ವಿದ್ಯಾಕಾಂತರಾಜ್
ತಾಲೂಕಿನ ಜನತೆ ಕಳೆದ ಎರಡು ತಿಂಗಳಿನಿಂದ ಸುಗ್ಗಿಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ. ಪೆಬ್ರವರಿ ತಿಂಗಳ ಆರಂಭದಿಂದ ಆರಂಭವಾಗಿರುವ ಸುಗ್ಗಿಹಬ್ಬಗಳು ಮೇ ತಿಂಗಳವರಗೆ ನಡೆಯುತ್ತಿದ್ದು, ಅದರಲ್ಲೂ ಏಪ್ರಿಲ್ ತಿಂಗಳಿನಲ್ಲಿ ತಾಲೂಕಿನ ಪ್ರಸಿದ್ದ ಸುಗ್ಗಿಗಳು ಆರಂಭಗೊಂಡಿದ್ದು, ಶಿಷ್ಟಚಾರ, ಸಂಪ್ರದಾಯ ಪಾಲನೆಯ ಮೂಲಕ ಜನರು ಭಕ್ತಿಪರಕಾಷ್ಟೆ ಪ್ರದರ್ಶಿಸುತ್ತಿದ್ದಾರೆ.
ಹೆತ್ತೂರು ಹೋಬಳಿಯ ಕೊಂಗಳ್ಳಿ, ಹಾನುಬಾಳ್ ಹೋಬಳಿ ಗುಂಡುಬ್ರಹ್ಮ ಹಾಗೂ ಸಕಲೇಶಪುರದ ಸಕಲೇಶ್ವರಸ್ವಾಮಿ ಜಾತ್ರೆಗಳ ಮೂಲಕ ಆರಂಭವಾಗುವ ಧಾರ್ಮಿಕ ಕಾರ್ಯಕ್ರಮಗಳು ಮೇ ಅಂತ್ಯದವರೂ ಸಾಂಗೋಪಾಧಿಯಲ್ಲಿ ನಡೆಯುತ್ತಿವೆ. ಯಸಳೂರು ಹೋಬಳಿ ವ್ಯಾಪ್ತಿಯ ಹೆರೂರು ಗ್ರಾಮದಲ್ಲಿ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಆರಂಭಗೊಂಡಿರುವ ೧೦ ಗ್ರಾಮಗಳು ಸಮ್ಮೀಲನಗೊಳ್ಳುವ ೧೦ ದಿನಗಳ ಸುಗ್ಗಿ ಸಾಕಷ್ಟು ಪ್ರಸಿದ್ದಿ ಪಡೆದಿದೆ.ದೇವಿರಮ್ಮ, ಕೆಂಚಮ್ಮ ದೇವಿಯರನ್ನು ಪೂಜಿಸುವ ಸುಗ್ಗಿ ಹಲವು ವೈಶಿಷ್ಟಗಳನ್ನು ಹೊಂದಿದ್ದು, ಸುಗ್ಗಿಯ ಮೊದಲ ದಿನ ಉಚ್ಚಂಗಿ ಗ್ರಾಮ ಸಮೀಪದ ಗುವಿಬೆಟ್ಟಕ್ಕೆ ದೇವರ ವಿಗ್ರಹಗಳನ್ನು ಹೊತ್ತೊಯ್ಯುವ ಅರ್ಚಕರು ಗವಿಬೆಟ್ಟದಲ್ಲಿ ದೇವಿ ಕೊಳದಲ್ಲಿ ದೇವರ ಮಜ್ಜನ ಮಾಡಿಸಿದ ನಂತರ ದೇವಿಯರನ್ನು ಪೂಜಿಸುವ ಮೂಲಕ ಸುಗ್ಗಿ ಆರಂಭಗೊಳ್ಳಲಿದೆ. ಇಲ್ಲಿನ ವೈಶಿಷ್ಟವೆಂದರೆ ಸುಗ್ಗಿ ಸಂದರ್ಭದಲ್ಲಿ ಮಾತ್ರ ದೇವಸ್ಥಾನದ ಬಾಗಿಲು ತೆಗೆಯಲಾಗುತ್ತದೆ. ಇಲ್ಲಿನ ಸಮೀಪ ಬಾಳೆಕೆರೆ ಗ್ರಾಮದಲ್ಲೂ ಮೂರು ದಿನಗಳ ಸುಗ್ಗಿ ಹಲವು ಕಟು ಸಂಪ್ರದಾಯದ ಮೂಲಕ ನಡೆಯುತ್ತದೆ.
ಇದಲ್ಲದೆ ಬಿಲ್ಲುಸುಗ್ಗಿ, ಹಗಲು ಸುಗ್ಗಿ, ಕೆಂಡೋತ್ಸವ ನಡೆಯುವುದು ವಾಡಿಕೆಯಾಗಿದೆ. ಆದರೆ ಸುಗ್ಗಿಯ ಅಂಗವಾಗಿ ನಡೆಯುವ ಮಹಿಳೆಯರ ಸುಗ್ಗಿ ಗಮನ ಸೆಳೆಯುತ್ತಿದ್ದು, ಹೆತ್ತೂರು ಗ್ರಾ.ಪಂ ವ್ಯಾಪ್ತಿಯ ಕಿರ್ಕಳ್ಳಿ ಗ್ರಾಮದ ಪಟೇಲರ ಮನೆಯಲ್ಲಿರುವ ದೇವರ ವಿಗ್ರಹವನ್ನು ಹೊರತಂದು ಗ್ರಾಮದ ಹೊರವಲಯದಲ್ಲಿಟ್ಟು ಕೇವಲ ಮಹಿಳೆಯರೆ ಪೂಜಿಸುವುದು ಈ ಸುಗ್ಗಿಯ ವಿಶೇಷಗಳಲ್ಲಿ ಒಂದಾಗಿದ್ದು, ಅಪ್ಪಿತಪ್ಪಿಯು ಅಂದು ಗ್ರಾಮದಲ್ಲಿ ಪುರುಷರು ಸಂಚರಿಸುವಂತಿಲ್ಲ ಎಂಬ ರೂಢಿ ಹಲವು ಶತಮಾನಗಳಿಂದ ನಡೆದು ಕೊಂಡು ಬಂದಿದೆ.
ಹೆತ್ತೂರು ಹೋಬಳಿ ಹೊಂಗಡಹಳ್ಳ ಗ್ರಾಮದಲ್ಲಿ ಮಾರ್ಚ್ ಅಂತ್ಯದಲ್ಲಿ ಮೂರು ದಿನಗಳ ದೇವಿರಮ್ಮ ಸುಗ್ಗಿ ನಡೆದರೆ, ಹಿರಿಯೂರು ಗ್ರಾಮದಲ್ಲಿ ಏಳು ದಿನಗಳ ಸುಗ್ಗಿ ಆರಂಭಗೊಂಡಿದೆ. ವಳಲಹಳ್ಳಿ ಗ್ರಾಮದಲ್ಲೂ ಮೂರು ದಿನಗಳ ದೇವಿರಮ್ಮ ಸುಗ್ಗಿ ಅದ್ಬುತವಾಗಿ ನಡೆದು ಸಮಾಪ್ತಿಗೊಂಡಿದೆ. ಬೊಮ್ಮನಕೆರೆ ಗ್ರಾಮದಲ್ಲಿ ನಡೆಯುವ ಸುಗ್ಗಿಯ ವೇಳೆ ಸುಗ್ಗಿಬನಕ್ಕೆ ಮೌನವಾಗಿ ಹೋಗಿಬರುವುದು ಈ ಸುಗ್ಗಿಯ ವಿಶಿಷ್ಟಗಳಲ್ಲಿ ಒಂದಾಗಿದೆ.
೧೨ ಗ್ರಾಮಗಳ ಗ್ರಾಮಸ್ಥರು ಸೇರಿ ಆಚರಿಸುವ ಬಲ್ದೂರು ಸುಗ್ಗಿ ಎಂದೆ ಹೆಸರು ಪಡೆದಿರುವ ಹುಲ್ಲಹಳ್ಳಿ ಸುಗ್ಗಿ ಏಪ್ರಿಲ್ ಎರಡನೇ ವಾರಕ್ಕೆ ಮುಕ್ತಾಯಗೊಂಡಿದೆ. ಕ್ಯಾನಹಳ್ಳಿ, ಬುಗಡಹಳ್ಳಿ ಗ್ರಾಮಸ್ಥರು ಸೇರಿ ಆಚರಿಸುವ ಬುಗಡಹಳ್ಳಿ ಸುಗ್ಗಿ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದ್ದರೆ, ಬೊಬ್ಬನಹಳ್ಳಿ ಸುಗ್ಗಿ ಕಳೆದ ವಾರ ಮುಕ್ತಾಯಗೊಂಡಿದೆ. ಇನ್ನೂ ಹಾನುಬಾಳ್ ಹೋಬಳಿ ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯ ೯ ಗ್ರಾಮಗಳ ಗ್ರಾಮಸ್ಥರು ನಡೆಸುವ ೧೧ ದಿನಗಳ ಕಾಲ ನಡೆಯುವ ಸುಗ್ಗಿ ಮೂಡಿಗೆರೆ ಹಾಗೂ ಸಕಲೇಶಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಸಿದ್ದಿ ಪಡೆದಿದ್ದು, ಅಚ್ಚನಹಳ್ಳಿ ಗ್ರಾಮದ ಸುಗ್ಗಿ ದೇವಿರಮ್ಮ ಬನ, ಅಚ್ಚನಹಳ್ಳಿ ಕೊಮರಗುಡಿ, ದೇವಾಲದಕೆರೆ ದೇವಿರಮ್ಮ ಬನ ಸೇರಿದಂತೆ ಮೂರು ಸ್ಥಳಗಳಲ್ಲಿ ಕೆಂಡೋತ್ಸವ ನಡೆಯುವುದು ಈ ಸುಗ್ಗಿಯ ವಿಶೇಷಗಳಲ್ಲಿ ಒಂದಾಗಿದೆ.
ನಿಂತಿದ್ದ ಸುಗ್ಗಿಗಳ ಆರಂಭಕ್ಕೆ ಸಿದ್ದತೆ: ತಾಲೂಕಿನ ಕಾಡುಮನೆ ಗ್ರಾಮದಲ್ಲಿ ಕಳೆದ ೬೦ ವರ್ಷಗಳಿಂದ ಸ್ಥಗಿತಗೊಂಡಿದ್ದ ಸುಗ್ಗಿಯನ್ನು ಪ್ರಸಕ್ತವರ್ಷ ನಡೆಸುವ ಮೂಲಕ ಈ ಭಾಗದ ಜನರು ಸಂಭ್ರಮಿಸಿದರೆ, ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯ ಕುಮಾರಹಳ್ಳಿ ಗ್ರಾಮದಲ್ಲೂ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸುವ ಮೂಲಕ ಸುಗ್ಗಿ ನಡೆಸಲು ಸಿದ್ದತೆಗಳು ನಡೆಸಲಾಗುತ್ತಿದೆ.
ಕೋಟ್.......
ಸೀಮೆಂಟ್ ಮಂಜು. ಶಾಸಕ.
ಕೋಟ್........ತಾಲೂಕಿನ ಹೆತ್ತೂರು ಗ್ರಾಮದ ಕುಮಾರಲಿಂಗೇಶ್ವರ ದೇವರ ಸುಗ್ಗಿ ತಾಲೂಕಿನಲ್ಲೆ ಪ್ರಸಿದ್ದಿ ಪಡೆದಿದ್ದು, ಹಲವು ಕಟ್ಟುಪಾಡುಗಳೊಂದಿಗೆ ಸುಗ್ಗಿಯನ್ನು ಆಚರಿಸಲಾಗುತ್ತಿದೆ.
ರವಿ. ಗ್ರಾಮದ ಮುಖಂಡ.