ಉತ್ಪಾದಕರಿಂದ ಖರೀದಿ ಮಾಡುವ ಹಾಲಿನ ದರ ₹3.50 ಕಡಿತ ಮಾಡಿದ್ದ ಆದೇಶವನ್ನು ಹಿಂಪಡೆದ ಹಾವೇರಿ ಒಕ್ಕೂಟ

KannadaprabhaNewsNetwork | Updated : Apr 07 2025, 05:34 AM IST

ಸಾರಾಂಶ

ಉತ್ಪಾದಕರಿಂದ ಖರೀದಿ ಮಾಡುವ ಪ್ರತಿ ಲೀಟರ್‌ಗೆ ಹಾಲಿಗೆ ₹3.50 ಕಡಿತ ಮಾಡಿದ್ದ ಆದೇಶವನ್ನು ಹಿಂಪಡೆಯಲು ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾವೆಮುಲ್‌) ಕೈಗೊಂಡಿದೆ. ದರ ಕಡಿತಕ್ಕೆ ರೈತರಿಂದ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ.

  ಹಾವೇರಿ :  ಉತ್ಪಾದಕರಿಂದ ಖರೀದಿ ಮಾಡುವ ಪ್ರತಿ ಲೀಟರ್‌ಗೆ ಹಾಲಿಗೆ ₹3.50 ಕಡಿತ ಮಾಡಿದ್ದ ಆದೇಶವನ್ನು ಹಿಂಪಡೆಯಲು ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾವೆಮುಲ್‌) ಕೈಗೊಂಡಿದೆ. ದರ ಕಡಿತಕ್ಕೆ ರೈತರಿಂದ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ.

ಈ ನಡುವೆ ಸರ್ಕಾರ ಇತ್ತೀಚೆಗೆ ಹಾಲು ಖರೀದಿ ದರದಲ್ಲಿ ಮಾಡಿದ್ದ 4 ರು. ಏರಿಕೆ ಬದಲಾಗಿ, ₹2.50 ಮಾತ್ರ ಹೆಚ್ಚಿಸುವ ನಿರ್ಧಾರವನ್ನು ಹಾವೆಮುಲ್‌ ಕೈಗೊಂಡಿದೆ.

ಆದರೆ, ಕೇವಲ ₹2.50 ಏರಿಕೆ ಮಾಡಿರುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರ ₹4 ಏರಿಸಿದಂತೆ ಇಲ್ಲಿಯೂ ₹4 ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ್ದು, ಈ ಸಂಬಂಧ ಸೋಮವಾರ ಎಲ್ಲ ತಾಲೂಕುಗಳಲ್ಲಿ ಹಾಗೂ ಹಾವೇರಿಯ ಹಾವೆಮುಲ್‌ ಕಚೇರಿ ಎದುರು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ.

ನಗರದಲ್ಲಿ ಭಾನುವಾರ ಸಂಜೆ ತುರ್ತು ಮಾಧ್ಯಮಗೋಷ್ಠಿ ನಡೆಸಿದ ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ ಈ ಬಗ್ಗೆ ಮಾಹಿತಿ ನೀಡಿದರು. ಮಾ.28ರಂದು ಹೊರಡಿಸಿದ್ದ ದರ ಕಡಿತದ ಆದೇಶವನ್ನು ವಾಪಸ್‌ ಪಡೆಯಲಾಗಿದೆ. ಸರ್ಕಾರ ಏರಿಸಿರುವ ಪ್ರತಿ ಲೀಟರ್‌ಗೆ ₹4 ಬದಲಿಗೆ ₹2.50 ಹೆಚ್ಚಳ ಮಾಡಲಾಗುತ್ತಿದೆ. ಏ.1ರಿಂದ ಪೂರ್ವಾನ್ವಯವಾಗುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ ₹34.05 ದರವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ₹4 ಏರಿಕೆ ಮಾಡಿದ್ದ ವೇಳೆ ಹಾವೆಮುಲ್‌ ಉತ್ಪಾದಕರಿಗೆ ನೀಡುವ ದರದಲ್ಲಿ ₹3.50 ಇಳಿಕೆ ಮಾಡಿತ್ತು. ಇದು ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿತ್ತು. ಜಿಲ್ಲೆಯ ರೈತರು ಇದರ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಅಲ್ಲದೆ, ಸೋಮವಾರ ಎಲ್ಲ ತಾಲೂಕುಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಎಚ್ಚೆತ್ತ ಹಾವೆಮುಲ್‌ ಆಡಳಿತ ಮಂಡಳಿ ತುರ್ತಾಗಿ ಸಭೆ ನಡೆಸಿ ದರ ಪರಿಷ್ಕರಣೆಯ ನಿರ್ಧಾರ ಕೈಗೊಂಡಿದೆ.

ಮಾ.28ರಂದು ಕೈಗೊಂಡಿದ್ದ ದರ ಪರಿಷ್ಕರಣೆ ಆದೇಶವನ್ನು ಹಿಂಪಡೆಯಲಾಗಿದೆ. ಮೊದಲಿನ ದರಕ್ಕೆ ₹2.50 ಹೆಚ್ಚುವರಿಯಾಗಿ ಸೇರಿ ಲೀಟರ್‌ ಹಾಲಿಗೆ ₹34.05 ನಂತೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ರೈತರು ಸಹಕರಿಸಬೇಕು.

- ಮಂಜನಗೌಡ ಪಾಟೀಲ, ಹಾವೆಮುಲ್‌ ಅಧ್ಯಕ್ಷ.

 ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ₹4 ಏರಿಕೆ ಮಾಡಿದೆ. ಅದರಂತೆ ಜಿಲ್ಲೆಯಲ್ಲೂ ₹4 ಹೆಚ್ಚಳ ಮಾಡಬೇಕು. ಕೇವಲ ₹2.50 ಏರಿಕೆ ಮಾಡಿರುವುದು ಸರಿಯಲ್ಲ. ಆದ್ದರಿಂದ ಸೋಮವಾರ ಎಲ್ಲ ತಾಲೂಕುಗಳಲ್ಲಿ ಹಾಗೂ ಹಾವೇರಿ ಹಾವೆಮುಲ್‌ ಕಚೇರಿ ಎದುರು ರೈತರು ಹೋರಾಟ ನಡೆಸಲಿದ್ದಾರೆ.

- ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡರು.

Share this article