ಹೆಬ್ರಿ: ಒಂಟಿ ಸಲಗ ಪ್ರತ್ಯಕ್ಷ, ಬೆಳೆ ನಾಶ

KannadaprabhaNewsNetwork | Published : Jun 13, 2024 12:49 AM

ಸಾರಾಂಶ

ದ.ಕ. ಜಿಲ್ಲೆಗೆ ಸೀಮಿತವಾಗಿದ್ದ ಆನೆ ಹಾವಳಿ ಈಗ ಉಡುಪಿ ಜಿಲ್ಲೆಯಲ್ಲಿಯೂ ಸದ್ದಿಲ್ಲದೇ ಆರಂಭವಾಗಿದೆ. ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿ ಸ್ಥಳೀಯರಿಗೆ ಹಾಗೂ ರಸ್ತೆಯಲ್ಲಿ ಸಾಗುವ ಜನರಿಗೆ ನಿದ್ದೆಗೆಡಿಸಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ದ.ಕ. ಜಿಲ್ಲೆಗೆ ಸೀಮಿತವಾಗಿದ್ದ ಆನೆ ಹಾವಳಿ ಈಗ ಉಡುಪಿ ಜಿಲ್ಲೆಯಲ್ಲಿಯು ಸದ್ದಿಲ್ಲದೆ ಆರಂಭವಾಗಿದೆ. ಹೆಬ್ರಿ ಸೋಮೇಶ್ವರ ನಾಡ್ಪಾಲು ಕೂಡ್ಲು ಆಗುಂಬೆ ಮಾರ್ಗವಾಗಿ ಸಾಗುವವರೆ ಹುಷಾರ್. ಯಾಕೆಂದರೆ ಒಂಟಿ ಸಲಗ ಹೆಬ್ರಿ ಆಗುಂಬೆ ವ್ಯಾಪ್ತಿ ಯ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವುದು ಸ್ಥಳೀಯರಿಗೆ ಹಾಗೂ ರಸ್ತೆಯಲ್ಲಿ ಸಾಗುವ ಜನರ ನಿದ್ದೆಗೆಡಿಸಿದೆ.

ಕಳೆದ ನಾಲ್ಕು ದಿನಗಳಿಂದ ಹೆಬ್ರಿ ತಾಲೂಕಿನ ನಾಡ್ಪಾಲು ನೆಲ್ಲಿಕಟ್ಟೆ ಮೀನಾ ಪೂಜಾರ್ತಿ ಎಂಬವರ ಮನೆ ಬಳಿ ಆನೆ ರಾತ್ರಿ ವೇಳೆಯಲ್ಲಿ ದಾಳಿ‌ ಮಾಡುತ್ತಿದ್ದು ಮರದಲ್ಲಿದ್ದ ಹಲಸು ಹಾಗೂ ತೆಂಗು, ಬಾಳೆ, ನಾಶ ಮಾಡಿದೆ. ಆದರೆ ಮುಂಜಾವಿನಲ್ಲಿ‌ ಆನೆ ಕಾಡಿಗೆ ಹೋಗಿ ತಪ್ಪಿಸಿಕೊಳ್ಳುತ್ತಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಕಳೆದ ಬಾರಿ ಕಬ್ಬಿನಾಲೆ ಮುಂಡಾಣಿ ತಿಂಗಾಳೆ, ಬಳಿ ಇದೆ ಆನೆಯು ಅಲ್ಪ‌ಮಟ್ಟಿಗೆ ಕೃಷಿಯನ್ನು ಹಾನಿಗೊಳಿಸಿತ್ತು. ಅರಣ್ಯ ಇಲಾಖೆ ಮಾಹಿತಿ ಪ್ರಕಾರ ಈ ಒಂಟಿ ಸಲಗವು ಸುಳ್ಯದ ಕುಕ್ಕೆ ಸುಬ್ರಹ್ಮಣ್ಯ ದಿಂದ ಬೆಳ್ತಂಗಡಿ ಮೂಲಕ ನಾರಾವಿ , ಮಾಳ ಘಾಟ್ ಮೂಲಕ ವಾಲಿಕುಂಜ ಬೆಟ್ಟದ ಮೇಲಿನ ಕಬ್ಬಿನಾಲೆಯ ತಿಂಗಳಮಕ್ಕಿ , ತೆಂಗುಮಾರ್, ಕಿಗ್ಗ , ಬರ್ಕಣ ಮಲ್ಲಂದೂರು, ಆಗುಂಬೆಯ ಮೂಲಕ ನಗರ ಹೊಸನಗರ ವರೆಗೆ ಸಂಚರಿಸುತ್ತದೆ. ಆದರೆ ಯಾವುದೇ ಪ್ರಾಣ ಹಾನಿ ಮಾಡಿಲ್ಲ. ಪ್ರತಿ ವರ್ಷ ಕಾಡಿನಲ್ಲಿ ಬಂದು ಸಂಚರಿಸಿ ತನ್ನ ಪಾಡಿಗೆ ಸಾಗುತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಕೃಷಿಭೂಮಿಗೆ ತೋಟಕ್ಕೆ ದಾಳಿ ಮಾಡುತ್ತಿದೆ.

ಕಳೆದ ಇಪ್ಪತ್ತು ವರ್ಷಗಳ ಹಿಂದೆ ಹೆಬ್ರಿ ಸಮೀಪದ ಸಂತೆಕಟ್ಟೆ ಎಂಬಲ್ಲಿ ಒಂಟಿ‌ಸಲಗವು ಕೋಲಿನ‌ ಮೂಲಕ ಹೊಡೆಯಲು ಹೋದ ಓರ್ವ ವ್ಯಕ್ತಿಯನ್ನು ಸೊಂಡಿಲಿನ ಮೂಲಕ ನೆಲಕ್ಕೆ ಬಿಸಾಡಿತ್ತು.

ಪ್ರವಾಸಿಗರೇ ಎಚ್ಚರ: ಕಬ್ಬಿನಾಲೆ ಫಾಲ್ಸ್, ಆಗುಂಬೆ ಸೂರ್ಯಾಸ್ತ ವೀಕ್ಷಣಾ ಪ್ರದೇಶ, ಮಲ್ಲಂದೂರು ಬರ್ಕಣ ಫಾಲ್ಸ್ ಗಳಿಗೆ ಬರುವ ಪ್ರವಾಸಿಗರು ಹುಷಾರಾಗಿರಿ . ಒಂಟಿ‌ಸಲಗವು ಅಲ್ಲಲ್ಲಿ ಕಾಣಿಸುತ್ತಿದೆ. ಅರಣ್ಯ ಇಲಾಖೆಯ ಮಾಹಿತಿಯನ್ನು ಆಧರಿಸಿ ಸಂಚರಿಸುವುದು ಒಳಿತು. ಅರಣ್ಯ ಇಲಾಖೆ ಸಹಕಾರ ಪಡೆದುಕೊಳ್ಳಿ.

Share this article