗ ಸ.ನಂ 737ರಲ್ಲಿ ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದು, ಈಗ ಶೆಡ್ ನನಗೆ ಸೇರಿದ್ದು ಖಾಲಿ ಮಾಡಿ ಎಂದು ಖಾಸಗಿ ವ್ಯಕ್ತಿ ನಾಗರಾಜು ಎಂಬಾತ ನಿರಂತರ ಕಿರುಕುಳ ನೀಡುತ್ತಿದ್ದು, ಜಿಲ್ಲಾಡಳಿತ ನಮಗೆ ಆ ಜಾಗವನ್ನು ನಿವೇಶನಕ್ಕೆ ಒದಗಿಸುವ ಜತೆಗೆ ಖಾಸಗಿ ವ್ಯಕ್ತಿ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಕರ್ನಾಟಕ ರಾಜ್ಯದ ದಲಿತ ಸಂಘರ್ಷ ಸಮಿತಿ ಸಂಚಾಲಕ ನಂಜುಂಡ ಮೌರ್ಯ ದೂರಿದ್ದಾರೆ.ಪಟ್ಟಣದ ತಾಲೂಕು ಕಚೇರಿಯಲ್ಲಿ ದೌರ್ಜನ್ಯಕ್ಕೊಳದಾದವರ ಜತೆ ಉಪ ವಿಭಾಗಾಧಿಕಾರಿ ಕಚೇರಿಗೆ ಬುಧವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಮ್ಮನಗದ್ದೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ 60 ಕ್ಕೂ ಹೆಚ್ಚು ಕುಟುಂಬಗಳು ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕಾಲದಲ್ಲಿ ನೀಡಿದ 30 ಮನೆಗಳಲ್ಲೆ ವಾಸವಿದ್ದಾರೆ. ಈ ಬಗ್ಗೆ ನಿವೇಶನ ನೀಡುವಂತೆ ಜನರು ಸರ್ಕಾರ ಕೇಳಿಕೊಳ್ಳುತ್ತಿದ್ದರೂ ಸಂಬಂಧಪಟ್ಟವರಾರು ಸ್ಪಂದಿಸಿಲ್ಲ. ಈ ಹಿನ್ನೆಲೆ ಜಾಗದ ಕೊರತೆಯಿರುವ ಕಾರಣಕ್ಕೆ 50 ಜನರು ತಿಂಗಳ ಹಿಂದೆ ಗ್ರಾಮದಲ್ಲಿರುವ ಸ.ನಂ 737ರಲ್ಲಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಈ ನಡುವೆ ನಾಗರಾಜು ಎಂಬ ವ್ಯಕ್ತಿ ಈ ಜಾಗ ನಮಗೆ ಸೇರಬೇಕೆಂದು ಶೆಡ್ ಕಿತ್ತು ಹಾಕುವುದು. ಕಿರುಕುಳ ನೀಡುವುದು, ಪೊಲೀಸರ ಮೂಲಕ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಇತ್ತೀಚೆಗಷ್ಟೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಅದರಂತೆ ಡಿಸಿ ಉಪವಿಭಾಗಾಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಆದರೂ ಹನೂರು ತಾಲೂಕಿನ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳು ಏನೂ ಕ್ರಮ ಕೈಗೊಂಡಿಲ್ಲ, ಈ ಹಿನ್ನೆಲೆ ಬುಧವಾರ ಎಸಿ ಅವರ ಭೇಟಿಗೆ ನಾವೆಲ್ಲರೂ ಬಂದಿದ್ದು ಕಾರ್ಯನಿರ್ಮಿತ್ತ ಎಸಿ ಅವರು ಗುಂಡ್ಲುಪೇಟೆಗೆ ತೆರಳಿರುವುದರಿಂದ ಮನವಿ ಸಲ್ಲಿಸಿದ್ದೇವೆ, ಒಂದು ವಾರದೊಳಗೆ ಈ ಸಮಸ್ಯೆಯನ್ನು ಉಪವಿಭಾಗಾಧಿಕಾರಿಗಳು ಬಗೆಹರಿಸಿ ನ್ಯಾಯ ಸಲ್ಲಿಸಬೇಕು, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.ದೊಮ್ಮನಗದ್ದೆ ಗ್ರಾಮದ ಮರಿಯಮ್ಮ, ರಾಧ, ಕೃಷ್ಣವೇಣಿ, ಮಾದೇವಿ, ಕೃಷ್ಣವೇಣಿ, ಉಮೇಶ್, ವೇಣು ಇತರರು ಇದ್ದರು.