ಕನ್ನಡಪ್ರಭ ವಾರ್ತೆ ಸುರಪುರ
ಪರಿಸರ ಅಸಮತೋಲನದಿಂದಾಗಿ ಸಮಯಕ್ಕೆ ಸರಿಯಾಗಿ ಮಳೆ ಕೊರತೆ, ಅತಿಯಾದ ತಾಪಮಾನ, ಅಂತರ್ಜಲ ಕುಸಿತದಿಂದಾಗಿ ತೊಂದರೆ ಎದುರಿಸಬೇಕಾಗಿದೆ. ಆದ್ದರಿಂದ ಪರಿಸರ ನಾಶವಾದರೆ ಮನುಕುಲಕ್ಕೆ ಹಾನಿಯಾಗುತ್ತದೆ ಎಂದು ಜೆಎಂಎಫ್‌ಸಿ ಕೋರ್ಟಿನ ಸಿವಿಲ್ ನ್ಯಾಯಾಧೀಶರಾದ ಮಾರುತಿ ಕೆ. ಹೇಳಿದರು.ನಗರದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಅರಣ್ಯ ಹಾಗೂ ತೋಟಗಾರಿಕೆ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಟ್ಟು ಮಾತನಾಡಿದ ಅವರು, ಪರಿಸರ ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಸಸಿಗಳನ್ನು ನೆಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯನ್ನು ಕರ್ತವ್ಯದಂತೆ ನಿಭಾಯಿಸಬೇಕು. ಪರಿಸರ ಕಾಳಜಿ ಎಲ್ಲರಲ್ಲಿ ಮೂಡಬೇಕು. ಮನುಕುಲದ ಉದ್ಧಾರಕ್ಕೆ ಹಸಿರು ಪರಿಸರ ನಿರ್ಮಾಣ ಬಹಳ ಅವಶ್ಯವಾಗಿದೆ. ಹಸಿರಿನಿಂದ ಕೂಡಿದ ಪರಿಸರ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ತಿಳಿಸಿದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಸವರಾಜ್ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದರಿಂದ ಗಿಡ-ಮರಗಳನ್ನು ಬೆಳೆಸಿ, ಉಳಿಸಬೇಕು. ವಾತಾವರಣ ಶುದ್ಧವಾಗಿರಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪದೆ ಪದೇ ತಲೆದೋರುವ ಬರ ಪರಿಸ್ಥಿತಿಗೆ ಪರಿಹಾರವೆಂದರೆ, ಹೆಚ್ಚು, ಹೆಚ್ಚು ಗಿಡ-ಮರಗಳನ್ನು ಬೆಳೆಸಬೇಕು. ಅವುಗಳ ಬಗ್ಗೆ ಜನ ಸಮುದಾಯದಲ್ಲಿ ಕಾಳಜಿ ಮೂಡಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮಲ್ಲು ಮಂಗ್ಯಾಳ, ಎಜಿಪಿ ಎನ್.ಎಸ್. ಪಾಟೀಲ್, ವಕೀಲರಾದ ಬಸವರಾಜ ಕಿಲ್ಲೇದಾರ, ಮೊಹ್ಮದ್ ಹುಸೇನ್, ಜಿ.ಆರ್. ಬನ್ನಾಳ, ಬಿ.ಕೆ. ದೇಸಾಯಿ, ಮಂಜುನಾಥ ಹುದ್ದಾರ, ಆದಪ್ಪ ಹೊಸ್ಮನಿ, ಮಲ್ಲು ಬೋಯಿ, ಸಂತೋಷ ಗಾರಂಪಳ್ಳಿ, ಅಪ್ಪಣ್ಣ ಗಾಯಕವಾಡ, ಭೀಮರಾಯ ದೊಡ್ಮನಿ, ಅರಣ್ಯಾಧಿಕಾರಿ ಶರಣಪ್ಪ ಕುಂಬಾರ, ನ್ಯಾಯಾಂಗ ಇಲಾಖೆ ದಾನಪ್ಪ, ಕಾನೂನು ಸಲಹಾ ಸಮಿತಿಯ ಭೀಮರಾಯ ಸೇರಿದಂತೆ ತೋಟಗಾರಿಕೆ ಅರಣ್ಯ ಇಲಾಖೆ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿದ್ದರು.