ಹಾಸನಾಂಬೆ ಅಕ್ಕ ಕೆಂಚಾಂಬಿಕೆ ಜಾತ್ರೋತ್ಸವ ಸಂಪನ್ನ

KannadaprabhaNewsNetwork |  
Published : Oct 30, 2025, 01:45 AM IST
27ಎಚ್ಎಸ್ಎನ್7ಎ : ಹಾಸನಾಂಬೆ ದೇವಿಯ ಮೆರಪಾದುಕೆ. | Kannada Prabha

ಸಾರಾಂಶ

ಹಾಸನಾಂಬೆ ದೇವಿ ಸೇರಿ ಒಟ್ಟು ಏಳು ಜನ ಸಹೋದರಿಯರಲ್ಲಿ ಹಿರಿಯಳಾದ ಕೆಂಚಾಂಬೆ (ಬ್ರಾಹ್ಮದೇವಿ) ಹರಿಹಳ್ಳಿಯಲ್ಲಿ ನೆಲೆಸಿದ್ದಾಳೆ. ಹಾಸನಾಂಬೆ ದೇವಸ್ಥಾನದ ಬಾಗಿಲು ಹಾಕಿದ ಮರುದಿನ ಕೆಂಚಾಂಬಿಕೆ ದೇವಿ ಜಾತ್ರೆ ಉತ್ಸವಾದಿಗಳು ಪ್ರಾರಂಭವಾಗುತ್ತವೆ. ದೇವಸ್ಥಾನದ ಪ್ರಧಾನ ಅರ್ಚಕ ಎಚ್.ಎನ್. ರಾಮಸ್ವಾಮಿ ಕುಟುಂಬ ಸದಸ್ಯರಾದ ಸತ್ಯನಾರಾಯಣ್ ಹಾಗೂ ವ್ಯವಸ್ಥಾಪನಾ ಸಮಿತಿ ಮಂಡಳಿಯ ಅಧ್ಯಕ್ಷ ಗೋಪಾಲ (ರಘು) ಸೇರಿದಂತೆ ಆಡಳಿತ ಮಂಡಳಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಕನ್ನಡಪ್ರಭ ವಾರ್ತೆ ಆಲೂರುತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬೆ ದೇವಿ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ ಸುಮಾರು 48 ಹಳ್ಳಿಗಳ ಭಕ್ತರೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಹಾಸನಾಂಬೆ ದೇವಿ ಸೇರಿ ಒಟ್ಟು ಏಳು ಜನ ಸಹೋದರಿಯರಲ್ಲಿ ಹಿರಿಯಳಾದ ಕೆಂಚಾಂಬೆ (ಬ್ರಾಹ್ಮದೇವಿ) ಹರಿಹಳ್ಳಿಯಲ್ಲಿ ನೆಲೆಸಿದ್ದಾಳೆ. ಹಾಸನಾಂಬೆ ದೇವಸ್ಥಾನದ ಬಾಗಿಲು ಹಾಕಿದ ಮರುದಿನ ಕೆಂಚಾಂಬಿಕೆ ದೇವಿ ಜಾತ್ರೆ ಉತ್ಸವಾದಿಗಳು ಪ್ರಾರಂಭವಾಗುತ್ತವೆ. ದೇವಸ್ಥಾನದ ಪ್ರಧಾನ ಅರ್ಚಕ ಎಚ್.ಎನ್. ರಾಮಸ್ವಾಮಿ ಕುಟುಂಬ ಸದಸ್ಯರಾದ ಸತ್ಯನಾರಾಯಣ್ ಹಾಗೂ ವ್ಯವಸ್ಥಾಪನಾ ಸಮಿತಿ ಮಂಡಳಿಯ ಅಧ್ಯಕ್ಷ ಗೋಪಾಲ (ರಘು) ಸೇರಿದಂತೆ ಆಡಳಿತ ಮಂಡಳಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಕೆಂಚಮ್ಮನ ಹೊಸಕೋಟೆ, ಕುಂದೂರು ಹೋಬಳಿ ಹಾಗೂ ಪಾಳ್ಯ ಹೋಬಳಿಗೆ ಸೇರಿದ ಸುತ್ತಮುತ್ತಲಿನ ಸುಮಾರು 48 ಹಳ್ಳಿಗಳ ಅಧಿದೇವತೆಯಾಗಿರುವ. ಕೆಂಚಾಂಬ ದೇವಿಯವರ ಉತ್ಸವವು ಜಾತ್ರಾ ಮಹೋತ್ಸವದ ಮೊದಲ ದಿನವಾದ ಶನಿವಾರ ರಾತ್ರಿ ಮೂಲ ದೇವಾಸ್ಥಾನದಲ್ಲಿ ದೇವಿಯ ಏಳು ಮುಖಗಳುಳ್ಳ ಮೂರ್ತಿಗಳಾದ ಬ್ರಾಹ್ಮಿ, ಮಹೇಶ್ವರಿ ಕೌಮಾರಿ, ವೈಷ್ಣವಿ, ವಾರಾಣಿ, ಇಂದ್ರಾಣಿ ಚಾಮುಂಡಿ ದೇವಿಯರಿಗೆ ಸಪ್ತಮಾತೃಕೆಯರ ಅಲಂಕಾರ ಮಾಡಿ ಮಹಾ ಮಂಗಳಾರತಿ ಬೆಳಗುವ ಮೂಲಕ ಜಾತ್ರಾ ಕೈಂಕರ್ಯಗಳನ್ನು ವಿದ್ಯುಕ್ತವಾಗಿ ಆರಂಭಿಸಲಾಯಿತು. ಈ ಸಂದರ್ಭ ಚಾಮುಂಡೇಶ್ವರಿ ದೇವಿಯ ಸಮಾಗಮನವನ್ನು ಇಲ್ಲಿ ನೋಡಬಹುದಾಗಿದ್ದು ನಂತರ ದೇವಾಲಯ ಆವರಣದಲ್ಲಿರುವ ಸುಗ್ಗಿ ಕಟ್ಟೆ ಮುಂದೆ ವಿಶೇಷ ಪೂಜೆ ನಡೆದು ಜನರು ಸುಗ್ಗಿ ಕಟ್ಟೆ ಮುಂದೆ ಕುಣಿದು ಸಂಭ್ರಮಿಸಿದರು.

ಭಾನುವಾರ ಬೆಳಗ್ಗೆ ಮೂಲ ದೇವಸ್ಥಾನದಿಂದ ಉತ್ಸವ ಮೂರ್ತಿಯೊಂದಿಗೆ, ಬೆಳ್ಳಿ ಒಡವೆಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆ ಮೈದಾನದಲ್ಲಿರುವ ಶ್ರೀ ಕೆಂಚಾಂಬ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತರಲಾಯಿತು. ಈ ಮೆರವಣಿಗೆಯಲ್ಲಿ ಪ್ರತಿ ಕುಟುಂಬದವರು ಉತ್ಸವ ಮೂರ್ತಿಗೆ ಆರತಿ ಎತ್ತಿ ತೆಂಗಿನಕಾಯಿ ಈಡುಗಾಯಿ ಹಾಕುವುದು ವಿಶೇಷವಾಗಿತ್ತು. ಮೆರವಣಿಗೆ ದೇವಸ್ಥಾನದ ಬಳಿ ಬಂದ ನಂತರ, ಬೆಳಿಗ್ಗೆ 10.30ರ ಸಮಯದಲ್ಲಿ ಹುತ್ತದ ರೂಪದಲ್ಲಿರುವ ಕೆಂಚಾಂಬೆ ದೇವಿಗೆ ಒಡವೆಗಳನ್ನು ಧರಿಸಿ ಪೂಜಾ ವಿಧಿವಿಧಾನಗಳು ನಡೆದವು. ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ ನೆರವೇರಿಸಿ‌ ಬಲಿಪ್ರದವಾಯಿತು. ನಂತರ ಶ್ರೀ ವೀರಭದ್ರಸ್ವಾಮಿ ಉತ್ಸವ ಮೂರ್ತಿಯನ್ನು ಕೆಂಚಾಂಬ ದೇವಿಯ ಬೆಳ್ಳಿ ಪಾದದೊಂದಿಗೆ ವಾದ್ಯಗೋಷ್ಠಿ ಮೂಲಕ ಕರೆತಂದು ಮಧ್ಯಾಹ್ನ 2.30 ಗಂಟೆಗೆ ಕೆಂಡೋತ್ಸವ ನಡೆಸಲಾಯಿತು. ನಂತರ ಭಕ್ತರಿಗೆ ದೇವಿ ಪಾದ ಮುಟ್ಟಿ ನಮಸ್ಕರಿಸಲು ರಾತ್ರಿ ಹನ್ನೊಂದು ಗಂಟೆವರೆಗೂ ಅವಕಾಶ ಕಲ್ಪಿಸಲಾಗಿತ್ತು.

ನವೆಂಬರ್ 2ರವರೆಗೂ ದೇವಸ್ಥಾನದ ಬಾಗಿಲು ಬಂದ್:

ಅಕ್ಟೊಬರ್ 27ರಿಂದ ನವೆಂಬರ್ 2ವರೆಗೂ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲ. ನವೆಂಬ‌ರ್ 2ರಂದು ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ ಅಂದು ಬಾಗಿಲು ತೆರೆಯುವ ಜಾತ್ರೆಯನ್ನು ಆಚರಿಸಲಾಗುವುದು ನಂತರ ಪುಣ್ಯಾಹ, ಸ್ವಸ್ತಿವಾಚನ ಪೂರ್ವಕವಾಗಿ ನಡೆಯಲಿವೆ.

ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಂಘ ಸಂಸ್ಥೆಗಳ ಮುಖಂಡರು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವಿಗೆ ವಿಶೇಷ ಪೂಜಿಸಲ್ಲಿಸಿದರು, ತಾಲೂಕು ದಂಡಾಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ಆರಕ್ಷಕ ಅಧಿಕಾರಿಗಳು, ನಾಡಕಚೇರಿಯ ಸಿಬ್ಬಂದಿ ಸಹಿತ ದೇವಸ್ಥಾನದ ಸಮಿತಿಯವರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.ದೇವಸ್ಥಾನದ ಇತಿಹಾಸ:

ಮಹಿಷಾಸುರನೆಂಬ ರಾಕ್ಷಸನನ್ನು ಚಾಮುಂಡೇಶ್ವರಿ ಸಂಹರಿಸಿದ ನಂತರ ಅವನ ಮಂತ್ರಿಯಾಗಿದ್ದ ರಕ್ತಬೀಜಾಸುರ ಎಂಬ ರಾಕ್ಷಸ ದೇವಿಯಿಂದ ತಪ್ಪಿಸಿಕೊಂಡು ಈ ಭಾಗಕ್ಕೆ ಬರುತ್ತಾನೆ. ಅವನ ಉಪಟಳ ದಿನೇ ದಿನೇ ಹೆಚ್ಚಾಗಿ ಇಲ್ಲಿಯ ಪ್ರಾಣಿ ಪಶು ಪಕ್ಷಿಗಳಾದಿಯಾಗಿ ಮಾನವರಿಗೂ ಬದುಕುವುದೇ ಕಷ್ಟವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಮಾನವರ ಮೊರೆಗೆ ಓಗೊಟ್ಟು ರಕ್ತಬೀಜಾಸುರನ ಸಂಹಾರಕ್ಕೆಂದು ಹರಿಹಳ್ಳಿಯಲ್ಲಿ ಆದಿಶಕ್ತಿ ಅವತರಿಸುತ್ತಾಳೆ. ಇವಳು ಸರಸ್ವತಿ ಪಾರ್ವತಿ ಹಾಗೂ ಲಕ್ಷ್ಮೀಯರ ಸಂಪೂರ್ಣ ಶಕ್ತಿ ಪಡೆದು ಇಲ್ಲಿಗೆ ಬಂದು ರಾಕ್ಷಸರೊಡನೆ ಯುದ್ಧ ಮಾಡಿ ಅನೇಕರನ್ನು ಸಂಹಾರ ಮಾಡುತ್ತಾಳೆ. ಆದರೆ ರಕ್ತ ಬೀಜಾಸುರನನ್ನು ಕೊಲ್ಲುವುದು ಸುಲಭದ ಮಾತಾಗಿರುವುದಿಲ್ಲ. ಇವನ ಒಂದು ಹನಿ ರಕ್ತ ನೆಲಕ್ಕೆ ಬಿದ್ದರೆ ಅವನಷ್ಟೇ ಶಕ್ತಿಯುಳ್ಳ ಸಹಸ್ರ ರಾಕ್ಷಸರು ಹುಟ್ಟುತ್ತಿದ್ದರು. ಹೀಗಾಗಿ ಆದಿಶಕ್ತಿ ಕೆಂಚಾಂಬಿಕೆಯು ಈತನನ್ನು ಉಪಾಯದಿಂದ ಸಂಹರಿಸುವ ಸಂಕಲ್ಪ ಮಾಡಿ ತನ್ನ ನಾಲಿಗೆಯನ್ನು ನೆಲದ ಮೇಲೆ ಹಾಸಿ ಅದರ ಮೇಲೆ ರಾಕ್ಷಸ ಬರುವಂತೆ ಮಾಡಿ ಕೊಂದಳು. ಹೀಗೆ ರಕ್ತ ಬೀಜಾಸುರನ ಸಂಹಾರ ಮಾಡಿದ ಸ್ಥಳದಲ್ಲೇ ಕೆಂಚಾಂಬಿಕೆ ನೆಲೆಸಿದ್ದಾಳೆ ಎಂದು ಇತಿಹಾಸ ಹೇಳುತ್ತದೆ. ಈ ಕತೆಗೆ ಪೂರಕವಾಗಿ ಇಲ್ಲಿನ ಮಣ್ಣು ಕೆಂಪಾಗಿದೆ ಎಂದು ದೇಗುಲದ ಪ್ರಧಾನ ಅರ್ಚಕ ರಾಮಸ್ವಾಮಿ ತಿಳಿಸಿದರು.

* ಹೇಳಿಕೆ

ವರ್ಷದಲ್ಲಿ ಎರಡು ಬಾರಿ ಅಮ್ಮನವರ ಜಾತ್ರೆ ನಡೆಯುತ್ತದೆ. ದೊಡ್ಡ ಜಾತ್ರೆ ಮತ್ತು ಚಿಕ್ಕ ಜಾತ್ರೆ. ಚಿಕ್ಕಜಾತ್ರೆಯಲ್ಲಿ ಅಮ್ಮನ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುವ ಅವಕಾಶವಿದೆ. ಹಾಸನಾಂಬೆ ದೇವಸ್ಥಾನದ ಬಾಗಿಲು ಹಾಕಿದ 3 ದಿನದ ನಂತರ ಹರಿಹಳ್ಳಿ ಗ್ರಾಮದಲ್ಲಿ ಚಿಕ್ಕಜಾತ್ರೆ ನಡೆಯುತ್ತದೆ. ಬಂದಂತ ಸಾವಿರಾರು ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

- ಎಚ್ ಡಿ ಗೋಪಾಲ್, ಕೆಂಚಾಂಬೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು