ದರ್ಶನ ಭಾಗ್ಯ ಕಲ್ಪಿಸಿದ ಹಾಸನಾಂಬೆ

KannadaprabhaNewsNetwork | Published : Nov 3, 2023 12:30 AM

ಸಾರಾಂಶ

ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಿಯ ದರ್ಶನ ಗುರುವಾರದಿಂದ ಆರಂಭವಾಗಿದ್ದು, ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಧಾರ್ಮಿಕ ವಿಧಿವಿಧಾನಗಳ‌‌ ಮೂಲಕ ಗುರುವಾರ ಸರಿಸುಮಾರು 12.25ಕ್ಕೆ ಬಾಗಿಲು ತೆರೆಯಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ ನ.೨ರಿಂದ ೧೫ರವರೆಗೆ ಹಾಸನಾಂಬ ದೇವಾಲಯ ಬಾಗಿಲು ತೆರೆಯಲಿದ್ದು, ಈ ೧೪ ದಿನಗಳಲ್ಲಿ 12 ದಿನಗಳ ಕಾಲ ಮಾತ್ರ ಹಾಸನಾಂಬೆ ದೇವಿ ದರ್ಶನ ನೀಡಲಿದ್ದಾಳೆ. ಮೊದಲ ಹಾಗೂ ಕೊನೆಯ ದಿನ ದರ್ಶನ ಇರುವುದಿಲ್ಲ. ಉಳಿದಂತೆ ಎಲ್ಲ ದಿನಗಳು ದಿನದ ೨೪ ಗಂಟೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ ೧೨-೨೫ಕ್ಕೆ ಅರಸು ವಂಶಸ್ಥರ ಬಾಳೆಕಂದು ಕಡಿದ‌ ನಂತರ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತಸಾಗರ ಹರಿದು ಬರಲಿದೆ. ಪ್ರತೀತಿ: ದೇವಾಲಯದ ಬಾಗಿಲು ಹಾಕುವಾಗ ಹಚ್ಚಿಟ್ಟ ದೀಪ ವರ್ಷ ಪೂರ್ತಿ ಬೆಳಗುತ್ತದೆ. ಮುಂದಿನ ವರ್ಷ ಬಾಗಿಲು ತೆರೆದಾಗ ದೀಪ ಬೆಳಗುತ್ತಲೇ ಇರುತ್ತದೆ. ದೇವರಿಗೆ ಇಟ್ಟ ನೈವೇದ್ಯ ಒಂದು ವರ್ಷದ ನಂತರವೂ ಉತ್ತಮವಾಗಿರುತ್ತದೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ದೇವಿಯ ಪವಾಡ ನೋಡಲು ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಭಕ್ತರು ದೇವಿಯ ದರ್ಶನವನ್ನು ಪಡೆಯಲು ಆಗಮಿಸುತ್ತಾರೆ. ಅಶ್ವೀಜ ಮಾಸ ಹುಣ್ಣಿಮೆ ನಂತರ ಬರುವ ಮೊದಲ ಗುರುವಾರ ವಿಧಿವಿಧಾನದಂತೆ ಅರ್ಚಕರು ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ ಸುಮಾರು ೧೨.೨೫ಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಕೆ.ಎನ್. ರಾಜಣ್ಣ ,ಶಾಸಕ‌ ಸ್ವರೂಪ್ ಪ್ರಕಾಶ್ , ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಹಾಸನಾಂಬ ದೇವಸ್ಥಾನ ಆಡಳಿತಾಧಿಕಾರಿ ಮಾರುತಿ, ಎಸ್ಪಿ ಮೊಹಮ್ಮದ್ ಸುಜಿತಾ , ಎಎಸ್ಪಿ ತಮ್ಮಯ್ಯ, ಜಿ.ಪಂ. ಸಿಇಒ ಪೂರ್ಣಿಮಾ, ಉಪ ವಿಭಾಗಾಧಿಕಾರಿ ಶೃತಿ, ತಹಸೀಲ್ದಾರ್ ಶ್ವೇತಾ, ಜಿಲ್ಲಾ ನ್ಯಾಯಾಧೀಶರಾದ ರವಿಕಾಂತ್, ವಾರ್ತಾಧಿಕಾರಿ ಮೀನಾಕ್ಷಮ್ಮ ಸೇರಿದಂತೆ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ದೇಗುಲದ ಗರ್ಭಗುಡಿ ಬಾಗಿಲ ಬೀಗ ಮುದ್ರೆ ತೆರೆಯಲಾಯಿತು. ಬೆಳಿಗ್ಗೆ ದೇಗುಲದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಸಂಪ್ರದಾಯದಂತೆ ತಳವಾರ ವಂಶದ ನರಸಿಂಹರಾಜ್ ಅರಸ್ ಅವರು ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆರೆಯಲು ಅನುವು ಮಾಡಿಕೊಟ್ಟರು. ಹಾಸನಾಂಬ, ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪೊಲೀಸ್ ಬಂದೋಬಸ್ತ್: ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ ೧.೩೦ರವರೆಗೆ ಹಾಗೂ ಮಧ್ಯಾಹ್ನ ೩ ರಿಂದ ರಾತ್ರಿ ೨ ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಶೇಷ ದರ್ಶನಕ್ಕಾಗಿ ಒಬ್ಬರಿಗೆ 300 ಹಾಗೂ 1000 ರು. ಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಜಿಲ್ಲಾಡಳಿತ ಭಕ್ತರಿಗೆ ಅಗತ್ಯವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯದ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ದೇವಾಲಯದ ಒಳಗೆ ಹಾಗೂ ಸುತ್ತಮುತ್ತ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ದೇವಿಯ ಸುಗಮ ದರ್ಶನಕ್ಕೆ ೧೨೦೦ ಸಿಬ್ಬಂದಿಯೊಂದಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಂದಾಯ ಇಲಾಖೆಯ 213 ಮಂದಿ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿದ್ದು ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಭಕ್ತರಿಗೆ ಜರ್ಮನ್ ಟೆಂಟ್ ಸೂರು - ಚೇರ್ ವ್ಯವಸ್ಥೆ: ಹಾಸನಾಂಬ ದರ್ಶನ ಪಡೆಯಲು ರಾಜ್ಯದ ನಾನಾ ಮೂಲೆಮೂಲೆಗಳಿಂದ ಭಕ್ತಾಧಿಗಳು ಆಗಮಿಸಲಿದ್ದಾರೆ, ಅಲ್ಲದೆ ಈ ಬಾರಿ ಮಹಿಳೆಯರಿಗೆ ಉಚಿತ ಬಸ್‌ ಇರುವುದರಿಂದ ಮಹಿಳಾ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಆದ್ದರಿಂದ ಭಕ್ತಾಧಿಗಳು ತಾಸುಗಟ್ಟಲೆ ಸಾಲಿನಲ್ಲಿ ನಿಂತು ದರ್ಶನ ಪಡೆಯುವ ಹಿನ್ನೆಲೆಯಲ್ಲಿ ಸರತಿಯಲ್ಲಿ ಕೂರಲು ಚೇರ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಬಿಸಿಲಿನ ತಾಪದಿಂದ ರಕ್ಷಿಸಲು ಜರ್ಮನ್ ಟೆಂಟ್ ಹಾಗೂ ಮ್ಯಾಟ್ (ನೆಲಹಾಸು) ವ್ಯವಸ್ಥೆ ಕುಡಿಯುವ ನೀರು, ಮಜ್ಜಿಗೆ, ನಿರ್ದಿಷ್ಟ ಸ್ಥಳಗಳಲ್ಲಿ ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲೆಯ ಭಕ್ತಾಧಿಗಳಿಗೆ ಈ ಬಾರಿಯು ಹಾಸನಾಂಬ ದರ್ಶನಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಿದೆ. ಅಧಿಕೃತ ಸಮಯಕ್ಕೆ ಸರಿಯಾಗಿ ಬಾಗಿಲು‌ ತೆರೆಯಲಾಗಿದ್ದು ಎಲ್ಲರೂ ಶಾಂತಿಯುತವಾಗಿ ದೇವಿ ದರ್ಶನ ಪಡೆಯಬೇಕು ಹಾಗೂ ೧೪ ದಿನದ ಜಾತ್ರಾ ಮಹೋತ್ಸವ ಯಶಸ್ವಿಯಾಗಿ‌ ಜರುಗಲು ಸಹಕರಿಸುವಂತೆ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಮನವಿ‌ ಮಾಡಿದರು. ಜಾತ್ರಾ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು. ಅದರಂತೆ ಎಲ್ಲಾ ಅಚ್ಚುಕಟ್ಟಾಗಿ ನಡೆಯುತ್ತಿದೆ. ಸಾರ್ವಜನಿಕರು ಸಹ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ನಗರದ ರಸ್ತೆ ಸೇರಿದಂತೆ ಸರ್ಕಾರಿ ಕಟ್ಟಡಗಳಲ್ಲಿ ದೀಪಲಂಕಾರ ಮಾಡಲಾಗಿದ್ದು, ಹೆಲಿಕಾಪ್ಟರ್ ಮೂಲಕ ಆಕಾಶದಿಂದ ಹಾಸನ, ಸೇರಿದಂತೆ ಪ್ಯಾರಾಗ್ಲೈಡಿಂಗ್, ಪ್ಯಾರಾ ಮೋಟರಿಂಗ್, ಕೆ ಎಸ್ ಆರ್ ಟಿ ಸಿ ಸಹಯೋಗದೊಂದಿಗೆ ಪ್ರವಾಸದ ಪ್ಯಾಕೇಜ್ ಪರಿಚಯಿಸಲಾಗಿದೆ. ನ. 5ರಂದು ಆಳ್ವಾಸ್ ನುಡಿಸಿರಿ ಕಲಾತಂಡದಿಂದ ನಗರದ ಕಲಾ ಕಾಲೇಜು ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಕೋರಿದರು. ದೀಪ ಬೆಳಗುತ್ತಿತ್ತು: ಸಚಿವ ರಾಜಣ್ಣ: ಹಾಸನಾಂಬ ದರ್ಶನೋತ್ಸವ ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ಗರ್ಭಗುಡಿಯ ಬಾಗಿಲು ತೆರೆದ ವೇಳೆ ದೀಪ ಉರಿಯುತ್ತಿತ್ತು ಎಂದು ಹೇಳಿದ ಸಚಿವ ರಾಜಣ್ಣ ಅವರು, ಈ ಬಗ್ಗೆ ಪರ ವಿರೋಧ ಮಾತುಗಳು ನಡೆಯುತ್ತಿದೆ. ನಮ್ಮ ಕಣ್ಣಲ್ಲಿ ನಾನು ನೋಡಿದ್ದನ್ನು ಹೇಳಿದ್ದೇನೆ ಎಂದು ತಿಳಿಸಿದ ಸಚಿವ ರಾಜಣ್ಣ ಅವರು, ಈ ಬಗ್ಗೆ ಪರ ವಿರೋಧ ಮಾತುಗಳು ನಡೆಯುತ್ತಿದೆ. ನಮ್ಮ ಕಣ್ಣಲ್ಲಿ ನೋಡಿದ್ದನ್ನು ಹೇಳಿದ್ದೇನೆ ಎಂದು ತಿಳಿಸಿದರು.

Share this article