ನಾರಾಯಣ ಹೆಗಡೆ
ಪಕ್ಷನಿಷ್ಠೆ, ಹಿರಿತನ, ಜಾತಿ, ಯುವ ನಾಯಕ ಇತ್ಯಾದಿ ಅಸ್ತ್ರ ಹಿಡಿದು ಜಿಲ್ಲೆಯ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಜಿಲ್ಲೆಯ ಎಲ್ಲ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಜಿಲ್ಲೆಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಎಂಬ ಪ್ರಬಲ ವಿಷಯ ಇಟ್ಟುಕೊಂಡು ಸಂಪುಟ ಸೇರುವ ಕಸರತ್ತು ನಡೆಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ, ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಮಟ್ಟಿಗೆ ಭರ್ಜರಿ ಶಕ್ತಿ ನೀಡಿದ್ದು ಹಾವೇರಿ ಜಿಲ್ಲೆ. ಕಳೆದ ಚುನಾವಣೆಯಲ್ಲಿ 5 ಕ್ಷೇತ್ರಗಳನ್ನು ಗೆದ್ದು, ಬಳಿಕ ಶಿಗ್ಗಾಂವಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅದನ್ನೂ ಸೇರಿ ಜಿಲ್ಲೆಯ ಎಲ್ಲ 6 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದು ಇತಿಹಾಸ ಸೃಷ್ಟಿಸಿದೆ. ಹಾಗೆ ನೋಡಿದರೆ ಜಿಲ್ಲೆಗೆ ಎರಡೂವರೆ ವರ್ಷದ ಹಿಂದೆಯೇ ಮಂತ್ರಿಗಿರಿ ಸಿಗಬೇಕಿತ್ತು ಎಂಬುದು ಪಕ್ಷದ ಕಾರ್ಯಕರ್ತರ ವಾದ. ಆದರೆ, ವಿವಿಧ ರಾಜಕೀಯ ಕಾರಣದಿಂದ ಜಿಲ್ಲೆಯ ಶಾಸಕರಿಗೆ ಮಂತ್ರಿಗಿರಿ ಕೈತಪ್ಪಿತ್ತು. ಈಗ ಸರ್ಕಾರ ಮೂರು ವರ್ಷ ಪೂರೈಸಿರುವುದು ಹಾಗೂ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ರಾಜ್ಯ ರಾಜಕೀಯದ ಚರ್ಚೆ ದೆಹಲಿ ಅಂಗಳ ತಲುಪಿದೆ. ಆದ್ದರಿಂದ ಇದೇ ಸಂದರ್ಭದಲ್ಲಿ ಜಿಲ್ಲೆಯ ಶಾಸಕರ ಮಂತ್ರಿಗಿರಿ ಕನಸು ಮತ್ತೊಮ್ಮೆ ಚಿಗುರೊಡೆದಿದ್ದು, ಈ ನಿಟ್ಟಿನಲ್ಲಿ ಕಸರತ್ತು ಆರಂಭಿಸಿದ್ದಾರೆ. ಜಿಲ್ಲೆಯ ಕೆಲವು ಶಾಸಕರು ತಮ್ಮ ನಿಷ್ಠೆಯ ನಾಯಕರನ್ನು ಭೇಟಿಯಾಗಿ ಒತ್ತಡ ಹೇರುವ ತಂತ್ರ ಆರಂಭಿಸಿದ್ದಾರೆ.ಜಿಲ್ಲೆಗೆ ಮಂತ್ರಿ ಸ್ಥಾನ ಕೊಡಿ: ಸಂಪುಟ ಪುನಾರಚನೆಯಾದರೆ ಮಂತ್ರಿ ಸ್ಥಾನಕ್ಕೆ ಅರ್ಹರು ಜಿಲ್ಲೆಯಲ್ಲಿ ಹಲವು ಶಾಸಕರಿದ್ದಾರೆ. ಆದ್ದರಿಂದ ಜಿಲ್ಲೆಗೆ ಈ ಸಲ ಮಂತ್ರಿ ಸ್ಥಾನ ಕೊಡಿ ಎಂಬುದು ಎಲ್ಲ ಶಾಸಕರ ಪ್ರಮುಖ ಬೇಡಿಕೆಯಾಗಿದೆ. ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಯಾಸೀರ್‌ಖಾನ್ ಪಠಾಣ ಸದ್ಯ ದೆಹಲಿಯಲ್ಲಿದ್ದಾರೆ. ವಾರದ ಹಿಂದೆಯೇ ಶ್ರೀನಿವಾಸ ಮಾನೆ ದೆಹಲಿ ಭೇಟಿ ಮಾಡಿ ಬಂದಿದ್ದಾರೆ. ವಿಧಾನಸಭೆ ಉಪಾಧ್ಯಕ್ಷರಾಗಿರುವ ರುದ್ರಪ್ಪ ಲಮಾಣಿ ಅವರು ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ. ಅಲ್ಲದೇ ತಾನು ಬಂಜಾರ ಸಮುದಾಯದ ಏಕೈಕ ಶಾಸಕನಾಗಿದ್ದು, ಮೊದಲ ಅವಧಿಯಲ್ಲೇ ಸಚಿವ ಸ್ಥಾನ ಸಿಗಬೇಕಿತ್ತು, ಮುಂದೆ ಅವಕಾಶ ನೀಡುತ್ತೇವೆ ಎಂದು ಹೈಕಮಾಂಡ್ ಭರವಸೆ ನೀಡಿತ್ತು. ಆದ್ದರಿಂದ ಈ ಸಲ ಸಂಪುಟ ಪುನಾರಚನೆಯಾದರೆ ಅವಕಾಶ ಸಿಗುತ್ತದೆ ಎಂಬ ಭರವಸೆಯನ್ನು ರುದ್ರಪ್ಪ ಲಮಾಣಿ ವ್ಯಕ್ತಪಡಿಸಿದ್ದಾರೆ.
ಸಂಪುಟ ಪುನಾರಚನೆಯಾದರೆ ವಿಧಾನ ಪರಿಷತ್‌ನತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿರುವ ಸಲೀಂ ಅಹ್ಮದ್ ಕೂಡ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವವರಲ್ಲಿ ಪ್ರಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಅವರು, ಮಂತ್ರಿಯಾಗುವ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಪ್ರಚಾರದಲ್ಲಿ ಚುರುಕಾಗಿ ತೊಡಗಿಕೊಂಡಿದ್ದ ಸಲೀಂ ಅಹ್ಮದ್, ಸಂಪುಟ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ವಿಳಂಬ ಸಾಧ್ಯತೆ: ಪವರ್ ಶೇರಿಂಗ್ ಬಗ್ಗೆ ಭಾರಿ ಚರ್ಚೆ ನಡೆದಿರುವುದರಿಂದ ದೆಹಲಿ ಸೇರಿದ್ದ ಶಾಸಕರು ವಾಪಸಾಗುತ್ತಿದ್ದಾರೆ. ಸಿಎಂ ಬದಲಾವಣೆಯಾದರೆ ಸಂಪುಟ ವಿಸ್ತರಣೆ ಸ್ವಲ್ಪ ದಿನ ವಿಳಂಬವಾಗಬಹುದು ಎಂಬ ಮಾಹಿತಿ ಮೇರೆಗೆ ಶಾಸಕರ ಸಂಪುಟ ಸೇರುವ ಕನಸಿಗೆ ಇನ್ನೂ ಕೆಲವು ದಿನ ಕಾಯಬೇಕಾಗಬಹುದು ಎನ್ನಲಾಗಿದೆ.