ಧಾರವಾಡ:
2016-17ರಲ್ಲಿ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬಹುಕೋಟಿ ವಂಚನೆಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹರ್ಷ ಎಂಟರ್‌ಟೈನ್‌ಮೆಂಟ್ ಕಂಪನಿ ನಡೆಸುತ್ತಿದ್ದ ಖಾಸನೀಸ್ ಸೋದರರ ವಂಚನೆ ಪ್ರಕರಣದಲ್ಲಿ ಕಲಘಟಗಿ, ಧಾರವಾಡ-ಹುಬ್ಬಳ್ಳಿ ಹಾಗೂ ಬೆಳಗಾವಿ ಜಿಲ್ಲೆಯ 8000 ಜನರು ಹಣ ಹೂಡಿಕೆ ಮಾಡಿ ಮೋಸಕ್ಕೆ ಒಳಗಾಗಿದ್ದರು. ಇನ್ನೇನು ಮರೆತು ಹೋಗಿದ್ದ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಗೆಯಾಗಿದೆ.
ಕ್ಲೇಮ್‌ಗೆ ಅರ್ಜಿ ಆಹ್ವಾನ:ಈ ಕಂಪನಿಯಿಂದ ವಂಚನೆಗೆ ಒಳಗಾದ ಪ್ರಕರಣಗಳ ಕ್ಲೇಮ್ ಅರ್ಜಿಗಳನ್ನು ಜಿಲ್ಲಾಡಳಿತವು ಏ. 27ರಿಂದ ಸ್ವೀಕರಿಸುತ್ತಿದ್ದು, ಮೇ 26ರ ವರೆಗೆ ಅವಕಾಶ ನೀಡಿದೆ. ಆರಂಭದಲ್ಲಿ ಈ ಬಗ್ಗೆ ಮಾಹಿತಿ ಇಲ್ಲದ ಜನರು ಎರಡು ದಿನಗಳಲ್ಲಿ ಸರದಿಯಲ್ಲಿ ತಮ್ಮ ಕ್ಲೇಮ್ ಅರ್ಜಿ ನೀಡುತ್ತಿದ್ದಾರೆ. ತಾವು ಹಾಕಿದ್ದ ಲಕ್ಷಾಂತರ ರುಪಾಯಿ ಪೈಕಿ ಅಷ್ಟೋ ಇಷ್ಟೋ ಹಣ ಮರಳುವುದೇ ಎಂದು ಮೋಸಕ್ಕೆ ಒಳಗಾದ ಜನರು ಬಿರು ಬೇಸಿಲಿನಲ್ಲೂ ಕಾದು ನಿಂತು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಮೇ 11ರ ಮಧ್ಯಾಹ್ನ ವರೆಗೆ 800 ಜನರು ಅರ್ಜಿ ಸಲ್ಲಿದ್ದಾರೆ.
ಸತ್ಯಬೋಧ ಕಾಸನೀಸ್, ಸಂಜೀವ್ ಕಾಸನೀಸ್ ಮತ್ತು ಶ್ರೀಕಾಂತ್ ಕಾಸನೀಸ್ ಸಹೋದರರು ಹರ್ಷ ಎಂಟರ್‌ಟೈನ್‌ಮೆಂಟ್ ಕಂಪನಿ ಹೆಸರಿನಲ್ಲಿ ಜನರಿಂದ ನೂರಾರು ಕೋಟಿ ಹಣ ಹೂಡಿಕೆ ಮಾಡಿಸಿದ್ದರು. ಆರಂಭದಲ್ಲಿ ತಿಂಗಳಿಗೆ ಶೇ.4ರಷ್ಟು ನಂತರದಲ್ಲಿ ಅದು ಶೇ.6ರ ವರೆಗೆ ಬಡ್ಡಿ ಕೊಡುತ್ತೇವೆಂದು ಆಸೆ ಹುಟ್ಟಿಸಿ, ಹಣವನ್ನು ಷೇರು ಮಾರುಕಟ್ಟೆ ಹಾಗೂ ಚಲನಚಿತ್ರ ನಿರ್ಮಾಣದಲ್ಲಿ ಹೂಡಿಕೆ ಮಾಡಿ ನಷ್ಟಕ್ಕೆ ಒಳಗಾಗಿದ್ದರು.
ಆರಂಭದಲ್ಲಿ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಇಡೀ ಪ್ರಕರಣ ಸಿಐಡಿ ತನಿಖೆಗೊಳಪಟ್ಟಿತ್ತು. ಕಲಘಟಗಿ ಹಾಗೂ ಹುಬ್ಬಳ್ಳಿಯಲ್ಲಿದ್ದ ಅವರ ಜಾಗ, ಮನೆ, ವಾಹನ ಸೇರಿದಂತೆ ಎಲ್ಲ ಆಸ್ತಿಯನ್ನೂ ಜಪ್ತಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಸಹೋದರರು ಮೂರು ವರ್ಷಗಳ ಬಳಿಕ ಕಳೆದ ಮೇ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದರು. ಇದೆಲ್ಲ ಆದ ಬಳಿಕವೂ ಸಹ ಇನ್ನುವರೆಗೂ ಯಾವುದೇ ಆಸ್ತಿ ಹರಾಜಿಗೆ ಅನುಮತಿ ಸಿಕ್ಕಿರಲಿಲ್ಲ.
ನಾವು ಹಣ ಕಳೆದುಕೊಂಡಿದ್ದನ್ನೇ ಮರೆತು ಹೊಸ ಜೀವನ ಶುರು ಮಾಡಿದ್ದೇವು. ಹೆಚ್ಚಿನ ಬಡ್ಡಿಯ ಆಸೆಗಾಗಿ ಅವರಿವರಿಂದ ಸಾಲ ಪಡೆದು ತಂದು ಹೂಡಿಕೆ ಮಾಡಿದ್ದು, ಎಷ್ಟಾದರೂ ಹಣ ಬರಲಿದೆ ಎಂದು ಅರ್ಜಿ ಸಲ್ಲಿಸಲು ದಾಖಲೆಯೊಂದಿಗೆ ಬಂದಿದ್ದೇನೆ ಎಂದು ಕಿತ್ತೂರಿನ ವೃದ್ಧರೊಬ್ಬರು ಹೇಳುತ್ತಾರೆ. ಈಗಲೂ ನಂಬಿಕೆ ಏನಿಲ್ಲತುಂಬಾ ನಂಬಿಕೆ ಇಟ್ಟು ಹರ್ಷ ಕಂಪನಿಗೆ ಆಸ್ತಿ ಮಾರಿ ₹ 18 ಲಕ್ಷ ಹೂಡಿಕೆ ಮಾಡಿದ್ದೇ. ಹೋದ ಹಣ ಮರಳಿ ಬರಲಿದೆ ಎಂಬ ನಂಬಿಕೆಯೇ ಹೋಗಿದೆ. ಕಲಘಟಗಿಯಲ್ಲೂ ಇದೇ ರೀತಿ ಅರ್ಜಿ ಪಡೆದಿದ್ದು, ಪರಿಹಾರ ದೊರೆತಿಲ್ಲ. ಈಗಲೂ ನಂಬಿಕೆ ಏನಿಲ್ಲ. ಅದರೂ ಎಲ್ಲೊ ಒಂದು ಭರವಸೆ ಮೇಲೆ ಕ್ಲೇಮ್ ಅರ್ಜಿ ಸಲ್ಲಿಸುತ್ತಿದ್ದೇನೆ. ಕಾದು ನೋಡೋಣ ಎನ್ನುತ್ತಾರೆ ಕಿತ್ತೂರಿನ ರಮೇಶ.