ಕನ್ನಡಪ್ರಭ ವಾರ್ತೆ ಹಾಸನ
ಮೊದಲ ಎರಡು ಸೆಟ್ ನಾಮಪತ್ರವನ್ನು ಗೃಹಸಚಿವ ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಬಿ. ಶಿವರಾಂ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಯಿತು.ತಡವಾಗಿ ಆಗಮಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಮೆರವಣಿಗೆಯಲ್ಲಿ ಪಾಲ್ಗೊಂಡರು.
ನಗರದ ಡೈರಿ ವೃತ್ತದಿಂದ ಹೊರಟ ಬೃಹತ್ ಮೆರವಣಿಗೆಯಲ್ಲಿ ತೆರೆದ ವಾಹನದೊಳಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಸಚಿವ ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಬಿ. ಶಿವರಾಂ, ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಗೂ ತಾಯಿ ಅನುಪಮಾ ಭಾಗವಹಿಸಿದ್ದು, ಮೆರವಣಿಗೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಡಿಜೆ ಸೌಂಡ್ ಹಾಗೂ ಬ್ಯಾಂಡ್ ಸೆಟ್ ಗೆ ಕುಣಿದು ಕುಪ್ಪಳಿಸಿದರು.ಗಂಟೆಗಟ್ಟಲೆ ಮೆರವಣಿಗೆ ನಡೆದಿದ್ದರಿಂದ ಬಿ.ಎಂ. ರಸ್ತೆ ಮೂಲಕ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ತುರ್ತಾಗಿ ತಲುಪಬೇಕಾದವರು ಬದಲಿ ರಸ್ತೆ ಮೂಲಕ ಸುತ್ತಾಡಿಕೊಂಡು ಹೋಗಬೇಕಾಯಿತು. ಇದಕ್ಕೆ ಮೊದಲು ಗೃಹ ಸಚಿವ ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಹಾಸನಕ್ಕೆ ಆಗಮಿಸುವ ವೇಳೆ ಶಾಂತಿಗ್ರಾಮದ ಚೆಕ್ ಪೋಸ್ಟ್ ನಲ್ಲಿ ತಡೆದು ಚುನಾವಣಾಧಿಕಾರಿಗಳು ವಾಹನಗಳ ತಪಾಸಣೆ ನಡೆಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಚುನಾವಣೆಯ ಕುರಿತು ಜನತೆ ನೋಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗನನ್ನು ಹಾಸನದಿಂದ ನಿಲ್ಲಿಸಿದರೆ, ಮಂಡ್ಯದಲ್ಲಿ ಮಗನನ್ನು ನಿಲ್ಲಿಸಿದ್ದಾರೆ. ತನ್ನ ಅಳಿಯನನ್ನು ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರದಲ್ಲಿ ನಿಲ್ಲಿಸಿದ್ದಾರೆ. ಒಂದೇ ಕುಟುಂಬದಿಂದ ಮೂವರನ್ನು ಜೆಡಿಎಸ್ ನಿಂದ ನಿಲ್ಲಿಸಲಾಗಿದ್ದು, ಈ ಕ್ಷೇತ್ರಗಳಿಗೆ ಬೇರೆ ಯಾರೂ ಇರಲಿಲ್ಲವೇ ಎಂದು ಪ್ರಶ್ನಿಸಿದರು.
ಸೆರೆಗೊಡ್ಡಿ ಬೇಡಿದ ಅನುಪಮಾ:
ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ,ನಾನು ಮಂತ್ರಿ ಆಗಬೇಕಾದರೆ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.ಬೆಳಿಗ್ಗಿನಿಂದ ಕಾದಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿ.ಎಂ. ರಸ್ತೆ ಉದ್ದಲಕ್ಕೂ ಇದ್ದ ಮದ್ಯದಂಗಡಿಗೆ ಕಾಲಿಟ್ಟರು. ಇನ್ನು ಹೋಟೇಲ್ ಗಳು, ಬಾರ್ ಅಂಡ್ ರೆಸ್ಟೋರೆಂಟ್ ಫುಲ್ ರಶ್ ಆಗಿರುವುದು ಕಂಡುಬಂದಿತು. ಕಾರ್ಯಕರ್ತರು ದಾರಿಗಳಲ್ಲೇ ಎಣ್ಣೆ ಬಾಡೂಟ ಸೇವಿಸಿದ್ದು ಸಾಮಾನ್ಯವಾಗಿತ್ತು.