ಹರಪನಹಳ್ಳಿ: ಸಂವೇದನಾಶೀಲ ಜೀವನಕ್ಕೆ ವೀರಶೈವ ಧರ್ಮ ಕೊಟ್ಟ ಕೊಡುಗೆ ಅಪಾರ. ಬದುಕಿನ ಉನ್ನತಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಅಡಿಪಾಯ. ಸಮೃದ್ಧ ಸದೃಢ ನಾಡು ಕಟ್ಟುವುದೇ ಧರ್ಮಪೀಠಗಳ ಗುರಿಯಾಗಿದೆ. ಸತ್ಕಾರ್ಯಗಳ ಸಾಧನೆಗೆ ಸಾಮರಸ್ಯ ಮತ್ತು ಸಂಘಟನೆ ಮುಖ್ಯವೆಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತೆಗ್ಗಿನಮಠ ಸಂಸ್ಥಾನದ ಆವರಣದಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಪ್ರಕೃತಿ ಮಾನವರನ್ನು ಸೃಷ್ಟಿಸಿದರೆ ಸಂಸ್ಕಾರ ದೇವ ಮಾನವರನ್ನು ಸೃಷ್ಟಿಸುತ್ತದೆ. ಸಾಮಾಜಿಕ ಸಂಪ್ರದಾಯಗಳು ಕೆಲವೊಮ್ಮೆ ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತವಾಗಿರುತ್ತವೆ. ಧರ್ಮ, ಸಂಸ್ಕೃತಿ, ಪರಂಪರೆ ರಕ್ಷಿಸಿ ಸುಂದರ ಸಮಾಜವನ್ನು ಕಟ್ಟಿ ಬೆಳೆಸುವುದರಲ್ಲಿ ಪೀಠ ಮಠಗಳ ಪಾತ್ರ ಬಹಳಷ್ಟು ಮಹತ್ವದ್ದಾಗಿದೆ ಎಂದರು.
ಜಗದ್ಗುರು ಪಂಚ ಪೀಠಾಧೀಶ್ವರರ ಕೃಪಾಶೀರ್ವಾದದೊಂದಿಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ನೂತನ ಪದಾಧಿಕಾರಿಗಳು ಇಂದು ಪದಗ್ರಹಣ ಮಾಡಿ ಸಮಾಜದ ಶ್ರೇಯಸ್ಸಿಗೆ ಮುಂದಾಗಿರುವುದು ಸಂತಸದ ಸಂಗತಿಯಾಗಿದೆ. ನೂತನ ಎಲ್ಲ ಪದಾಧಿಕಾರಿಗಳು ಸಾಮರಸ್ಯ ಮತ್ತು ಸಂಘಟನೆ ಹೊಂದಿ ಸತ್ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಅನುಗ್ರಹಿಸಲೆಂದು ಹೇಳಿದರು.ನೇತೃತ್ವ ವಹಿಸಿದ ಸಂಸ್ಥೆಯ ಖಜಾಂಚಿ ಮತ್ತು ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯರು ಮಾತನಾಡಿ, ಭೌತಿಕ ಜೀವನ ಸಮೃದ್ಧಗೊಂಡರೆ ಸಾಲದು. ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು. ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ನೂತನ ಪದಾಧಿಕಾರಿಗಳು ತೆಗ್ಗಿನಮಠ ಸಂಸ್ಥಾನದಲ್ಲಿ ಪದಗ್ರಹಣ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಶಿವಾಚಾರ್ಯ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಲಿಂ. ಚಂದ್ರಮೌಳೀಶ್ವರ ಶಿವಾಚಾರ್ಯರ ಆತ್ಮಕ್ಕೆ ಸಂತೋಷವನ್ನುಂಟು ಮಾಡಿದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ಮೇಲಣಗವಿ ಡಾ.ಮಲಯ ಶಾಂತಮುನಿ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ನಿಕಟಪೂರ್ವ ಗೌರವಾಧ್ಯಕ್ಷರಾಗಿದ್ದ ಎಡೆಯೂರು ರೇಣುಕ ಶಿವಾಚಾರ್ಯ ಮತ್ತು ಅಧ್ಯಕ್ಷರಾಗಿದ್ದ ಮುಕ್ತಿಮಂದಿರ ಕ್ಷೇತ್ರದ ರೇಣುಕ ಶಿವಾಚಾರ್ಯರಿಗೆ ಸಂಸ್ಥೆಯಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ, ಸಂಸ್ಥೆಯ ವಕ್ತಾರರಾದ ಎಮ್ಮಿಗನೂರು ವಾಮದೇವ ಮಹಂತ ಶಿವಾಚಾರ್ಯ, ಬೆಂಗಳೂರು ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ, ಸಂಸ್ಥೆಯ ಉಪಾಧ್ಯಕ್ಷ ನಾಗಣಸೂರು ಶ್ರೀಕಂಠ ಶಿವಾಚಾರ್ಯ ಮತ್ತು ಬಿಚಗುಂದ ಸೋಮಶೇಖರ ಶಿವಾಚಾರ್ಯರ ಸಮ್ಮುಖ ವಹಿಸಿದ್ದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ನೂತನ ಅಧ್ಯಕ್ಷ ಸಿಂದಗಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ರಂಭಾಪುರಿ ಜಗದ್ಗುರುಗಳು ಸಂಸ್ಥೆಯ ಲಾಂಛನ ಬಿಡುಗಡೆಗೊಳಿಸಿದರು. ಡಾ. ಟಿ.ಎಂ. ಚಂದ್ರಶೇಖರಯ್ಯ, ಶಂಭುಲಿಂಗಯ್ಯ ಹಿರೇಮಠ, ಎಂ.ರಾಜಶೇಖರ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಾಳೆಹೊನ್ನೂರು ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಸಂಸ್ಥೆಯ ಸಹ ಕಾರ್ಯದರ್ಶಿ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಪ್ರಾರ್ಥನೆ, ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ಧ ಶಿವಾಚಾರ್ಯ ಸ್ವಾಗತಿಸಿದರು. ಸಂಸ್ಥೆಯ ಸಹ ಕಾರ್ಯದರ್ಶಿ ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.