ಹಾರ್ಮೋಜ್ ಹಡಗಿನ ಮೇಲೆ ಕ್ಷಿಪಣಿ ದಾಳಿ: ಕನ್ನಡಿಗನ ರಕ್ಷಣೆ

KannadaprabhaNewsNetwork |  
Published : Jul 15, 2026, 02:45 AM IST
ಹಾರ್ಮೋಜ್ ಜಲಸಂಧಿ  ಹಡಗು ಮೇಲೆ ಕ್ಷಿಪಣಿ ದಾಳಿ: ರಕ್ಷಿಸಲ್ಪಟ್ಟ ೧೦ ಮಂದಿ ಭಾರತೀಯರಲ್ಲಿ ಬಿಳಿಯೂರು ನಿವಾಸಿ ರಚನ್ ಆರ್ ಕೆ  | Kannada Prabha

ಸಾರಾಂಶ

ಹಾರ್ಮೋಜ್ ಜಲಸಂಧಿಯ ಒಮಾನ್ ಕರಾವಳಿಯ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದ್ದು, ಹಡಗಿನಲ್ಲಿದ್ದವರನ್ನು ಒಮಾನ್ ನೌಕಾಪಡೆಯು ರಕ್ಷಿಸಿದೆ. ರಕ್ಷಿಸಲ್ಪಟ್ಟ ೧೦ ಭಾರತೀಯರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮ ನಿವಾಸಿ ರಚನ್ ಆರ್ ಕೆ (೨೫) ಕೂಡ ಸೇರಿದ್ದಾರೆ.

ಉಪ್ಪಿನಂಗಡಿ: ಹಾರ್ಮೋಜ್ ಜಲಸಂಧಿಯ ಒಮಾನ್ ಕರಾವಳಿಯ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದ್ದು, ಹಡಗಿನಲ್ಲಿದ್ದವರನ್ನು ಒಮಾನ್ ನೌಕಾಪಡೆಯು ರಕ್ಷಿಸಿದೆ. ರಕ್ಷಿಸಲ್ಪಟ್ಟ ೧೦ ಭಾರತೀಯರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮ ನಿವಾಸಿ ರಚನ್ ಆರ್ ಕೆ (೨೫) ಕೂಡ ಸೇರಿದ್ದಾರೆ.

ಪ್ರಸ್ತುತ ಅವರು ಒಮಾನ್‌ನಲ್ಲಿ ತಮ್ಮ ಶಿಪ್ಪಿಂಗ್ ಕಂಪನಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತರಾಗಿದ್ದು ದುಬೈಗೆ ಪ್ರಯಾಣ ಬೆಳೆಸಿರುವ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಶಿಪ್ಪಿಂಗ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ನಾವಿಕ ಪ್ರಯಾಣಿಸುತ್ತಿದ್ದ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದ ಪರಿಣಾಮ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸಿಬ್ಬಂದಿ ಜೀವ ರಕ್ಷಕ ದೋಣಿಯ ಮೂಲಕ ಹಡಗನ್ನು ತೊರೆದು ಹೊರಬಂದರು. ಬಳಿಕ ಒಮಾನ್ ನೌಕಾಪಡೆಯು ಎಲ್ಲ ಸಿಬ್ಬಂದಿಯನ್ನು ರಕ್ಷಿಸಿ ಸುರಕ್ಷಿತವಾಗಿ ತನ್ನ ನೆಲೆಗೆ ಕರೆದುಕೊಂಡು ಹೋಗಿದೆ. ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ರೋಹಿತಾಕ್ಷ ಭಾಣಬೆಟ್ಟು ಅವರ ಮೂವರು ಮಕ್ಕಳಲ್ಲಿ ಕೊನೆಯವರಾದ ರಚನ್ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ ಬಳಿಕ ಮುಂಬೈನಲ್ಲಿ ಮೆರೈನ್ ಕೋರ್ಸ್ ಪೂರ್ಣಗೊಳಿಸಿ ಹಡಗು ಸೇವೆಗೆ ಸೇರಿದ್ದರು.

ಹಡಗಿನ ಮೇಲೆ ದಾಳಿಯಾಗುವ ಬಗ್ಗೆ ಪೂರ್ವ ಮುನ್ನೆಚ್ಚರಿಕಾ ಮಾಹಿತಿ ನೀಡಲಾಗಿತ್ತು. ಅದರ ಹೊರತಾಗಿಯೂ ಓಮನ್ ಕರಾವಳಿ ತೀರದಲ್ಲಿ ಪ್ರಯಾಣ ಮುಂದುವರೆಸಿದ ಹಡಗಿನ ಮೇಲೆ ಮಧ್ಯರಾತ್ರಿ ೨.೦೫ಕ್ಕೆ ಕ್ಷಿಪಣಿ ದಾಳಿ ನಡೆಯಿತು. ಹಡಗಿನ ಇಂಜಿನ್ ವಿಭಾಗದಲ್ಲಿ ಬೆಂಕಿ ಕಾಣಿಸಿದಂತೆ ನಿದ್ರಿಸುತ್ತಿದ್ದ ನಾವೆಲ್ಲರೂ ಎಚ್ಚೆತ್ತು ಪ್ರಾಣ ರಕ್ಷಕ ದೋಣಿಯ ಮೂಲಕ ಸಮುದ್ರಕ್ಕೆ ಧುಮುಕಿದೆವು. ಈ ವೇಳೆ ನಮ್ಮ ತಂಡದ ಪುಣೆಯ ನಿವಾಸಿ ಸಹೋದ್ಯೋಗಿ ಕಣ್ಮರೆಯಾಗಿದ್ದಾರೆ. ಸಮುದ್ರಕ್ಕೆ ಧುಮುಕಿದ ನಮ್ಮೆಲ್ಲರನ್ನೂ ಒಮಾನ್ ನೌಕಾ ಪಡೆಯು ರಕ್ಷಿಸಿ ಅಗತ್ಯ ನೆರವನ್ನು ಕಲ್ಪಿಸಿದೆ. ಮಂಗಳವಾರ ನಮ್ಮನ್ನು ದುಬೈಗೆ ಕರೆದೊಯ್ಯಲಾಗುತ್ತಿದೆ ಎಂದು ಅವರು ತಮ್ಮ ತಂದೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ರಚನ್ ಅವರ ತಂದೆ ರೋಹಿತಾಕ್ಷ ಬಾಣಬೆಟ್ಟು, ''''ನನ್ನ ಮಗ ಕರ್ತವ್ಯದಲ್ಲಿದ್ದ ಹಡಗಿಗೆ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಬಂದಾಗ ಕಳವಳಕ್ಕೆ ಒಳಗಾದೆವು. ಬಳಿಕ ಮಗ ಸಂಪರ್ಕಕ್ಕೆ ಲಭಿಸಿ ಸುರಕ್ಷಿತವಾಗಿರುವ ಮಾಹಿತಿ ನೀಡಿದಾಗ ನಿರಾಳರಾದೆವು'''' ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯ ಅರ್ಥಧಾರಿಗಳಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ
ಯಕ್ಷಗಾನ ಕಲಾರಂಗದ 51ನೇ ವಾರ್ಷಿಕ ಮಹಾಸಭೆ