ಕಾವೇರಿಯ ತವರು ಜಿಲ್ಲೆ ಕೊಡಗು ಜಿಲ್ಲೆಯಲ್ಲಿಯೇ ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದ್ದು, ಶೇ.42ರಷ್ಟು ಮಳೆ ಕೊರತೆಯುಂಟಾಗುವ ಮೂಲಕ ತೀರಾ ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಕೃಷಿಗೂ ಮಳೆ ಸುರಿಯದ ಕಾರಣ ತೀವ್ರ ಹಿನ್ನೆಡೆಯುಂಟಾಗಿದೆ.
ವಿಘ್ನೇಶ್ ಎಂ. ಭೂತನಕಾಡು ಮಡಿಕೇರಿ: ಕಾವೇರಿಯ ತವರು ಜಿಲ್ಲೆ ಕೊಡಗು ಜಿಲ್ಲೆಯಲ್ಲಿಯೇ ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದ್ದು, ಶೇ.42ರಷ್ಟು ಮಳೆ ಕೊರತೆಯುಂಟಾಗುವ ಮೂಲಕ ತೀರಾ ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಕೃಷಿಗೂ ಮಳೆ ಸುರಿಯದ ಕಾರಣ ತೀವ್ರ ಹಿನ್ನೆಡೆಯುಂಟಾಗಿದೆ.
2026ರ ಜೂ. 4ರಂದು ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶಿಸಿತು. ಈ ಬಾರಿಯೂ ಖುಷಿಯಿಂದ ಬಿತ್ತನೆಗೆ ತಯಾರಾಗಿದ್ದ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೊಡಗಿನಲ್ಲಿ ಮಳೆಯಾದರೆ ಮಾತ್ರ ಮೈಸೂರು, ಮಂಡ್ಯ, ಬೆಂಗಳೂರು, ತಮಿಳುನಾಡಿಗೆ ನೀರು ಹರಿದು ಹೋಗುತ್ತದೆ. ಆದರೆ ಜುಲೈ ತಿಂಗಳು ಅರ್ಧ ಬಂದರೂ ಇನ್ನೂ ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿ ತುಂಬಿಲ್ಲ. ಇದರಿಂದ ಈ ಬಾರಿ ತೀವ್ರ ನೀರಿನ ಕೊರತೆಯುಂಟಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಾವೇರಿ ನದಿ ನೀರನ್ನು ಆಶ್ರಯಿಸಿ ಕೃಷಿ ಮಾಡುತ್ತಿದ್ದ ರಾಜ್ಯ ಹಾಗೂ ಹೊರ ರಾಜ್ಯದ ಕೃಷಿಕರಿಗೆ ಭಾರಿ ಸಂಕಷ್ಟ ಉಂಟಾಗಿದೆ. ಈ ಭಾರಿ ಉತ್ತಮ ಮುಂಗಾರು ನಿರೀಕ್ಷಿಸಲಾಗಿದ್ದರೂ ಕೂಡ ಜೂನ್ ತಿಂಗಳಲ್ಲಿ ಮಳೆ ಸುರಿದಿಲ್ಲ. ಅಲ್ಲದೆ ಜುಲೈ ಆರಂಭದಲ್ಲಿ ನಾಲ್ಕೈದು ದಿನ ಕಾಣಿಸಿಕೊಂಡ ಮಳೆ ಮತ್ತೆ ನಾಪತ್ತೆಯಾಗಿದ್ದು, ಉತ್ತಮ ಮಳೆಯಾಗಬೇಕಿದ್ದ ಕೊಡಗಿನಲ್ಲಿ ಇದೀಗ ಬಿಸಿಲಿನ ವಾತಾವರಣ ಕಾಣಸಿಕೊಳ್ಳುವ ಮೂಲಕ ಬರಗಾಲದ ಛಾಯೆ ಉಂಟಾಗಿದೆ. ಜನವರಿಯಿಂದ ಜುಲೈ ತಿಂಗಳ 14ರ ವರೆಗೆ ಜಿಲ್ಲೆಯಲ್ಲಿ 1164 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ವಾರಿ 678 ಮಿ.ಮೀ ಮಳೆಯಾಗುವ ಮೂಲಕ ಶೇ.42ರಷ್ಟು ಮಳೆ ಕೊರತೆಯುಂಟಾಗಿದೆ. ಮಡಿಕೇರಿ ತಾಲೂಕಿನಲ್ಲಿ 1292 ಮಿ.ಮೀ ಮಳೆಯಾಗಬೇಕಿದ್ದು, 825 ಮಿ.ಮೀ ಮಳೆಯಾಗುವ ಮೂಲಕ ಶೇ.31ರಷ್ಟು ಮಳೆ ಕೊರತೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 788 ಮಿ.ಮೀ ವಾಡಿಕೆ ಮಳೆ, ಆದರೆ 521 ಮಿ.ಮೀ ಮಳೆಯಾಗಿ, ಶೇ.34ರಷ್ಟು ಕೊರತೆ ಉಂಟಾಗಿದೆ.
ವಿರಾಜಪೇಟೆ ತಾಲೂಕಿನಲ್ಲಿ 1149 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, ಈ ಬಾರಿ 646 ಮಿ.ಮೀ ಮಾತ್ರ ಮಳೆಯಾಗಿದ್ದು, ಶೇ.44ರಷ್ಟು ಮಳೆ ಕೊರತೆಯಾಗಿದೆ. ಕುಶಾಲನಗರ ತಾಲೂಕಿನಲ್ಲಿ 412 ಮಿ.ಮೀ ಮಳೆಯಾಗಬೇಕಿದ್ದು, 298 ಮಿ.ಮೀ ಮಾತ್ರ ಮಳೆಯಾಗಿ ಶೇ.28ರಷ್ಟು ಕೊರತೆ ಕಂಡುಬಂದಿದೆ. ಪೊನ್ನಂಪೇಟೆ ತಾಲೂಕಿನಲ್ಲಿ 1068 ಮಿ.ಮೀ ಮಳೆಯಾಗಬೇಕಿದ್ದು, 712 ಮಿ.ಮೀ ಮಾತ್ರ ಮಳೆಯಾಗಿದ್ದು, ಶೇ. 30ರಷ್ಟು ಮಳೆ ಕೊರತೆ ಕಂಡುಬಂದಿದೆ.
ಭಾಗಮಂಡಲ ಹೋಬಳಿಯಲ್ಲಿ ಶೇ.75, ಸಂಪಾಜೆ ಶೇ.62, ಶನಿವಾರಸಂತೆ 76, ಶ್ರೀಮಂಗಲ 75, ಮಡಿಕೇರಿ ಶೇ. 59, ಸೋಮವಾರಪೇಟೆ ಶೇ.76, ಕೊಡ್ಲಿಪೇಟೆ ಶೇ.65, ವಿರಾಜಪೇಟೆ ಶೇ.82, ಪೊನ್ನಂಪೇಟೆ ಶೇ.73 ಮಳೆ ಕೊರತೆಯನ್ನು ಎದುರಿಸುತ್ತಿದೆ. ಸಸಿ ಮಡಿ ಕಾರ್ಯ ಮುಂದಕ್ಕೆ: ಸಾಮಾನ್ಯವಾಗಿ ಜಿಲ್ಲೆಯಲ್ಲಿ ಜೂನ್ ತಿಂಗಳ ಅಂತ್ಯಕ್ಕೆ ಭತ್ತದ ಸಸಿ ಮಡಿ ಸಿದ್ಧತಾ ಕಾರ್ಯ ಮುಗಿದು, ಜುಲೈ ತಿಂಗಳಲ್ಲಿ ನಾಟಿ ಕಾರ್ಯ ಮಾಡಲಾಗುತ್ತಿದ್ದು, ಆದರೆ ಇದೀಗ ಭಾರಿ ಮಳೆ ಕೊರತೆ ಎದುರಿಸುತ್ತಿರುವ ಕೊಡಗು ಜಿಲ್ಲೆಯಲ್ಲಿ ಶೇ.20ರಷ್ಟು ಮಾತ್ರ ಸಸಿ ಮಡಿ ಸಿದ್ಧತಾ ಕಾರ್ಯ ನಡೆದಿದೆ. ಇನ್ನೂ 20 ದಿನ ಮುಂದಕ್ಕೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಇರುವುದರಿಂದ ಭತ್ತದ ಗದ್ದೆಗಳು ಒಣಗಿದೆ. ಇದರಿಂದ ನಾಟಿ ಮಾಡಲು ಕೂಡ ಕಷ್ಟದ ಪರಿಸ್ಥಿತಿ ಉಂಟಾಗಿದೆ. ಮಳೆ ಇಲ್ಲದ ಪರಿಣಾಮ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಹಾಗೂ ಕಾಳು ಮೆಣಸು ಕೃಷಿಗೆ ಸಾಕಷ್ಟು ಸಮಸ್ಯೆಯುಂಟಾಗಿದೆ. ಮುಂದೆ ಫಸಲಿನ ಅವಧಿಯಲ್ಲಿ ಅಕಾಲಿಕ ಮಳೆ ಆಗುವ ಸಾಧ್ಯತೆಯಿದೆ ಎಂದು ಬೆಳೆಗಾರರು ತಮ್ಮ ಆತಂಕ ವ್ಯಕ್ತ ಪಡಿಸಿದ್ದಾರೆ.
ತಾಲೂಕು ಮಳೆ ಕೊರತೆ ವಿವರ: ಮಡಿಕೇರಿ ಹೋಬಳಿ ಶೇ.31, ಸೋಮವಾರಪೇಟೆ ಶೇ.33, ವಿರಾಜಪೇಟೆ ಶೇ.43
ಕುಶಾಲನಗರ ಶೇ.27, ಪೊನ್ನಂಪೇಟೆ ಶೇ.33.ಜಿಲ್ಲೆಯಲ್ಲಿ ಜುಲೈ ತಿಂಗಳ 14 ರ ವರೆಗೆ ಶೇ.42ರಷ್ಟು ಮಳೆ ಕೊರತೆಯುಂಟಾಗಿದೆ. ಜೂನ್ ತಿಂಗಳಲ್ಲಿ ತೀರಾ ಮಳೆ ಕೊರತೆಯಿತ್ತು. ಜುಲೈ ತಿಂಗಳ ಆರಂಭದಲ್ಲಿ ಒಂದಷ್ಟು ಮಳೆಯಾಗಿತ್ತು. ರೈತರು ಇನ್ನೇನು ಭತ್ತದ ಸಸಿಮಡಿ ಸಿದ್ಧಪಡಿಸಿಕೊಳ್ಳಬೇಕೆಂಬ ಸಿದ್ಧತೆಯಲ್ಲಿದ್ದರು. ಆದರೆ ಇದೀಗ ಮತ್ತೆ ಮಳೆ ಕೊರತೆಯುಂಟಾಗಿ ಬಿಸಿಲಿನ ವಾತಾವರಣ ಕಂಡುಬಂದಿದೆ. ಇದರಿಂದ ಸಸಿಮಡಿ ಸಿದ್ಧತಾ ಕಾರ್ಯ 20 ದಿನ ಮುಂದಕ್ಕೆ ಹೋಗಿದೆ. ಮಧ್ಯಾವಧಿ ಹಾಗೂ ಅಲ್ಪಾವಧಿ ತಳಿ ಬೆಳೆಯಲು ರೈತರಿಗೆ ಸಲಹೆ ನೀಡಿದ್ದೇವೆ.
-ಚಂದ್ರಶೇಖರ್, ಜಂಟಿ ನಿರ್ದೇಶಕರು ಕೃಷಿ ಇಲಾಖೆ ಮಡಿಕೇರಿ
ಹಾರಂಗಿ ಭರ್ತಿಗೆ 12 ಅಡಿ ಬೇಕು: ಕೊಡಗು ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿ ಭರ್ತಿಯಾಗಲು ಇನ್ನೂ 12 ಅಡಿಗಳಷ್ಟು ನೀರಿನ ಅಗತ್ಯತೆಯಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2847 ಅಡಿಗಳು. ಕಳೆದ ವರ್ಷ ಇದೇ ದಿನ 2853 ಅಡಿಗಳಷ್ಟು ನೀರಿತ್ತು. ಮಳೆ ಇಳಿಮುಖವಾದ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರಿನ ಹರಿವು ಕೂಡ ಕಡಿಮೆಯಾಗಿದ್ದು, ಹಾರಂಗಿಗೆ ಒಳಹರಿವು ಪ್ರಮಾಣ ತೀವ್ರ ಕುಸಿದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.