ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಾಲ ವಸೂಲಿ ಮಾಡಲು ಯಾವುದೇ ಬಲವಂತದ ಕ್ರಮಗಳನ್ನು ಅನುಸರಿಸಬಾರದು. ಸಾಲ ವಸೂಲಿಗಾಗಿ ಹೊರ ವ್ಯಕ್ತಿಗಳು, ಅಪರಾಧ ಹಿನ್ನೆಲೆ ಹೊಂದಿರುವವರನ್ನು ಬಳಸಿ ಬೆದರಿಕೆ ಹಾಕಬಾರದು. ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಲೇವಾದೇವಿದಾರರು ನೀಡುತ್ತಿರುವ ಕಿರುಕುಳದಿಂದ ಸಾಲಗಾರರನ್ನು ರಕ್ಷಿಸಲು ಸರ್ಕಾರದಿಂದ ಹೊರಡಿಸಲಾಗುವ ಹೊಸ ಆಜ್ಞೆ ಹಾಗೂ ಆದೇಶಗಳನ್ನು ನಿರೀಕ್ಷಿಸಲಾಗಿದೆ. ಇದರಂತೆ ಕಿರುಕುಳ ನೀಡುವ ಮೈಕ್ರೊ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮವಹಿಸಲಿದ್ದೇವೆ ಎಂದರು. ಮೈಕ್ರೊ ಫೈನಾನ್ಸ್ ಕಂಪನಿ ಕಿರುಕುಳ ಕುರಿತ ದೂರು ಸಲ್ಲಿಸಲು ಸಹಾಯವಾಣಿ ತೆರೆಯಲಾಗಿದೆ. ನೋಂದಣಿ ಪರವಾನಗಿ ಹೊಂದಿರುವವರು ಹಾಗೂ ಇಲ್ಲದಿರುವ ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು ಇತರೆ ಸಾಲ ನೀಡುವವರ ಮೇಲೆ ನಿಗಾವಹಿಸಿದ್ದೇವೆ. ಎಲ್ಲ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಜಿಲ್ಲೆಯ ಎಲ್ಲಿಯೇ ಆಗಲಿ ಸಾಲಗಾರರಿಗೆ ಅನಾವಶ್ಯಕವಾಗಿ ತೊಂದರೆ ನೀಡುವವರ ವಿರುದ್ದ ಕ್ರಮ ವಹಿಸುತ್ತೇವೆ. ಕಂಪನಿಗಳು ನಿಯಮಾವಳಿ, ಮಾರ್ಗಸೂಚಿ ಉಲ್ಲಂಘನೆ ಮಾಡಬಾರದು ಎಂದು ಜಿಲ್ಲಾಧಿಕಾರಿಯವರು ಕಟುನಿಟ್ಟಿನ ಸೂಚನೆ ನೀಡಿದರು.
ಆರ್‌ಬಿಐ ನಿಯಮಗಳ ಪ್ರಕಾರ ನೀಡಲಾಗುವ ಸಾಲದ ಮೊತ್ತ, ವಿಧಿಸಿರುವ ಬಡ್ಡಿದರ, ಮಾಸಿಕ ಕಂತುಗಳು ಸೇರಿದಂತೆ ಎಲ್ಲ ವಿವರಗಳನ್ನು ಸ್ಥಳೀಯ ಭಾಷೆಯಲ್ಲಿ ಸಾಲ ಪಡೆದವರಿಗೆ ವಿವರಿಸಬೇಕು. ಪಾರದರ್ಶಕವಾಗಿ ಪ್ರಕ್ರಿಯೆ ಇರಬೇಕು. ಜಿಲ್ಲೆಯಲ್ಲಿ ವ್ಯಾಪಕವಾಗಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ. ಗ್ರಾಮ ಸಭೆಗಳಲ್ಲೂ ಜಾಗೃತಿ ಶಿಬಿರ ಹಮ್ಮಿಕೊಳ್ಳಲು ಸೂಚನೆ ನೀಡಿದ್ದೇವೆ. ಇಂತಹ ಕಾರ್ಯಕ್ರಮಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿ ಜನರಿಗೆ ವಾಸ್ತವ ಅಂಶಗಳನ್ನು ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಸಾಲಗಾರರಿಗೆ ಶೋಷಣೆ ಮಾಡುವಂತಿಲ್ಲ. ಸಾಲ ಕಟ್ಟುವ ಸಾಮರ್ಥ್ಯವಿಲ್ಲದಿದ್ದರೂ ಲಾಭವನ್ನಷ್ಟೇ ಕೇಂದ್ರಕರಿಸಿ ಸಾಲ ನೀಡಿ ಬಳಿಕ ಬಲವಂತದ ವಸೂಲಿಗೆ ಫೈನಾನ್ಸ್ ಕಂಪನಿಗಳು ಮುಂದಾಗಬಾರದು. ಸಾಲ ನೀಡುವ ಮುನ್ನ ಸಾಲಗಾರರ ದುಡಿಮೆ ಆದಾಯವನ್ನು ನೋಡಬೇಕು. ಸಾಲ ಪಡೆದುಕೊಂಡವರಿಗೆ ಕಿರುಕುಳ, ಅವಮಾನ, ನಿಂದನೆ ಮಾಡುವುದನ್ನು ಸಹಿಸುವುದಿಲ್ಲ. ಕಿರುಕುಳಕ್ಕೆ ಸಂಬಂಧಿಸಿದ ದೂರುಗಳು ಬಂದರೆ ನಿಯಮಾನುಸಾರ ಪ್ರಕರಣ ದಾಖಲು ಮಾಡಿ ತ್ವರಿತವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಎನ್.ಸುರೇಖ, ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಮೈಕ್ರೋಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.