ಕನ್ನಡಪ್ರಭ ವಾರ್ತೆ ಚಿತ್ರದುರ್ಗ ದೀಪಾವಳಿಯು ಬೆಳಕಿನ ಹಬ್ಬವಾಗಿದ್ದು, ಹಬ್ಬವನ್ನು ಪರಿಸರಸ್ನೇಹಿಯಾಗಿ ಸರಳ ರೀತಿಯಲ್ಲಿ ಮಾಲಿನ್ಯ ರಹಿತವಾಗಿ ಆಚರಿಸಬೇಕು. ಹಸಿರು ಪಟಾಕಿಯನ್ನು ಹೊರತುಪಡಿಸಿ ಇತರೆ ಪಟಾಕಿಯ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯನ್ನು ಜಿಲ್ಲೆಯಾದ್ಯಂತ ಸಡಗರದಿಂದ ಆಚರಿಸಲಾಗುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು ಶಬ್ಧ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟು ಮಾಡಿ ಪರಿಸರಕ್ಕೆ ಹಾನಿ ಮಾಡುತ್ತವೆ ಹಾಗೂ ಜನರ ಆರೋಗ್ಯ ಹದಗೆಡಿಸುತ್ತಿದೆ. ಪ್ರಾಣಿ-ಪಕ್ಷಿಗಳ ಕಲರವಕ್ಕೆ ಘಾಸಿ ಉಂಟು ಮಾಡುತ್ತಿದೆ. ಹೀಗಾಗಿ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಸರಳ ರೀತಿಯಲ್ಲಿ ಮಾಲಿನ್ಯ ರಹಿತವಾಗಿ ಆಚರಿಸವುದು ಸೂಕ್ತವಾಗಿದೆ ಎಂದಿದ್ದಾರೆ.ಹಸಿರು ಪಟಾಕಿಗೆ ಮಾತ್ರ ಅವಕಾಶ: ದೀಪಾವಳಿ ಹಬ್ಬ ಆಚರಿಸುವ ಸಂಬಂಧ ಸರ್ವೋಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನ ಹಾಗೂ ರಾಜ್ಯ ಸರ್ಕಾರವು ಪಟಾಕಿ ಬಳಕೆ ಕುರಿತಂತೆ ನೀಡಿರುವ ಆದೇಶದ ಮೇರೆಗೆ ಜವಾಬ್ದಾರಿಯುತ ನಾಗರಿಕರು ಮಾರ್ಗಸೂಚಿ ಅನುಸರಿಸುವಂತೆ ಮನವಿ ಮಾಡಿದ್ದಾರೆ. ಸರ್ಕಾರದ ನಿರ್ದೇಶನದಂತೆ ಹಸಿರು ಪಟಾಕಿಗ ಳನ್ನು ಹೊರತುಪಡಿಸಿ, ಬೇರೆ ಯಾವುದೇ ರೀತಿಯ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.ನಿಷೇಧಿತ ಪಟಾಕಿಗಳ ಮಾರಾಟ ಕಂಡುಬಂದಲ್ಲಿ ಅಂತಹ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ನಿಯಮಗಳನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಬ್ಬದ ಸಮಯದಲ್ಲಿ ರಾತ್ರಿ ೮ ಗಂಟೆಯಿಂದ ೧೦ ಗಂಟೆವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಸ್ಪೋಟಿಸಲು ಅವಕಾಶ ನೀಡಿದ್ದು, ಉಳಿದ ಸಮಯದಲ್ಲಿ ಪಟಾಕಿಗಳ ಸ್ಪೋಟ ನಿಷೇಧಿಸಲಾಗಿದೆ. ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೬ ಗಂಟೆಯವರೆಗೆ ಪಟಾಕಿ ಸ್ಪೋಟವನ್ನು ನಿಷೇಧಿಸಲಾಗಿದೆ. ೧೨೫ ಡೆಸಿಬಲ್‍ಗಳಿಗಿಂತಲೂ ಹೆಚ್ಚಿನ ಶಬ್ಧ ಮಾಡುವ ಪಟಾಕಿಗಳನ್ನು ಕೂಡ ನಿಷೇಧಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ವೃದ್ಧಾಶ್ರಮಗಳ ಹತ್ತಿರ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.ಈಗಾಗಲೇ ಪರಿಸರ ಅಧಿಕಾರಿಗಳು ಪಟಾಕಿ ಅಂಗಡಿ ಮಾಲೀಕರೊಂದಿಗೆ ಸಭೆ ನಡೆಸಿ, ಕಡ್ಡಾಯವಾಗಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ಹಾಗೂ ರ‍್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಪರಿಸರ ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಪರಿಸರಸ್ನೇಹಿ ದೀಪಾವಳಿ ಆಚರಣೆಗಾಗಿ ಜಿಲ್ಲೆಯ ನಾಗರಿಕರ ಸಹಕಾರ ಹಾಗೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನ್ಯಾಯಾಲಯದ ಆದೇಶ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.ಸಾಧ್ಯವಾದಷ್ಟು ಹಣತೆ ದೀಪ ಹಚ್ಚುವ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ಮಾಡಿದ್ದಾರೆ.
ಹಸಿರು ಪಟಾಕಿಗಳ ಗುರುತಿಸುವಿಕೆಪಟಾಕಿ ಬಾಕ್ಸ್‌ಗಳ ಮೇಲೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಮತ್ತು ನ್ಯಾಷನಲ್ ಎನ್ವಿರಾನ್‍ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್ಸಿಟಿಟ್ಯೂಟ್ ಲೋಗೋ ಹಾಗೂ ನೋಂದಾಯಿತ ಸಂಖ್ಯೆ ಮುದ್ರಿತವಾಗಿರುತ್ತದೆ. ಅಧಿಕೃತ ಮಾರಾಟಗಾರರು ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರದಿಂದ ನೀಡುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು.