ಮಳೆ ಹಾನಿ ಪ್ರದೇಶಗಳಿಗೆ ಹಾವೇರಿ ಜಿಲ್ಲಾಧಿಕಾರಿ ಭೇಟಿ

KannadaprabhaNewsNetwork |  
Published : May 25, 2025, 01:35 AM IST
ಹಾವೇರಿ ಜಿಲ್ಲೆಯ ವಿವಿಧೆಡೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಭೇಟಿ ನೀಡಿ, ಮಳೆಗಾಲದ ಕಾಮಗಾರಿ ವೀಕ್ಷಿಸಿದರು. | Kannada Prabha

ಸಾರಾಂಶ

ಹಾವೇರಿ ಜಿಲ್ಲೆಯ ವಿವಿಧ ನಗರಗಳಿಗೆ ಶನಿವಾರ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಭೇಟಿ ನೀಡಿ ಚರಂಡಿ, ರಾಜಕಾಲುವೆ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ ಕಾರ್ಯ ವೀಕ್ಷಿಸಿದರು.

ಹಾವೇರಿ: ಜಿಲ್ಲೆಯ ವಿವಿಧ ನಗರಗಳಿಗೆ ಶನಿವಾರ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಭೇಟಿ ನೀಡಿ ಚರಂಡಿ, ರಾಜಕಾಲುವೆ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ ಕಾರ್ಯ ವೀಕ್ಷಿಸಿದರು.

ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ನಗರದ ಚರಂಡಿ, ರಾಜಕಾಲುವೆಗಳು ಸ್ವಚ್ಛವಾಗಿರಬೇಕು. ಮಳೆ ನೀರು ಚರಂಡಿ ಕಾಲುವೆಗಳ ಮೂಲಕ ಸಾರಾಗವಾಗಿ ಹರಿದು ಹೋಗಬೇಕು. ಈ ನಿಟ್ಟಿನಲ್ಲಿ ಎಲ್ಲ ಚರಂಡಿ ಹಾಗೂ ಕಾಲುವೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎರಡು ದಿನಗಳ ಹಿಂದೆ ಸುರಿದ ಬಾರಿ ಮಳೆಗೆ ನೀರು ರಸ್ತೆ ಮೇಲೆ ಬಂದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಮಾಡಿತ್ತು. ಇದು ಮತ್ತೆ ಮರುಕಳಿಸಬಾರದು ಎಂದು ನಗರಸಭೆ ಅಧಿಕಾರಿಗಳಿಗೆ ಎಚ್ಚರಿಸಿದರು.

ಮಳೆಗಾಲದಲ್ಲಿ ಜನರಿಗೆ ಕಲುಷಿತ ಕುಡಿಯುವ ನೀರು ಪೂರೈಕೆಯಾಗದ ಹಾಗೆ ನೋಡಿಕೊಳ್ಳಬೇಕು. ನಗರದಲ್ಲಿ ಕುಡಿಯುವ ನೀರಿನ ಎಲ್ಲ ಪೈಪ್‌ಗಳನ್ನು ದುರಸ್ತಿಪಡಿಸಬೇಕು. ಕಲುಷಿತ ನೀರು ವಿವಿಧ ರೋಗ-ರುಜುನಗಳಿಗೆ ಕಾರಣವಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಸದ್ಯದ ಮಟ್ಟಿಗೆ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಅರಿವು ಮೂಡಿಸಬೇಕು. ಮನೆ ಮುಂದೆ ಮಳೆಯ ನೀರು ನಿಲ್ಲದೆ ಹಾಗೆ ನೋಡಿಕೊಳ್ಳುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.

ಹಾನಗಲ್ ತಹಸೀಲ್ದಾರ್ ಕಚೇರಿಗೆ ಭೇಟಿ: ಹಾನಗಲ್ಲ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಹಾಗೂ ಸಿಬ್ಬಂದಿ ಸಭೆ ನಡೆಸಿ, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಕಂದಾಯ ಗ್ರಾಮ ಹಕ್ಕುಪತ್ರ ವಿತರಣೆಗೆ ಸಂಬಂಧಪಟ್ಟಂತೆ ಹಕ್ಕುದಾರರಿಗೆ ನ್ಯಾಯಯುತವಾಗಿ ತಲುಪಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ತಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಸಿಬ್ಬಂದಿ ಕಚೇರಿಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕು. ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸಕಾಲಕ್ಕೆ ವಹಿಸಿರುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಬೇಕು. ಜನರನ್ನು ಪದೇ ಪದೇ ಕಚೇರಿಗೆ ಅಲೆಯುವಂತೆ ಮಾಡಬಾರದು. ನಿಮ್ಮ ಕೆಲಸದಿಂದ ಸಾರ್ವಜನಿಕರನ್ನು ಮೆಚ್ಚಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಮಳೆಗಾಲ ಆರಂಭವಾಗಿದ್ದು, ಮಳೆಯಿಂದ ಸಾರ್ವಜನಿಕ ಆಸ್ತಿಗಳಿಗೆ ಧಕ್ಕೆ ಉಂಟಾದಲ್ಲಿ ತುರ್ತು ಭೇಟಿ ಕೊಟ್ಟು ಪರಿಹಾರ ಒದಗಿಸಬೇಕು. ಜನರನ್ನು ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಎಲ್ಲರೂ ಜಾಗ್ರತರಾಗಿ ಕೆಲಸ ಮಾಡಬೇಕು ಎಂದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ