ಇದೇ ಮೊದಲ ಬಾರಿಗೆ ವ್ಯಕ್ತಿಗೆ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿ ಗ್ರಾಮವೊಂದಕ್ಕೆ ನೀಡಿದೆ
ಸೋಮರಡ್ಡಿ ಅಳವಂಡಿ ಕೊಪ್ಪಳ
ಈ ಊರಲ್ಲಿ ಮದ್ಯಪಾನ ಮಾಡುವಂತೆಯೂ ಇಲ್ಲ, ಮದ್ಯ ಮಾರುವಂತೆಯೂ ಇಲ್ಲ.
ಇದು, ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ಮಹಿಳೆಯರ ಹೋರಾಟದ ಫಲ.
ಮಹಿಳೆಯರ ಹೋರಾಟದಿಂದ ಕಳೆದೊಂದು ವರ್ಷದಿಂದ ಗ್ರಾಮ ಮದ್ಯ ಮುಕ್ತವಾಗಿದ್ದು, ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಈ ಮಹಿಳೆಯರ ಒಗ್ಗಟ್ಟಿನ ಹೋರಾಟದಿಂದ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇದೇ ಮೊದಲ ಬಾರಿಗೆ ವ್ಯಕ್ತಿಗೆ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿ ಗ್ರಾಮವೊಂದಕ್ಕೆ ನೀಡಿದೆ.
ಸಾಮಾನ್ಯವಾಗಿ ಮದ್ಯವ್ಯಸನಿ ಮದ್ಯ ಮುಕ್ತನಾದ ಮೇಲೆ ಪರಿವರ್ತನೆಯ ಬದುಕು ಸಾಗಿಸುತ್ತಿದ್ದರೆ ಅಂತಹ ವ್ಯಕ್ತಿಗೆ ಅಥವಾ ಮದ್ಯಪಾನ ವಿರೋಧಿ ಹೋರಾಟ ಮಾಡುತ್ತ, ಮದ್ಯಪಾನ ಮಾಡದಿರುವಂತೆ ಜಾಗೃತಿ ಮೂಡಿಸುವ ವ್ಯಕ್ತಿಗೆ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರತಿ ವರ್ಷವೂ ರಾಜ್ಯಮಟ್ಟದ ಮದ್ಯಪಾನ ಸಂಯಮ ಪ್ರಶಸ್ತಿ ಕೊಡುತ್ತದೆ.
ಈ ವರ್ಷ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳಿಗೆ ಈ ಪ್ರಶಸ್ತಿ ನೀಡಲು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮುಂದಾಗಿತ್ತು. ಇದಕ್ಕಾಗಿ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳನ್ನು ಭೇಟಿಯಾಗಿ ಪ್ರಶಸ್ತಿ ಕೊಡಮಾಡುವ ಕುರಿತು ಮನವರಿಕೆ ಮಾಡಲು ಪ್ರಯತ್ನಿಸಲಾಯಿತು. ಆದರೆ ಶ್ರೀಗಳು ನನಗ್ಯಾವ ಪ್ರಶಸ್ತಿಯೂ ಬೇಡ, ಯಾವ ಪ್ರಶಸ್ತಿ ನಾನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಪ್ರಶಸ್ತಿ ಸ್ವೀಕಾರ ಮಾಡಲು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮ ಸೂಕ್ತವಾಗಿದೆ ಎಂದು ಸಲಹೆ ನೀಡಿದರು. ಹೀಗಾಗಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದಾಗ, ಗ್ರಾಮದಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧ ಇರುವುದು ಕಂಡು ಬಂದಿದೆ.
ಗ್ರಾಮದ ಮಹಿಳೆಯರು ಒಗ್ಗಟ್ಟಾಗಿ ಮದ್ಯಪಾನ ವಿರುದ್ಧ ಹೋರಾಟ ಮಾಡಿ, ಗ್ರಾಮವನ್ನು ಮದ್ಯಮುಕ್ತ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ವ್ಯಕ್ತಿಗೆ ನೀಡುವ ಪ್ರಶಸ್ತಿ ಇದೇ ಮೊದಲ ಬಾರಿಗೆ ಹಟ್ಟಿ ಗ್ರಾಮಕ್ಕೆ ರಾಜ್ಯ ಮದ್ಯಪಾನ ಸಂಯಮ ಪ್ರಶಸ್ತಿ ಹಾಗೂ ಲಕ್ಷ ರುಪಾಯಿ ನಗದು ಬಹುಮಾನ ಘೋಷಣೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ:ಹಟ್ಟಿ ಗ್ರಾಮಕ್ಕೆ ಆ. 16ರಂದು ಪ್ರಶಸ್ತಿ ಪ್ರದಾನ ಮಾಡಲು ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ಗ್ರಾಮದಲ್ಲಿ ಭರ್ಜರಿ ಸಿದ್ಧತೆ ನಡೆದಿದೆ.
ಮಹಿಳೆಯರ ಹೋರಾಟ-ನೆಮ್ಮದಿ:ಹಟ್ಟಿ ಗ್ರಾಮದಲ್ಲಿ ಅತಿಯಾದ ಮದ್ಯಪಾನದಿಂದ ಕೆಲ ಯುವಕರು ಪ್ರಾಣತೆತ್ತಿದ್ದರು. ಅಲ್ಲದೆ ಗ್ರಾಮದಲ್ಲಿ ನೆಮ್ಮದಿ ಇಲ್ಲದಂತಾಗಿತ್ತು. ನಿಮ್ಮಿಂದ ಮಾತ್ರ ಗ್ರಾಮವನ್ನು ಮದ್ಯಪಾನ ಮುಕ್ತ ಮಾಡಲು ಸಾಧ್ಯ ಎಂದು ಹಿರಿಯರು ಗ್ರಾಮದ ಮಹಿಳೆಯರಿಗೆ ಹೇಳಿದ್ದರು. ಗ್ರಾಮದ ಮಹಿಳೆಯರೆಲ್ಲ ಒಗ್ಗಟ್ಟಾಗಿ 2-3 ವರ್ಷಗಳ ಹಿಂದೆ ನಿರಂತರ ಹೋರಾಟ ಮಾಡಿದ್ದರು. ಆ ಪರಿಣಾಮ ಗ್ರಾಮದಲ್ಲಿ ಕಳೆದೊಂದು ವರ್ಷದಿಂದ ಮದ್ಯಪಾನ ನಿಷೇಧ ಹಾಗೂ ಮದ್ಯ ಮಾರಾಟ ನಿಷೇಧ ಜಾರಿಯಾಗಿದೆ. ಇದರಿಂದ ಈಗ ಗ್ರಾಮದಲ್ಲಿ ನೆಮ್ಮದಿ ಮನೆ ಮಾಡಿದೆ. ಮಹಿಳೆಯರ ಹೋರಾಟ ಈಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಹತ್ತು ಸಾವಿರ ರೊಟ್ಟಿ:ಹಟ್ಟಿ ಗ್ರಾಮದಲ್ಲಿ ಗವಿಸಿದ್ದೇಶ್ವರ ಮಠದ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ಅವರು ಪ್ರತಿ ವರ್ಷ 10,000ಕ್ಕೂ ಅಧಿಕ ರೊಟ್ಟಿ ಕೈಯಿಂದಲೇ ತಟ್ಟಿ ತಯಾರಿಸಿ, ಗವಿಸಿದ್ದೇಶ್ವರ ಜಾತ್ರೆಗೆ ತಂದುಕೊಡುತ್ತಾರೆ. ಇದಕ್ಕಾಗಿ ಒಗ್ಗಟ್ಟಾದ ಮಹಿಳೆಯರು ರೊಟ್ಟಿ ತಟ್ಟುತ್ತಲೆ ತಮ್ಮೂರಿನ ಗಂಭೀರ ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ. ಮದ್ಯಪಾನ ವಿರುದ್ಧ ಹೋರಾಡಲು ತೀರ್ಮಾನಿಸಿದ್ದಾರೆ. ಇದರ ಫಲವೇ ಈಗ ರಾಜ್ಯ ಮದ್ಯಪಾನ ಸಂಯಮ ಮಂಡಳಿ ರಾಜ್ಯಮಟ್ಟದ ಪ್ರಶಸ್ತಿ.
ನಮ್ಮೂರು ಮಹಿಳೆಯರು ಹೋರಾಟ ಮಾಡಿದ ಪರಿಣಾಮ ಈಗ ಗ್ರಾಮ ಮದ್ಯಪಾನ ಮತ್ತು ಮದ್ಯ ಮಾರಾಟ ಮುಕ್ತವಾಗಿದೆ. ಇದುವೇ ಈಗ ರಾಜ್ಯಮಟ್ಟದ ಪ್ರಶಸ್ತಿ ಲಭಿಸುವಂತೆ ಮಾಡಿದೆ ಎಂದು ಗ್ರಾಮಸ್ಥ ರಾಮಣ್ಣ ಚೌಡ್ಕಿ ತಿಳಿಸಿದ್ದಾರೆ.
ಹಟ್ಟಿ ಗ್ರಾಮದ ಮಹಿಳೆಯರ ನಡೆ ನಿಜಕ್ಕೂ ಮಾದರಿ. ಇಂಥ ಮಹಿಳೆಯರನ್ನು ಗುರುತಿಸಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಗ್ರಾಮಕ್ಕೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.