ಹರಿಹರ, ಕೂಡಲ ಸಂಗಮ ಪೀಠ ಸಮಾಜದ ಎರಡು ಕಣ್ಣು: ವಚನಾನಂದ ಶ್ರೀ

KannadaprabhaNewsNetwork |  
Published : Oct 27, 2025, 12:15 AM IST
ಪೋಟೊ26ಕೆಪಿಎಲ್1: ಕೊಪ್ಪಳ ನಗರದ ರೈತರೊಬ್ಬರ ಮನೆಯಲ್ಲಿ ಹರಿಹರ ಪೀಠದ ವಚನನಾನಂದ ಸ್ವಾಮಿಗಳು ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಲಿಂಗಾಯತ ಸಮುದಾಯದ ಮಠಗಳು ಹಾಗೂ ಸ್ವಾಮಿಗಳ ಸಂಖ್ಯೆ ಹೆಚ್ಚಾದರೆ ಸಮಾಜ ಬಲವಾಗುತ್ತದೆ

ಕೊಪ್ಪಳ: ಪಂಚಮಸಾಲಿ ಸಮಾಜದ ಹರಿಹರ ಹಾಗೂ ಕೂಡಲಸಂಗಮ ಪೀಠಗಳು ಎರಡು ಕಣ್ಣುಗಳಿದ್ದಂತೆ. ನಮ್ಮಲ್ಲಿ ಯಾವುದೆ ಭಿನ್ನಾಭಿಪ್ರಾಯಗಳಿಲ್ಲ. ನಾವು ಸಮಾಜದ ಸಂಘಟನೆಗಾಗಿ, ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಹರಿಹರ ಪೀಠದ ಶ್ರೀವಚನಾನಂದ ಸ್ವಾಮಿಗಳು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜದ ರಾಜಕೀಯ ಮುಖಂಡರಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಕೂಡಲ ಸಂಗಮ ಶ್ರೀಗಳು ಹಾಗೂ ನನ್ನ ನಡುವೆ ಯಾವುದೆ ತರಹ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದ ಅವರು, ನಮ್ಮ ನಡುವೆ ಇಂಡಿಯಾ-ಪಾಕಿಸ್ತಾನದ ರೀತಿ ವಾತಾವರಣವಿದೆ ಎಂದುಕೊಂಡಿರುವುದು ತಪ್ಪು. ನಾವು ಸ್ವಾಮಿಗಳು ಶಾಂತಿ, ಜ್ಞಾನ ಮತ್ತು ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಲಿಂಗಾಯತ ಸಮುದಾಯದ ಮಠಗಳು ಹಾಗೂ ಸ್ವಾಮಿಗಳ ಸಂಖ್ಯೆ ಹೆಚ್ಚಾದರೆ ಸಮಾಜ ಬಲವಾಗುತ್ತದೆ. ಇದರಿಂದ ಮತಾಂತರಗೊಳ್ಳುವುದನ್ನು ತಡೆಯಲು ಸಹಾಯಕವಾಗಲಿವೆ. ಸಮಾಜದ ಪೀಠಗಳು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಮತ್ತಷ್ಟು ಪಂಚಮಸಾಲಿ ಪೀಠಗಳು ಸ್ಥಾಪಿತವಾದರೆ ಅದು ತಪ್ಪಲ್ಲ ಎಂದರು.

ಪ್ರಸ್ತುತ ರಾಜ್ಯದಲ್ಲಿ 4000ಕ್ಕೂ ಅಧಿಕ ಸ್ವಾಮಿಗಳು ಇದ್ದು, ಅದರಲ್ಲಿ ಲಿಂಗಾಯತ ಸಮುದಾಯದ ಸ್ವಾಮಿಗಳೇ ಹೆಚ್ಚು ಎಂದರು.

ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ವರ್ಷದ ಜಯಂತ್ಯುತ್ಸವವನ್ನು ಕೇಂದ್ರ ಸರ್ಕಾರದ ಆಶ್ರಯದಲ್ಲಿ ಆಚರಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಇದು ದೇಶದ ಹೆಮ್ಮೆಯ ಕ್ಷಣ ಎಂದರು.

ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿಯನ್ನು ಸಂಸತ್ ಭವನದ ಮುಂಭಾಗದಲ್ಲಿ ಸ್ಥಾಪನೆ ಮಾಡಲು ನಾವು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮನವಿ ಮಾಡಿದ್ದೇವು. ಆನಂತರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಮೂರ್ತಿ ಅನಾವರಣಗೊಳಿಸಿದರು ಎಂದರು.

2007 ನಂತರ ಚೆನ್ನಮ್ಮ ಜಯಂತ್ಯುತ್ಸವ ಆಚರಣೆ ನಿಂತಿತ್ತು. 2024ರಲ್ಲಿ ಸಂಸತ್ ಸಭಾಪತಿ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ ನಂತರ ಕಳೆದ ವರ್ಷ ಸಂಸತನಲ್ಲಿ ಜಯಂತ್ಯುತ್ಸವವನ್ನು ಪುನರಾರಂಭಿಸಲಾಯಿತು ಎಂದರು.

ಚೆನ್ನಮ್ಮ ಸ್ಮಾರಕ ನಾಣ್ಯ ಬಿಡುಗಡೆ ಮಾಡುವ ಮನವಿ ಮಾಡಿದ್ದೇವು, ಕೇಂದ್ರ ಸಂಸ್ಕೃತಿ ಸಚಿವಾಲಯದ ಶ್ರಮ ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರ ಸಹಕಾರದಿಂದ ಈ ಕನಸು ನನಸಾಗಿದೆ ಎಂದು ಹೇಳಿದರು.

ಕಳೆದ ಅ. 24ರಂದು ಚೆನ್ನಮ್ಮ ಜಯಂತಿ ಪ್ರಯುಕ್ತ ₹200 ಮುಖಬೆಲೆಯ ಸ್ಮಾರಕ ನಾಣ್ಯ ಬಿಡುಗಡೆಗೊಂಡಿದೆ. ಈ ಮಹತ್ವದ ನಾಣ್ಯ ಮುಂದಿನ ದಿನಗಳಲ್ಲಿ ಚಲಾವಣೆಗೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ರಾಜ್ಯ ಸಹಾಯಕ ಸಚಿವ ವಿ. ಸೋಮಣ್ಣ ಹಾಗೂ ಬಿ.ಎಲ್. ಸಂತೋಷ ಅವರಿಗೆ ಪಂಚಮಸಾಲಿ ಸಮಾಜದ ಪರವಾಗಿ ಧನ್ಯವಾದ ತಿಳಿಸಿದರು.

ಲಿಂಗಾಯತ ಪಂಚಮಸಾಲಿ ಮೀಸಲಾತಿ ಕುರಿತು ಮಾತನಾಡಿದ ಅವರು, ಕೇಂದ್ರ ಹಿಂದುಳಿದ ವರ್ಗಗಳ ಆಯೋಗವು ವರದಿ ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದಿಸಿ ಕೇಂದ್ರಕ್ಕೆ ಕಳುಹಿಸಬೇಕು. ಇದರಿಂದ ಲಿಂಗಾಯತರಿಗೆ ಶೇ. 27ರಷ್ಟು ಮೀಸಲಾತಿ ದೊರೆಯಲಿದೆ. ನಮ್ಮ ಪಂಚಮಸಾಲಿ ಸಮಾಜದ ಮಕ್ಕಳು ನೀಟ್, ಐಎಎಸ್ ಅನೇಕ ಪರೀಕ್ಷೆಗಳಲ್ಲಿ ಹೆಚ್ಚು ಅವಕಾಶ ಪಡೆಯಲಿದ್ದಾರೆ ಎಂದರು.

ಮೀಸಲಾತಿ ಅನುದಾನವಲ್ಲ, ಅದು ಸಂವಿಧಾನಿಕ ಹಕ್ಕು ಯಾವುದೇ ಸಿಎಂ ಇರಲಿ, ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು ಎಂದು ಹೇಳಿದರು.

ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ದೇವರಾಜ ಹಾಲಸಮುದ್ರ, ನಗರ ಘಟಕದ ಅಧ್ಯಕ್ಷ ಗವಿಸಿದ್ದಪ್ಪ ಡಂಬಳ ಇದ್ದರು.

PREV

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ