40 ವರ್ಷಗಳಲ್ಲಿ ಇಂತಹ ಭೀಕರ ಬರ ಕಂಡಿಲ್ಲ: ಡಿಸಿಎಂ ಡಾ.ಜಿ.ಪರಮೇಶ್ವರ್‌

KannadaprabhaNewsNetwork |  
Published : Oct 09, 2026, 01:15 AM IST
8ಕೆಪಿಎಸ್ಎನ್ಡಿ1ಎ:  | Kannada Prabha

ಸಾರಾಂಶ

ರಾಜ್ಯದ 240 ತಾಲ್ಲೂಕುಗಳ ಪೈಕಿ 217 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ ಸುಮಾರು 10 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಡಿಸಿಎಂ ಪರಮೇಶ್ವರ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಕಳೆದ 40 ವರ್ಷಗಳಲ್ಲಿ ಇಂತಹ ಭೀಕರ ಬರವನ್ನು ಕಂಡಿಲ್ಲ. ಕಳೆದ ಎರಡು ದಿನಗಳ ಪ್ರವಾಸದಲ್ಲಿ ಹಲವು ಪ್ರದೇಶಗಳಲ್ಲಿ ಶೇ.98ರಷ್ಟು ಬೆಳೆ ಹಾನಿಯಾಗಿ ರುವುದು ಕಂಡುಬಂದಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ತಾಲ್ಲೂಕಿನ ಕಲಮಂಗಿ ಮತ್ತು ಉಮಲೂಟಿ ಗ್ರಾಮಗಳಲ್ಲಿ ತೊಗರಿ ಬೆಳೆ ಹಾನಿಯಾಗಿರುವುದನ್ನು ಗುರುವಾರ ವೀಕ್ಷಿಸಿದ ನಂತರ ರೈತರ ಸಂವಾದ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ರಾಜ್ಯದ 240 ತಾಲ್ಲೂಕುಗಳ ಪೈಕಿ 217 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ ಸುಮಾರು 10 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ. ಬರ ಪರಿಸ್ಥಿತಿ ಗಂಭೀರವಾಗಿದ್ದು, ರೈತರನ್ನು ಯಾವುದೇ ಕಾರಣಕ್ಕೂ ಸಂಕಷ್ಟದಲ್ಲಿ ಕೈಬಿಡುವುದಿಲ್ಲ ಎಂದರು.

ರೈತರ ತಕ್ಷಣದ ನೆರವಿಗಾಗಿ ₹1,250 ಕೋಟಿ ಮೊತ್ತದಲ್ಲಿ ಮೊದಲ ಕಂತಿನ ₹2,500 ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಕಂತಿನ ಪರಿಹಾರವನ್ನೂ ಒದಗಿಸಲಾಗುವುದು. ವಾರ್ಷಿಕ ರೂ.52 ಸಾವಿರ ಕೋಟಿ ಮೊತ್ತದ ಗ್ಯಾರಂಟಿ ಯೋಜನೆಗಳು ಹಾಗೂ ₹22 ಸಾವಿರ ಕೋಟಿ ರೈತರ ವಿದ್ಯುತ್ ಸಬ್ಸಿಡಿಯನ್ನು ಮುಂದುವರಿಸಲಾಗಿದೆ. ಅಗತ್ಯವಿದ್ದರೆ ಸಾಲ ಮಾಡಿಯಾದರೂ ರೈತರ ನೆರವಿಗೆ ಸರ್ಕಾರ ನಿಲ್ಲಲಿದೆ ಎಂದರು.

ಕುಡಿಯುವ ನೀರಿಗಾಗಿ ₹306 ಕೋಟಿ ಹಾಗೂ ಮೇವು ಬ್ಯಾಂಕ್ ಮತ್ತು ಮೇವು ಕಿಟ್ಗಳಿಗಾಗಿ ₹25 ಕೋಟಿ ಒದಗಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಅಗತ್ಯ ಅನುದಾನ ನೀಡಲಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನವನ್ನೂ ಬಳಸಿಕೊಳ್ಳಲಾಗುತ್ತಿದೆ. ಬರದಿಂದ ಜನರು ಗುಳೆ ಹೋಗು ವುದನ್ನು ತಡೆಯಲು ಸ್ಥಳೀಯವಾಗಿಯೇ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಕೂಲಿ ಹಣವನ್ನು ಸಕಾಲದಲ್ಲಿ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಸಾಧ್ಯವಾದಷ್ಟು ಹಗಲು ವೇಳೆಯಲ್ಲಿಯೇ ಸಮರ್ಪಕ ವೋಲ್ಟೇಜ್ನೊಂದಿಗೆ ಆರು ಗಂಟೆ ನಿರಂತರ ವಿದ್ಯುತ್ ಪೂರೈಸುವಂತೆ ಅಧಿಕಾರಿ ಗಳಿಗೆ ನಿರ್ದೇಶಿಸಲಾಗಿದೆ. ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆಯೂ ಸೂಚಿಸಲಾಗಿದೆ ಎಂದರು.

ಬರ ಪಕ್ಷಾತೀತ ಸಮಸ್ಯೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ರೈತರ ನೆರವಿಗೆ ನಿಲ್ಲಬೇಕು. ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರ ಬದುಕು ಮತ್ತು ಜೀವನೋಪಾಯ ರಕ್ಷಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿ ಪೂವಿತಾ ಎಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಸಹಾಯಕ ಆಯುಕ್ತ ನಾಗೇಂದ್ರ ಬಾಬು, ಡಾ.ಹಂಪಣ್ಣ ಸಜ್ಜನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್, ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಎಸ್ಸೆಸ್ಸೆಕೆ ಪುನಶ್ಚೇತನಕ್ಕೆ ಕೃಷಿಕ ಸಮಾಜ ಆಗ್ರಹ
ಪದವೀಧರರು, ಶಿಕ್ಷಕರ ದನಿಯಾಗುವೆ: ಶಶಿ ಹುಲಿಕಂಟೆಮಠ್