ರೈತರು, ಕಾರ್ಖಾನೆ ಮಾಲೀಕರೊಂದಿಗೆ ಹಾವೇರಿ ಡಿಸಿ ಸಂಧಾನ ಸಭೆ ವಿಫಲ, ಮುಂದುವರಿದ ಹೋರಾಟ

KannadaprabhaNewsNetwork |  
Published : Nov 13, 2025, 01:00 AM IST

ಸಾರಾಂಶ

ಪ್ರತಿ ಟನ್‌ ಕಬ್ಬಿಗೆ ₹3300 ನೀಡುವಂತೆ ಆಗ್ರಹಿಸಿ ಜಿಲ್ಲೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಮೂರು ದಿನ ಕಳೆದಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರೊಂದಿಗೆ ಜಿಲ್ಲಾಧಿಕಾರಿಗಳು ಬುಧವಾರ ನಡೆಸಿದ ಸಂಧಾನ ಸಭೆ ರಾತ್ರಿವರೆಗೂ ಮುಂದುವರಿದಿದೆ.

ಹಾವೇರಿ: ಪ್ರತಿ ಟನ್‌ ಕಬ್ಬಿಗೆ ₹3300 ನೀಡುವಂತೆ ಆಗ್ರಹಿಸಿ ಜಿಲ್ಲೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಮೂರು ದಿನ ಕಳೆದಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರೊಂದಿಗೆ ಜಿಲ್ಲಾಧಿಕಾರಿಗಳು ಬುಧವಾರ ನಡೆಸಿದ ಸಂಧಾನ ಸಭೆ ರಾತ್ರಿವರೆಗೂ ಮುಂದುವರಿದಿದೆ.ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಹೋರಾಟ ನಿರತ ರೈತ ಮುಖಂಡರನ್ನು ಕರೆದು ಸಂಧಾನ ಸಭೆ ನಡೆಸಿದರು. ಆದರೆ ರೈತರ ಬೇಡಿಕೆಯಷ್ಟು ಹಣ ಕೊಡಲು ಆಗುವುದಿಲ್ಲ. ಇಳುವರಿ ಆಧಾರದ ಮೇಲೆ ಎಫ್‌ಆರ್‌ಪಿ ದರ ಮತ್ತು ಅದಕ್ಕೆ ಸರ್ಕಾರದ ₹50 ಮಾತ್ರ ಕೊಡಲು ಸಾಧ್ಯ ಎಂದು ಕಾರ್ಖಾನೆ ಮಾಲೀಕರು ವಾದ ಮಂಡಿಸಿದರು. ಆದರೆ ಇದಕ್ಕೆ ಒಪ್ಪದ ರೈತ ಮುಖಂಡರು, ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ನಿಗೆ ₹3300 ಕೊಡಲೇಬೇಕು ಎಂದು ಪಟ್ಟು ಹಿಡಿದರು. ಇದರಿಂದ ರಾತ್ರಿವರೆಗೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಇಲ್ಲಿಯ ಮೈಲಾರ ಮಹದೇವಪ್ಪ ವೃತ್ತದಲ್ಲಿ ರೈತರು ಹೋರಾಟ ಮುಂದುವರಿಸಿದ್ದು, ಅತ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಧಾನ ಸಭೆ ಮುಂದುವರಿದಿದೆ. ಸಭೆಯಲ್ಲಿ ಯಾವ ನಿರ್ಧಾರ ಬರುತ್ತದೋ ಅದರ ಅಧಾರದ ಮೇಲೆ ಹೋರಾಟ ಮುಂದುವರಿಸಬೇಕೋ ಎಂಬುದನ್ನು ನಿರ್ಧರಿಸುತ್ತೇವೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದರು.ಸರ್ಕಾರ ಘೋಷಣೆ ಮಾಡಿದಂತೆ ಟನ್ ಕಬ್ಬಿಗೆ ₹೩,೩೦೦ ದರವನ್ನು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು ಸೋಮವಾರದಿಂದ ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ.ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರರು ಬೆಳಗಾವಿ, ಬಾಗಲಕೋಟೆ ರೈತರಿಗೆ ೧೧.೨೫ ಇಳುವರಿ ಆಧಾರದ ಮೇಲೆ ₹೩,೩೦೦ ಕೊಡುವುದಾಗಿ ಘೋಷಣೆ ಮಾಡಿದೆ. ಆದರೆ ಹಾವೇರಿ ಜಿಲ್ಲೆಯಲ್ಲೂ ಸರಾಸರಿ ಅಷ್ಟೇ ರಿಕವರಿ ಬರುತ್ತದೆ. ಕಾರ್ಖಾನೆಯವರು ಇಳುವರಿ ಕಡಿಮೆ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿರುವ ಕಾರ್ಖಾನೆಗಳು ೯.೪೨ ಇಳುವರಿ ತೋರಿಸಿ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿವೆ. ಉತ್ತರ ಕರ್ನಾಟಕದ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿ ಮಾಡಿ ನೀಡಬೇಕು ಎಂದು ಆಗ್ರಹಿಸಿದರು.ಬೇಡಿಕೆಗಳು: ಬೆಳಗಾವಿ, ಬಾಗಲಕೋಟೆ ಕಬ್ಬು ಬೆಳೆಗಾರರಿಗೆ ನೀಡುವ ₹೩,೩೦೦ ದರ ಜಿಲ್ಲೆಯ ರೈತರಿಗೂ ನೀಡಬೇಕು. ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರೆ ಭರಿಸಬೇಕು. ರಿಕವರಿ ಇಳುವರಿಯಲ್ಲಿ ಆಗುವ ಮೋಸ ತಡೆಗಟ್ಟಬೇಕು. ಪ್ರತ್ಯೇಕವಾಗಿ ಇಳುವರಿ ಪ್ರಯೋಗಾಲಯ (ರಿಕವರಿ ಲ್ಯಾಬ್) ಸ್ಥಾಪಿಸಬೇಕು. ಸರ್ಕಾರಿ ತೂಕದ ಯಂತ್ರವನ್ನು ಅಳವಡಿಸಬೇಕು. ಬಾಕಿ ಬಿಲ್‌ನ್ನು ಪಾವತಿ ಮಾಡಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ