‘ಕನ್ನಡಪ್ರಭ’ ಪರಿಚಯಿಸಿದ ಕೃಷಿ ಸಾಧಕ । 35 ವರ್ಷಗಳಿಂದ ಕೃಷಿ ಕಾಯಕದಲ್ಲಿ ಖುಷಿ ಕಂಡ ರೈತ
ಶ್ರೀಕಾಂತ ಹೆಮ್ಮಾಡಿಕನ್ನಡಪ್ರಭ ವಾರ್ತೆ ಕುಂದಾಪುರತಾಲೂಕಿನ ಕಡಲ ತೀರದ ಕೋಡಿಯ ರೈತ ಗಂಗಾಧರ ಪೂಜಾರಿ ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹಡಿಲು ಭೂಮಿಯಲ್ಲಿ ಇವರ ಕೃಷಿ ಸಾಧನೆಗೆ ಪುರಸ್ಕಾರ ಅರಸಿ ಬಂದಿದೆ.1966 ರಲ್ಲಿ ಜನಿಸಿದ ಇವರು ಎಸೆಸ್ಸೆಲ್ಸಿ ಶಿಕ್ಷಣ ಪೂರೈಸಿದ್ದಾರೆ. ತಂದೆ ಗುತ್ತೇದಾರ ಮನೆತನದ ಗಣಪ ದೇವಾಡಿಗ ಕೃಷಿಕರಾಗಿದ್ದು, ಒಂದು ಎಕರೆ ಕೃಷಿಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಗಂಗಾಧರ ಪೂಜಾರಿ ತಂದೆಯ ನಿಧನದ ಬಳಿಕ ಕುಟುಂಬದ ಜವಾಬ್ದಾರಿಯ ಜೊತೆಗೆ ಕಳೆದ ಸುಮಾರು 35 ವರ್ಷಗಳಿಂದಲೂ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.ಸ್ವತಃ ಗದ್ದೆಗಿಳಿದು ಉಳುಮೆ:ತಂದೆ ನಡೆಸುತ್ತಿದ್ದ ಮನೆಯ ಒಂದು ಎಕರೆ ಕೃಷಿಭೂಮಿಯಲ್ಲಿ ಬೇಸಾಯ ಮುಂದುವರಿಸಿದ ಗಂಗಾಧರ ಪೂಜಾರಿ, ವರ್ಷದಿಂದ ವರ್ಷಕ್ಕೆ ತಮ್ಮ ಕೃಷಿ ಚಟುವಟಿಕೆ ವಿಸ್ತಾರಗೊಳಿಸಿದರು. ಗದ್ದೆ ಉಳುಮೆ, ಕಳೆ ಕೀಳುವುದು, ಕೊಯ್ಲು ಮುಂತಾದ ಕೃಷಿ ಚಟುವಟಿಕೆಗಳನ್ನು ಸ್ವತಃ ಮಾಡುತ್ತಾ, ಕೃಷಿ ಕ್ಷೇತ್ರಕ್ಕೆ ಅನೇಕ ಹೊಸತನಗಳನ್ನು ಪ್ರಾಯೋಗಿಕವಾಗಿ ಪ್ರಯೋಗಿಸಿ ಅದರಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.ತಂದೆಯ ಮಾತೇ ಪ್ರೇರಣೆ:ಮನೆಯ 1ಎಕರೆ ಕೃಷಿ ಪ್ರದೇಶದಲ್ಲಿ ಭತ್ತದ ನೇಜಿ ಕಾರ್ಯ ನಡೆಸಿ ಯಶಸ್ಸು ಕಂಡ ಗಂಗಾಧರ ಪೂಜಾರಿ ಬಳಿಕ ಮನೆ ಸಮೀಪದ 4 ಎಕರೆಯಷ್ಟು ಹಡಿಲು ಬಿದ್ದ ಕೃಷಿ ಭೂಮಿಯನ್ನು ಗೇಣಿ ಪಡೆದು ಕೃಷಿಯಲ್ಲಿ ತೊಡಗಿಕೊಂಡರು. ‘ಏನೇ ಬಿಟ್ಟರೂ ಕೃಷಿ ಕೆಲಸವನ್ನು ಬಿಡಬೇಡ’ ಎನ್ನುವ ತಂದೆಯ ಮಾತಿಗೆ ಕಟಿಬದ್ದರಾಗಿ ಮನೆ ಸಮೀಪದ ಹತ್ತಾರು ಎಕರೆಯಷ್ಟು ಹಡಿಲು ಬಿದ್ದ ಕೃಷಿಭೂಮಿ ಗೇಣಿ ಪಡೆದು ಹಸಿರು ನಳನಳಿಸುವಂತೆ ಮಾಡಿ ತಂದೆಯ ಮಾತನ್ನು ಉಳಿಸಿಕೊಂಡು ಕೃಷಿ ಕಾಯಕದಲ್ಲಿ ಖುಷಿ ಕಂಡರು.ಇತ್ತೀಚಿನ ದಿನಗಳಲ್ಲಿ ಕೂಲಿ ಸಮಸ್ಯೆ, ಹವಮಾನ ವೈಪರೀತ್ಯ, ಪಾಚಿ ಹಾವಳಿಯಂತಹ ನಾನಾ ಸಮಸ್ಯೆಗಳು ಎದುರಾದರೂ ಅವೆಲ್ಲವನ್ನೂ ಲೆಕ್ಕಿಸದೇ ಕೃಷಿಭೂಮಿ ಹಡಿಲು ಬೀಳದಂತೆ ಬರೋಬ್ಬರಿ 45 ಎಕರೆಯಷ್ಟು ಹಡಿಲು ಬಿದ್ದ ಕೃಷಿ ಗದ್ದೆಗಳನ್ನು ಗೇಣಿ ಪಡೆದು ಅಸಾಧಾರಣ ಕೃಷಿಕನಾಗಿ ಹೊರಹೊಮ್ಮಿದ್ದಾರೆ. ಕೃಷಿ ಕಾಯಕದ ಜೊತೆ ಜೊತೆಗೆ ಇಲೆಕ್ಟ್ರಿಕಲ್ ಹಾಗೂ ಡೆಕೊರೇಶನ್ ಉದ್ಯಮ ನಡೆಸಿಕೊಂಡು ಬಂದಿದ್ದಾರೆ.
..........................ಕನ್ನಡಪ್ರಭ ಪರಿಚಯಿಸಿದ ಕೃಷಿ ಸಾಧಕ!ಕೋಡಿಯ ರೈತ ಗಂಗಾಧರ ಪೂಜಾರಿ ಕೃಷಿ ಸಾಧನೆಯ ಕುರಿತು 2020ರ ಜು. 7 ರಂದು ‘ಹಡಿಲು ಬೀಳುವ ಸ್ಥಿತಿಯಲ್ಲಿದ್ದ ಕೃಷಿ ಭೂಮಿಗೆ ಮರುಜೀವ’ ಶೀರ್ಷಿಕೆಯಡಿಯಲ್ಲಿ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಶಸ್ತಿ ಪುರಸ್ಕೃತ ಕೋಡಿ ಗಂಗಾಧರ ಪೂಜಾರಿ, ಕೃಷಿ ಕ್ಷೇತ್ರದಲ್ಲಿನ ನನ್ನ ಸಾಧನೆಯನ್ನು ಗುರುತಿಸಿ ಐದು ವರ್ಷಗಳ ಹಿಂದೆ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿ ಆ ಬಳಿಕವೂ ನನ್ನ ಕೃಷಿ ಚಟುವಟಿಕೆಯಲ್ಲಿನ ನಾನಾ ಸಮಸ್ಯೆಗಳ ಬಗ್ಗೆ ನಿರಂತರ ವರದಿ ಪ್ರಕಟಿಸಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಹೀಗಾಗಿ ಪತ್ರಿಕೆಗೆ ವಿಶೇಷ ಧನ್ಯವಾದಗಳು ಎಂದಿದ್ದಾರೆ................ಕೃಷಿ ನನ್ನ ನೆಚ್ಚಿನ ಕ್ಷೇತ್ರ. ಕೃಷಿ ಕಾಯಕದಲ್ಲಿ ಇರುವ ಖುಷಿ ಬೇರೆಲ್ಲೂ ಇಲ್ಲ. ಗ್ರಾಮೀಣ ಭಾಗದ ರೈತನನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಅತ್ಯಂತ ಖುಷಿ ಕೊಟ್ಟಿದೆ.-ಕೋಡಿ ಗಂಗಾಧರ ಪೂಜಾರಿ, ಕೃಷಿ ಸಾಧಕ