ಭೀಮಣ್ಣ ಗಜಾಪುರ ಕೂಡ್ಲಿಗಿ
ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶದಲ್ಲಿ ಹೆಚ್ಚು ಕಂಡು ಬರುವ ಬಿಳಿಗಲ್ಲದ ಬೀಸಣಿಕೆ ನೊಣಹಿಡುಕ ಹಕ್ಕಿಯನ್ನು ನೋಡುವುದೇ ಸೋಜಿಗ!ಹಕ್ಕಿಯನ್ನು ಬಿಳಿ ಗಂಟಲಿನ ಪ್ಯಾಂಟೆಲ್ ಎಂದು ಕರೆಯುತ್ತಿದ್ದು, ವೈಟ್ ಥ್ರೋಟೆಡ್ ಪ್ಯಾಂಟೈಲ್ ಫ್ಲೈ ಕ್ಯಾಚರ್ ಎಂತಲೂ ಕರೆಯುತ್ತಾರೆ.
ಈ ಪುಟ್ಟಹಕ್ಕಿ ನವಿಲನ್ನು ನಾಚಿಸುವಂತೆ ತನ್ನ ಪುಟ್ಟ ಪುಕ್ಕದ ಬಾಲವನ್ನು ಅರಳಿಸಿದಾಗ ಈ ಪುಟ್ಟಹಕ್ಕಿಯ ಸೌಂದರ್ಯಕ್ಕೆ ಬೆರಗಾಗದವರೇ ಇಲ್ಲ. ಮನೆಯ ಮುಂದಿನ ಮರಗಳಲ್ಲಿ, ಮರದ ಕೆಳಗೆ ಕ್ರಿಮಿಕೀಟ, ನೊಣಗಳನ್ನು ತಿನ್ನುವ ಈ ಹಕ್ಕಿಯ ಜೀವನವೇ ನಮ್ಮನ್ನು ಚಕಿತಗೊಳಿಸುತ್ತದೆ.
ಈ ಹಕ್ಕಿಯು ಬೂದು ವರ್ಣದಲ್ಲಿದೆ. ಬಿಳಿಗಲ್ಲ ಹೊಂದಿದ ಈ ಹಕ್ಕಿಗೆ ಹುಬ್ಬು ಕೂಡ ಬಿಳಿ ಬಣ್ಣದ್ದು. ನೋಡಲು ಬಾಲ ಉದ್ದವಾಗಿ ಕಂಡರೂ ಬಾಲ ಬಿಚ್ಚಿದರೆ ಬೀಸಣಿಕೆಯಾಕಾರದಲ್ಲಿ ನವಿಲಿನಂತೆ ಅರಳಿಸುತ್ತೆ.
ಪುನಃ ಪುಕ್ಕ ಮುದುಡಿಸಿದಾಗ ಇನ್ನೂ ಸುಂದರವಾಗಿ ಕಾಣುತ್ತದೆ. ತುಂಬ ಚುರುಕಾದ ಈ ಹಕ್ಕಿ ಸದಾ ಬಾಲ ಅರಳಿಸುವುದು, ಮುಚ್ಚುತ್ತಿರುತ್ತದೆ.
ಕಾಡು, ಕುರುಚಲು ಕಾಡು, ಪೊದೆಗಳು, ಮನೆಯ ಮುಂದಿನ ಗಿಡಮರಗಳ ಮೇಲೆ ಮತ್ತು ನೆಲದ ಮೇಲೆ ಇರುವ ಕೀಟಗಳನ್ನು ತಿನ್ನುವ ಈ ಹಕ್ಕಿ ಬಲು ಚಮತ್ಕಾರದ ಪಕ್ಷಿ.
ಅಷ್ಟೇ ಚಟುವಟಿಕೆಯಿಂದ ಕೂಡಿದ ಈ ಹಕ್ಕಿ ಇದು. ಬಟ್ಟಲಿನ ಆಕಾರದಲ್ಲಿ ಗೂಡು ಕಟ್ಟುತ್ತದೆ. ಹುಲ್ಲು, ನಾರುಗಳಿಂದ ಗೂಡನ್ನು ಹೆಣೆಯುವ ಈ ಹಕ್ಕಿ ಗೂಡಿನ ಮೇಲ್ಭಾಗದಲ್ಲಿ ಜೇಡರ ಬಲೆ ಸುತ್ತುವ ಮೂಲಕ ಗೂಡಿನ ರಕ್ಷಣೆ ಮಾಡುತ್ತದೆ. ಮೊಟ್ಟೆ ಮರಿಗಳನ್ನು ಗಂಡು, ಹೆಣ್ಣು ಹಕ್ಕಿಗಳು ಎರಡೂ ಜವಾಬ್ದಾರಿ ವಹಿಸುತ್ತವೆ.
ಬೀಸಣಿಕೆ ಹಕ್ಕಿಯ ವಿಸ್ಮಯಗಳು: ಈ ಹಕ್ಕಿ 19.5 ಸೆಂ.ಮೀ. ಉದ್ದವಿದೆ. ಕಪ್ಪು ಪ್ಯಾನ್ ಆಕಾರದ ಬಾಲ ಹೊಂದಿದ್ದು, ಮಾರ್ಚ್‌ನಿಂದ ಆಗಸ್ಟ್ ವರೆಗೆ ಮರಗಳಲ್ಲಿ ಬಟ್ಟಲಾಕಾರದ ಗೂಡು ಕಟ್ಟಿ ಆ ಗೂಡಿನಲ್ಲಿ 2 ಸೆಂ.ಮೀ. ಅಳತೆಯ 3 ಬಿಳಿ ಬಣ್ಣದ ಮೊಟ್ಟೆಗಳನ್ನು ಈ ಹಕ್ಕಿ ಇಡುತ್ತದೆ.
ಹಕ್ಕಿಯ ಕೂಗು ಗಂಡು ಹಕ್ಕಿಯ ಹುಡುಕುವುದು, ಹಕ್ಕಿಯನ್ನು ಪತ್ತೆ ಮಾಡುವುದಕ್ಕಾಗಿ ತನ್ನದೇ ಆದ ಧ್ವನಿಯಿಂದ ಕೂಗುತ್ತದೆ. ಈ ಹಕ್ಕಿಯ ಕೂಗು ಇಂಪಾದ ಸಿಳ್ಳೆಯಂತಿರುತ್ತದೆ.
ನಮ್ಮ ಮನೆಯ ಮುಂದಿನ ಬಾರಿಗಿಡದಲ್ಲಿ ಕಾಣಿಸುವ ಈ ಹಕ್ಕಿಗಳು ಪುಟ್ಟ ಬಾಲದಲ್ಲಿ ಬೀಸಣಿಕೆಯಾಕಾರದಲ್ಲಿ ಪುಕ್ಕಗಳನ್ನು ಅರಳಿಸುವ ರೀತಿಯನ್ನು ನೋಡುವುದೇ ಸೋಜಿಗ. ಕೀಟಗಳನ್ನು ತಿನ್ನುವಾಗ ಚುರುಕಾಗಿ ಪುಕ್ಕ ಮಡಿಚುವುದು, ಅರಳಿಸುವುದನ್ನು ಮಾಡುತ್ತವೆ ಎನ್ನುತ್ತಾರೆ ಪಕ್ಷಿ ಪ್ರೇಮಿ ಕಾವ್ಯ.