ಉಡುಪಿ: ಯಕ್ಷಗಾನ ಕಲೆ ಕೇವಲ ಮನೋರಂಜನೆಗೆ ಮಾತ್ರವಲ್ಲ, ಅದರಲ್ಲಿ ಜೀವನ ಪಾಠವಿದೆ. ಹೀಗಾಗಿ ಕಲೆಯ ಪೋಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಪರ್ಯಾಯ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥರು ಹೇಳಿದರು.ಅವರು ಮಂಗಳವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶಿರೂರು ಮಠದ ಆಶ್ರಯದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನಗಳ ಸಹಕಾರದಲ್ಲಿ ಮಣಿಪಾಲ ಸರಳೆಬೆಟ್ಟು ಪರ್ಕಳ ಶ್ರೀ ಮಿತ್ರ ಯಕ್ಷಗಾನ ಮಂಡಳಿ 44ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಕಲೆಯ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಬೇಕು. ಇದು ಅನ್ಯರಿಗೆ ಕಲೆಯಲ್ಲಿ ತೊಡಗಲು ಪ್ರೇರಣೆಯಾಗುತ್ತದೆ. ಕಲೆಯ ರಕ್ಷಣೆಯ ಜೊತೆಗೆ ಕಲಾವಿದರ ಬೆಳವಣಿಗೆಗೂ ಕೊಡುಗೆ ನೀಡುತ್ತಿರುವ ಶ್ರೀ ಮಿತ್ರ ಯಕ್ಷಗಾನ ಮಂಡಳಿ ಅಭಿನಂದನಾರ್ಹ ಎಂದು ಶ್ರೀಗಳು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಯಕ್ಷಗಾನ ಕಲೆ ಇಂದು ವಿಶ್ವ ವ್ಯಾಪಿಯಾಗಲು ನಿಸ್ವಾರ್ಥ ಯಕ್ಷಗಾನ ಕಲಾ ಪ್ರೇಮಿಗಳ ಸಹಕಾರವೇ ಕಾರಣವಾಗಿದೆ. ವೈದ್ಯರು, ಶಿಕ್ಷಕರು, ಇಂಜಿನಿಯರ್ ಗಳು ಸೇರಿದಂತೆ ಸುಶಿಕ್ಷಿತ ಮಂದಿ ಯಕ್ಷಗಾನ ಕಲಿತು ಈ ಕಲೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 13 ಮಂದಿ ಸಾಧಕರಿಗೆ ವಿವಿಧ ಸ್ಮಾರಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.