ಕಿರುಕುಳ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಹರಿಬಿಟ್ಟ ಗುತ್ತಿಗೆದಾರ

KannadaprabhaNewsNetwork | Published : Jun 6, 2024 12:30 AM

ಸಾರಾಂಶ

ವಿಶ್ವೇಶ್ವರಯ್ಯ ಜಲ ನಿಗಮ ಅಧಿಕಾರಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರನ್ನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಹರಿಬಿಟ್ಟ ಘಟನೆ ಪಾವಗಡ ತಾಲೂಕು ಜಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ವಿಶ್ವೇಶ್ವರಯ್ಯ ಜಲ ನಿಗಮ ಅಧಿಕಾರಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರನ್ನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಹರಿಬಿಟ್ಟ ಘಟನೆ ಪಾವಗಡ ತಾಲೂಕು ಜಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಜಿಲ್ಲೆಯ ಪಾವಗಡ ತಾಲೂಕಿನ ಜಿನ್ನೇನಹಳ್ಳಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಕಾಂಗ್ರೆಸ್ ಮುಖಂಡ ಸುಜೀತ್ ಎಂಬಾತ ವಿಡಿಯೋದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ನನ್ನ ಸಾವಿಗೆ ವಿಶ್ವೇಶ್ವರಯ್ಯ ಜಲ ನಿಗಮ ಎಂಡಿ ಸಣ್ಣಚಿತ್ತಪ್ಪ ಕಾರಣ ಎಂದು ಆರೋಪಿಸಿ ವಿಡಿಯೋ ಮಾಡಿ ಹರಿಬಿಟ್ಟಿದ್ದನು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಉಲ್ಟಾ ಹೊಡೆದಿರುವ ಗುತ್ತಿಗೆದಾರ ಸುಜೀತ್ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದು, ಅದರಲ್ಲಿ ನಾನು ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

ಆ ವಿಡಿಯೋದಲ್ಲಿ ಸಣ್ಣ ಚಿತ್ತಪ್ಪ ವಿರುದ್ಧ ಆರೋಪ ಮಾಡಿದ್ದೆ. ಆದರೆ ಇದರಲ್ಲಿ ಅವರದ್ದೇನು ತಪ್ಪಿಲ್ಲ. ಇನ್ನು ಎರಡು ಮೂರು ದಿನಗಳಲ್ಲಿ ಬಿಲ್ ಮಾಡಿಕೊಡುವುದಾಗಿ ಹೇಳಿದ್ದಾರೆ. ನೀತಿ ಸಂಹಿತೆ ಇರುವುದರಿಂದ ಬಿಲ್ ಮಾಡಿಕೊಡುವುದಕ್ಕೆ ತಡವಾಗಿದೆ ಎಂದು ಹೇಳಿದ್ದರಿಂದ ಇದನ್ನು ಇಲ್ಲಿಗೆ ನಿಲ್ಲಿಸುವುದಾಗಿ ತಿಳಿಸಿದ್ದಾರೆ.ಮೊದಲು ವಿಡಿಯೋದಲ್ಲಿ ಸುಜೀತ್ ಎಂಬ ಗುತ್ತಿಗೆದಾರ ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಎಂಡಿ ಸಣ್ಣಚಿತ್ತಪ್ಪ ರಾಜಕೀಯ ದುರುದ್ದೇಶದಿಂದ ಕಾಮಗಾರಿ‌ ಮುಗಿದು ವರ್ಷ ಕಳೆದಿದ್ದರೂ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿದ್ದ. ಅಲ್ಲದೇ ನನ್ನ ಸಾವಿಗೆ ಎಂಡಿ ಸಣ್ಣ ಚಿತ್ತಪ್ಪರೆ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದನು. ನಾನು ಎಸ್ಸಿ ಸಮುದಾಯಕ್ಕೆ ಸೇರಿದ ಕಾರಣಕ್ಕೆ ನನ್ನ ತುಳಿಯುತ್ತಿದ್ದಾರೆ. ಹೀಗಾಗಿ ಸಣ್ಣಚಿತ್ತಪ್ಪಗೆ ಗಲ್ಲು ಶಿಕ್ಷೆ ಆಗಬೇಕು ಎಂದು ವಿಡಿಯೋದಲ್ಲಿ ಹೇಳಿದ್ದರು. ಈಗ ಉಲ್ಟಾ ಹೊಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಗುತ್ತಿಗೆದಾರ ಸುಜೀತ್ ಆರೋಗ್ಯವಾಗಿದ್ದಾನೆ ಎನ್ನಲಾಗುತ್ತಿದೆ.

Share this article