ಮಂಗಳೂರು : ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೇರಿ ದುಂಡಾವರ್ತನೆ ತೋರಿದ 18 ಶಾಸಕರ ವರ್ತನೆ ಇಡೀ ರಾಜ್ಯದ ಜನರಿಗೆ ಅಸಹ್ಯ ಮೂಡಿಸಿದೆ. ರಾಜ್ಯದ ಘನತೆಗೆ ಕಪ್ಪುಚುಕ್ಕೆ ತರುವುದನ್ನು ಸಹಿಸಲಾಗದು. ಮುಂದೆ ಇಂಥ ವರ್ತನೆ ಮುಂದುವರಿದರೆ ಲಭ್ಯವಿರುವ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕಾದೀತು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಇದೆಯಾದರೂ ಅದಕ್ಕೆ ರೀತಿ ನೀತಿ ಇದೆ. ಸದನದ ಬಾವಿಯನ್ನು ದಾಟಿ ಸ್ಪೀಕರ್ ಪೀಠಕ್ಕೇರಿ ರಾಜ್ಯದ ಘನತೆಗೆ ಕಪ್ಪುಚುಕ್ಕೆ ತರುವುದನ್ನು ಸಹಿಸಲಾಗುತ್ತದೆಯೇ? ಇಂಥ ವರ್ತನೆಗಳಿಗೆ ಫುಲ್‌ಸ್ಟಾಪ್ ಬೇಡವೇ? ಹೀಗೆ ವರ್ತಿಸಿದ ಶಾಸಕರನ್ನು ಯು.ಟಿ. ಖಾದರ್ ಕ್ಷಮಿಸಬಹುದು, ಆದರೆ ಸಂವಿಧಾನಾತ್ಮಕ ಪೀಠ ಸಹಿಸಲಾಗದು. ಸಸ್ಪೆಂಡ್ ಆದ ಶಾಸಕರು ನನ್ನ ಮಿತ್ರರೇ ಆದರೂ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಯಿತು. ಮುಂದೆ ಇಂಥ ಕೃತ್ಯ ನಡೆಯಬಾರದು, ನಡೆದರೆ ಇನ್ನಷ್ಟು ಕಠಿಣ ತೀರ್ಮಾನಗಳನ್ನು ಕೈಗೊಳ್ಳಬೇಕಾದೀತು ಎಂದು ಎಚ್ಚರಿಸಿದರು.
ಹಿಂದಿನವರು ಕಠಿಣ ಕ್ರಮ ಕೈಗೊಂಡಿಲ್ಲ:
ಸದನಕ್ಕಿಂತ ದೊಡ್ಡ ಸಂವಿಧಾನಾತ್ಮಕ ಸಂಸ್ಥೆ ಯಾವುದೂ ಇಲ್ಲ. ಸದನದೊಳಗೆ ಸ್ಪೀಕರ್‌ಗಿಂತ ಯಾರೂ ದೊಡ್ಡವರಲ್ಲ. ಹಿಂದಿನ ಸ್ಪೀಕರ್‌ಗಳು ಕಠಿಣ ಕ್ರಮಗಳನ್ನು ಕೈಗೊಂಡಿದ್ದಿದ್ದರೆ ಇಂಥ ವರ್ತನೆಗೆ ಕಡಿವಾಣ ಬೀಳುತ್ತಿತ್ತು. ಆದರೆ ಅವರಿಗೆ ಆ ಧೈರ್ಯ ಇರಲಿಲ್ಲ. ನನಗೆ ಧೈರ್ಯ ಇದೆ, ಕಠಿಣ ಕ್ರಮ ಜಾರಿ ಮಾಡಿದ್ದೇನೆ. ಈ ತೀರ್ಮಾನ ಸರಿಯಾಗಿದೆ ಎಂಬ ಮಾತು ಜನರಿಂದ ಕೇಳಿಬರುತ್ತಿದೆ ಎಂದು ಖಾದರ್ ಹೇಳಿದರು.
ಶಾಸಕರಿಗೆ ತಪ್ಪಿನ ಅರಿವಾಗಲಿ:
ಹಿಂದೆ ಇಂತಹ ವರ್ತನೆ ತೋರಿಸಿದರೆ ಒಂದು ದಿನದ ಮಟ್ಟಿಗೆ ಅಥವಾ ಸದನ ಮುಗಿಯುವವರೆಗೆ ಅಮಾನತು ಮಾಡಲಾಗುತ್ತಿತ್ತು. ಆದರೆ ತಪ್ಪು ಮಾಡಿದವರಿಗೆ ತಪ್ಪಿನ ಅರಿವಾಗಬೇಕು. ಟಿವಿಯಲ್ಲಿ ತಮ್ಮದೇ ವರ್ತನೆಯನ್ನು ಮತ್ತೊಮ್ಮೆ ನೋಡಲಿ, ತಪ್ಪನ್ನು ತಿದ್ದಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.
ಸಾಮಾನ್ಯವಾಗಿ ಅಧಿವೇಶನದ ಕೊನೆಯ ದಿನ ಧನ ವಿನಿಯೋಗದ ಬಿಲ್ ಮಂಜೂರು ಮಾಡಲಾಗುತ್ತದೆ. ಈ ಬಿಲ್ ಪಾಸ್ ಆಗದೆ ಖಜಾನೆಯಿಂದ ಒಂದು ರು.ನ್ನೂ ತೆಗೆಯಲಾಗದು. ಹಾಗಾಗಿ ಈ ಬಿಲ್‌ಗೆ ಇದುವರೆಗೂ ಯಾರೂ ಆಕ್ಷೇಪ ಮಾಡುತ್ತಿರಲಿಲ್ಲ. ಆದರೆ ಹನಿಟ್ರ್ಯಾಪ್ ಕುರಿತು ಹಿಂದಿನ ದಿನವೂ ಚರ್ಚೆ ನಡೆದು ಗೃಹ ಸಚಿವರು ಉತ್ತರ ನೀಡಿದ್ದಾರೆ. ಅಧಿವೇಶನದ ಕೊನೆ ದಿನವೂ ಮತ್ತೆ ಚರ್ಚೆಯಾಗಿ ಸ್ವತಃ ಸಿಎಂ ಉತ್ತರ ನೀಡಿದ್ದಾರೆ. ಅದರ ಬಳಿಕ ಧನ ವಿನಿಯೋಗ ಬಿಲ್ ಪಾಸ್ ಮಾಡುವಾಗ ಗಲಾಟೆ ಮಾಡುವುದು ಸರಿಯೇ? ಎಂದು ಖಾದರ್ ಪ್ರಶ್ನಿಸಿದರು.
ಪಕ್ಷಾಂತರ ಸಮಯದಲ್ಲೇ ಡಿಸ್ಮಿಸ್ ಮಾಡ್ತಿದ್ದೆ:
ಹಿಂದೆ ನಾನು ಸ್ಪೀಕರ್ ಆಗಿರುತ್ತಿದ್ದರೆ ಅನೇಕ ಶಾಸಕರು ಪಕ್ಷಾಂತರ ಮಾಡಿ, ಸಂವಿಧಾನಾತ್ಮಕವಾಗಿ ರಚನೆಯಾದ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಿದಾಗಲೇ ಡಿಸ್ಮಿಸ್ ಮಾಡ್ತಿದ್ದೆ ಎಂದರು.
16ನೇ ವಿಧಾನಸಭೆಯ 6ನೇ ಅಧಿವೇಶದ ಕಾರ್ಯಕಲಾಪಗಳು ಅತ್ಯಂತ ಸುಗಮವಾಗಿ ನಡೆದಿದ್ದು, ಇದೇ ಮೊದಲ ಬಾರಿಗೆ ಬಜೆಟ್ ಮೇಲಿನ ಚರ್ಚೆಯಲ್ಲಿ 80 ಶಾಸಕರು ಪಾಲ್ಗೊಂಡಿರುವುದು ವಿಶೇಷ. ಧನ ವಿನಿಯೋಗ ಬಿಲ್ ಸೇರಿ 27 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದರು.
ವಿಧಾನಸೌಧ ಶಾಶ್ವತ ದೀಪಾಲಂಕಾರ ಏಪ್ರಿಲ್ ಮೊದಲ ವಾರ ಉದ್ಘಾಟನೆ
ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿ, ಸಚಿವರು, ವಿಪಕ್ಷ ನಾಯಕರನ್ನು ಒಳಗೊಂಡು ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇನ್ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6ರಿಂದ 9ರವರೆಗೆ ವಿಧಾನಸೌಧ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಲಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ಸ್ಪೀಕರ್ ಖಾದರ್ ಹೇಳಿದರು.