ಹಾವೇರಿ: ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ಆಶ್ರಯದಲ್ಲಿ ಎರಡನೆಯ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಿತು.
ಹಾವೇರಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ರಮೇಶ ತೆವರಿ ಸಮಾರೋಪ ಭಾಷಣ ಮಾಡಿ, ಕನ್ನಡ ಸಾಹಿತ್ಯಕ್ಕೆ ಹಾವೇರಿ ನೆಲದ ಲೇಖಕರ ಕೊಡುಗೆ ಅಪಾರ, ಸೌಹಾರ್ದದ ನೆಲೆಯಲ್ಲಿ ಇಲ್ಲಿಯ ಸಾಹಿತ್ಯ ಓದದೆ, ಕನ್ನಡ ಸಾಹಿತ್ಯ ಅರ್ಥೈಸಲಾಗದು. ಹಾವೇರಿ ನೆಲಕ್ಕೆ ತನ್ನದೆ ಆದ ಛಾಪು ಇದೆ ಎಂದರು.
ಸರ್ವಾಧ್ಯಕ್ಷ ಜಿ.ಎಂ. ಓಂಕಾರಣ್ಣನವರ ಅವರನ್ನು ವೇದಿಕೆಯ ಪರವಾಗಿ ಸನ್ಮಾನಿಸಲಾಯಿತು. ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ''''ನನ್ನ ಸಾಹಿತ್ಯ ಸೇವೆಗೆ ಸಿಕ್ಕ ದೊಡ್ಡ ಅವಕಾಶ ನನ್ನ ಜೀವನದ ಸುಕೃತ ಎಂದರು.ಸಮಾರೋಪದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಶಿವರಾಜ ಸಜ್ಜನರ ವಹಿಸಿದ್ದರು. ಸರ್ವಾಧ್ಯಕ್ಷ ಜಿ.ಎಂ. ಓಂಕಾರಣ್ಣನವರ, ಕರುನಾಡು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಡಿ. ಮುಡಣ್ಣನವರ, ಜಿಲ್ಲಾಧ್ಯಕ್ಷ ಚಂಪಾವತಿ ಹುಣಸಿಕಟ್ಟಿ, ಲಿಂಗಯ್ಯ ಹಿರೇಮಠ, ವೈ.ಬಿ. ಆಲದಕಟ್ಟಿ, ಹನುಮಂತಗೌಡ ಗೊಲ್ಲರ, ನಾಗರಾಜ ಎಚ್., ಕುಮಾರ ತಳವಾರ, ಉಪಾಧ್ಯಕ್ಷ ಎಸ್.ಎಲ್. ಕಾಡದೇವರಮಠ, ನಿಂಗಪ್ಪ ಚಾವಡಿ, ರಾಘವೇಂದ್ರ ದೊಡ್ಡಮನಿ, ಸಂಗಪ್ಪ ಕೋಳೂರ, ರೇಣುಕಾ ಗುಡಿಮನಿ, ಪ್ರಾಚಾರ್ಯ ಬಸನಗೌಡ ಎಂ., ಇದ್ದರು.
ಕನ್ನಡ ಸಾಹಿತ್ಯಕ್ಕೆ ಹಾವೇರಿ ಜಿಲ್ಲೆ ಕೊಡುಗೆ: ''ಕನ್ನಡ ಸಾಹಿತ್ಯಕ್ಕೆ ಹಾವೇರಿ ಜಿಲ್ಲೆ ಕೊಡುಗೆ'' ಎಂಬ ಗೋಷ್ಠಿ ಜರುಗಿತು. ಅಧ್ಯಕ್ಷತೆಯನ್ನು ಡಾ. ಎಸ್.ಪಿ. ಗೌಡರ ವಹಿಸಿ, ಹೊಸ ನುಡಿಗಟ್ಟುಗಳನ್ನು ಕೊಟ್ಟ ಚಂಪಾ, ಮಹಾದೇವ ಬಣಕಾರ ಆದಿಯಾಗಿ ಹಲವರು ಕನ್ನಡ ಭಾಷೆಗೆ ಮೆರಗು ತಂದವರು. ಇವರ ಬಗ್ಗೆ ಚಿಂತನ ಮಂಥನ ನಡೆಯ ಬೇಕು ಎಂದರು.
ಕವಿಗೋಷ್ಠಿ: ಹಿರಿಯ ಕವಿ ಸತೀಶ ಕುಲಕರ್ಣಿ ಅವರ ಸಾರಥ್ಯದಲ್ಲಿ ನಡೆದ ಕವಿಗೋಷ್ಠೀಯಲ್ಲಿ ನಾಡಿನ ಬೇರೆ ಬೇರೆ ಭಾಗದ 20 ಕವಿಗಳು ಕಾವ್ಯ ವಾಚನ ಮಾಡಿದರು. ಆಶಯ ನುಡಿಗಳನ್ನಾಡಿದ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ, ''''ಶಾಯರಿ ಕಾವ್ಯದ ವಿಸ್ಮಯಕಾರಿ ಪ್ರಯೋಗ. ಹೊಸ ಕವಿಗಳು ಗಝಲ್ ಮತ್ತು ಶಾಯರಿಗಳನ್ನು ಬರೆಯಬೇಕು ಎಂದರು.
ದೂರದ ಮುಂಡಗೋಡದಿಂದ ತುಸು ಅಳುಕಿನಿಂದಲೇ ಸಾಹಿತ್ಯ ಸಮ್ಮೇಳನ ನಡೆಸಲು ಬಂದ ನನಗೆ ಸಮಾಧಾನವಾಗಿದೆ. ಹಾವೇರಿ ಜನರ ಪ್ರೀತಿಯನ್ನು ಮರೆಯಲಾಗದು ಎಂದು ಸಂಸ್ಥಾಪಕ ಅಧ್ಯಕ್ಷ ಎಸ್.ಡಿ. ಮುಡೆಣ್ಣವರ ಭಾವುಕರಾಗಿ ನುಡಿದರು.