;Resize=(412,232))
ಚಿತ್ರದುರ್ಗ : ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಕಾಳಗ ಶುರುವಾಗಿದ್ದು, ಅದು ವಿಕೋಪಕ್ಕೆ ಹೋಗುತ್ತಿದೆ. ನವೆಂಬರ್ ಅಂತ್ಯಕ್ಕೆ ಕಾಂಗ್ರೆಸ್ ಕಿತ್ತಾಟ ತಾರ್ಕಿಕ ಅಂತ್ಯ ಕಾಣುವ ಮುನ್ಸೂಚನೆ ಈಗಾಗಲೇ ಸಿಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿ ಇದೆ. ಮುಖ್ಯಮಂತ್ರಿಯವರ ಹೇಳಿಕೆಯನ್ನು ಆಡಳಿತ ಪಕ್ಷದ ಶಾಸಕರೇ ಒಪ್ಪಿಕೊಳ್ಳುತ್ತಿಲ್ಲ. ನವೆಂಬರ್ ನಂತರವೂ ಸಿಎಂ ಆಗಿ ಉಳಿಯುವ ಬಗ್ಗೆ ಸಿದ್ದರಾಮಯ್ಯಗೆ ವಿಶ್ವಾಸ ಇಲ್ಲ. ಈ ಮೊದಲು ಐದು ವರ್ಷ ನಾನೇ ಸಿಎಂ ಎಂದು ಹೇಳಿದ್ದರು. ಈಗ ಹೈಕಮಾಂಡ್ ಸೂಚಿಸಿದರೆ ಐದು ವರ್ಷ ಇರುತ್ತೇನೆ ಎನ್ನುತ್ತಿದ್ದಾರೆ. ಕೆಲ ಶಾಸಕರು ಡಿಕೆಶಿ ಸಿಎಂ ಆಗಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಿಂದ ರಾಜ್ಯದ ಅಭಿವೃದ್ಧಿ ಕಡೆಗಣನೆಯಾಗಿದೆ ಎಂದರು.
ಅತಿವೃಷ್ಠಿಗೆ ಪರಿಹಾರ ಕೊಡುವ ಯೋಗ್ಯತೆಯೂ ಸರ್ಕಾರಕ್ಕಿಲ್ಲ. ಕಾಂಗ್ರೆಸ್ ನ ಆಂತರಿಕ ಕಚ್ಚಾಟ ಉಲ್ಬಣಗೊಳ್ಳುತ್ತಿದ್ದು, ಸಿಎಂ ಆಗಲು ಹಲವರು ಈಗಾಗಲೇ ಟವಲ್ ಹಾಕಿ ಕೂತಿದ್ದಾರೆ. ಕಾಂಗ್ರೆಸ್ ಬಣ ಕದನದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತಾಗಿದೆ. ಬಡವರ, ರೈತರ, ಅಭಿವೃದ್ಧಿ ವಿರೋಧಿ ಸರ್ಕಾರವಿದು. ಜನ ಈಗಾಗಲೇ ಸರ್ಕಾರಕ್ಕೆ ಉಗಿದು ಶಾಪ ಹಾಕುತ್ತಿದ್ದಾರೆ. ಕಚ್ಚಾಟದಲ್ಲಿ ನಿರತವಾದ ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು ಎಂದು ಜನ ಮಾತನಾಡುತ್ತಿದ್ದಾರೆ. ಸಚಿವರು, ಶಾಸಕರೇ ಪ್ರತಿ ದಿನ ಬಡಿದಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳಿಂದ ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿದ್ದು, ತೆಲಂಗಾಣ ಸಿಎಂ ನೌಕರರಿಗೆ ಸಂಬಳ ಕೊಡಲೂ ಆಗುತ್ತಿಲ್ಲ ಎಂದಿದ್ದಾರೆ. ನಮ್ಮ ರಾಜ್ಯದ ಪರಿಸ್ಥಿತಿ ಏನೂ ಇದಕ್ಕಿಂತ ಭಿನ್ನವಾಗಿ ಉಳಿದಿಲ್ಲ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಆಗುತ್ತಿಲ್ಲ. ರಾಜ್ಯದಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಿದೆ. ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ, ಗೃಹ ಸಚಿವರು ಈ ಬಗ್ಗೆ ಕಾಳಜಿಯನ್ನೇ ತೋರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.