ಹಾವೇರಿ ಮೆಡಿಕಲ್ ಕಾಲೇಜಿಗೆ ಕನಕದಾಸರ ಹೆಸರು ನಾಮಕರಣ- ಸಿಎಂ ಡಿ.ಕೆ. ಶಿವಕುಮಾರ್

KannadaprabhaNewsNetwork |  
Published : Nov 28, 2026, 12:45 AM IST
ಹಾವೇರಿ ಜಿಲ್ಲೆಯ ಸುಕ್ಷೇತ್ರ ಕಾಗಿನೆಲೆಯಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವಕ್ಕೆ ಸಿಎಂ ಡಿ.ಕೆ.ಶಿವಕುಮಾರ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಹಾವೇರಿಯ ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸರ ಹೆಸರು ನಾಮಕರಣ ಮಾಡಲಾಗುವುದು. ಆ ಮೂಲಕ ಕನಕದಾಸರ ಹೆಸರನ್ನು ಶಾಶ್ವತವಾಗಿ ಉಳಿಸಲಾಗುವುದು. ಕಾಗಿನೆಲೆ ಶ್ರೀಗಳ ಬೇಡಿಕೆಯಂತೆ ವಿದ್ಯಾರ್ಥಿ ನಿಲಯಕ್ಕೆ ₹ 5 ಕೋಟಿ ಅನುದಾನ ನೀಡಲಾಗುವುದು. ಭೂಮಿಯ ಕುರಿತು ನೀಡಲಾಗಿರುವ ಬೇಡಿಕೆಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.

ಹಾವೇರಿ: ಹಾವೇರಿಯ ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸರ ಹೆಸರು ನಾಮಕರಣ ಮಾಡಲಾಗುವುದು. ಆ ಮೂಲಕ ಕನಕದಾಸರ ಹೆಸರನ್ನು ಶಾಶ್ವತವಾಗಿ ಉಳಿಸಲಾಗುವುದು. ಕಾಗಿನೆಲೆ ಶ್ರೀಗಳ ಬೇಡಿಕೆಯಂತೆ ವಿದ್ಯಾರ್ಥಿ ನಿಲಯಕ್ಕೆ ₹ 5 ಕೋಟಿ ಅನುದಾನ ನೀಡಲಾಗುವುದು. ಭೂಮಿಯ ಕುರಿತು ನೀಡಲಾಗಿರುವ ಬೇಡಿಕೆಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.

ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಅವರು, ಜಿಲ್ಲೆಯ ಸುಕ್ಷೇತ್ರ ಕಾಗಿನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸರ 539ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಕ್ತಿಯಿಂದ ದೇವರನ್ನು ಗೆದ್ದವರು ಕನಕದಾಸರು. ಇದಕ್ಕೆ ಉಡುಪಿಯ ಶ್ರೀಕೃಷ್ಣ ಕನಕದಾಸರ ಭಕ್ತಿಗೆ ಮೆಚ್ಚಿ ದರ್ಶನ ನೀಡಿದ್ದೇ ಸಾಕ್ಷಿಯಾಗಿ ನಿಂತಿದೆ. ತಮ್ಮ ಕೀರ್ತನೆ ಮೂಲಕವೇ ಶಾಂತಿ, ನೆಮ್ಮದಿ ತೋರಿಸಿಕೊಟ್ಟವರು. ಅರಸ, ರಾಜಕಾರಣಿಗೆ ಧರ್ಮ ಹಾಗೂ ಮಾತಿನಲ್ಲಿ ಮರ್ಮ ಇರಬೇಕು ಎಂಬುದನ್ನು ತೋರಿಸಿಕೊಟ್ಟರು ಎಂದರು.

ಕನಕ ಜಯಂತಿಯಂದು ಕನಕದಾಸರ ಕರ್ಮ ಭೂಮಿಗೆ ಭೇಟಿ ನೀಡಿ ನಮನ ಸಲ್ಲಿಸುವ ಭಾಗ್ಯ ಸಿಕ್ಕಿದೆ. ಕನಕದಾಸರು ಕೀರ್ತನೆ ಮೂಲಕ ಜಾತಿಯ ವಿಷ ಬೀಜ ಕಿತ್ತುಹಾಕಲು ಶ್ರಮಿಸಿದ ಮಹಾನ್ ಕ್ರಾಂತಿಕಾರಿ. ಕುಲದ ಹೆಸರಿನಲ್ಲಿ ತಾರತಮ್ಯ ಬೇಡ ಎಂದು ಸಂದೇಶ ನೀಡಿದರು. ಬಸವಣ್ಣ ಕೇವಲ ಲಿಂಗಾಯತರಿಗೆ, ಕನಕದಾಸರು ಕೇವಲ ಕುರುಬರಿಗೆ, ಅಂಬೇಡ್ಕರ್ ಅವರು ಪರಿಶಿಷ್ಟ ಸಮುದಾಯದವರಿಗೆ ಮಾತ್ರ ಸೀಮಿತವಲ್ಲ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೆ, ದೇವನೊಬ್ಬ ನಾಮ ಹಲವು. ಆತ್ಮಕ್ಕೆ ಕುಲವಿಲ್ಲ ಎಂದು ಹೇಳಿದರು.

ಕನಕರ ಸಂದೇಶದಂತೆ ಅನ್ನಭಾಗ್ಯ

ನಾವು ಮಾಡುವುದು ಹೊಟ್ಟೆ, ಬಟ್ಟೆಗಾಗಿ ಎಂಬುದನ್ನು ಅರಿಯಬೇಕು. ಕನಕದಾಸರು ಹಾಕಿಕೊಟ್ಟ ಸಮಾನತೆ ಹಾದಿಯನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕನಕದಾಸರು ಕನ್ನಡ ನಾಡಿನ ಹೆಮ್ಮೆ. ಕನ್ನಡ ಸಾಹಿತ್ಯದ ಅಮೂಲ್ಯ ರತ್ನ. ಹಸಿದು ಬಂದವರಿಗೆ ಅನ್ನ ನೀಡಿ ಎಂದು ಬುದ್ಧಿಮಾತು ಹೇಳಿದವರು. ಅವರ ಮಾತಿನಂತೆ ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನ ಬಸವ ಜಯಂತಿಯಂದು ಅನ್ನಭಾಗ್ಯ ಯೋಜನೆಗೆ ಅನುಮೋದನೆ ನೀಡಿದರು. ಆಮೂಲಕ ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂದು ತೀರ್ಮಾನ ಮಾಡಿದರು. ನಮ್ಮ ಸರ್ಕಾರ ಈಗಲೂ ಅದನ್ನು ಮುಂದುವರಿಸಿಕೊಂಡು ಬಂದಿದೆ. ರಾಜ್ಯದ 4.21 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆ ನೀಡುತ್ತಿದ್ದು, ಇದಕ್ಕಾಗಿ ವಾರ್ಷಿಕ 8,500 ಕೋಟಿ ರು. ಅನುದಾನ ನೀಡುತ್ತಿದ್ದೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಮುಂದಡಿ

ಕಾಗಿನೆಲೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲು ಚಿಂತನೆ ನಡೆಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೆಳಗೆ ನಾನು ಕೆಲಸ ಮಾಡಿದ್ದು, ಅವರ ಸರ್ಕಾರದ ಅವಧಿಯಲ್ಲಿ ಕಿಂಚಿತ್ತು ಲೋಪ ಬಾರದಂತೆ ಬಂಡೆಯಾಗಿ ನಿಂತಿದ್ದೆ. ಅವರು ನಮ್ಮ ಪಕ್ಷದ ಹಿರಿಯ ನಾಯಕರ ಆದೇಶದಂತೆ ನನಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಸಾಗುತ್ತೇವೆ. ಅವರ ಕೈಬಲಪಡಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿ ನನ್ನ ಸೇವೆ ಮುಂದುವರಿಸುತ್ತಿದ್ದೇವೆ. ಸಿದ್ದರಾಮಯ್ಯನವರು ಹಾಕಿಕೊಟ್ಟ ಹಾದಿಯಲ್ಲಿ ನನ್ನದೇ ಆದ ಹೊಸ ಚಿಂತನೆಯಲ್ಲಿ ನಮ್ಮ ಸರ್ಕಾರ ಮುಂದುವರಿಯುತ್ತಿದ್ದು, ನೀವೆಲ್ಲರೂ ಜಾತಿ, ಧರ್ಮ, ಪಕ್ಷ ಬೇಧ ಮರೆತು ನಮಗೆ ಮತ್ತೆ ಆಶೀರ್ವಾದ ಮಾಡಬೇಕು ಎಂದರು.

ಶಾಸಕರಾದ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನಕ ಗುರುಪೀಠಾಧ್ಯಕ್ಷರಾದ ನಿರಂಜನಾನಂದಪುರಿ ಸ್ವಾಮೀಜಿ, ರೇವಣಸಿದ್ದೇಶ್ವರ ಸ್ವಾಮೀಜಿ, ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಯು.ಬಿ. ಬಣಕಾರ, ಯಾಸೀರಖಾನ್ ಪಠಾಣ, ಅಜ್ಜಂಫೀರ ಖಾದ್ರಿ, ಎಸ್.ಆರ್. ಪಾಟೀಲ, ಬಿ.ಜಿ.ಗೋವಿಂದಪ್ಪ, ಉಮೇಶ ಮೇಟಿ, ಮಹೇಶ, ಹನುಂತಪ್ಪ ಮರಡಗಿ, ಶಂಭನಗೌಡ ಪಾಟೀಲ, ಧರ್ಮದರ್ಶಿ ಎಸ್.ಎಫ್.ಎನ್ ಗಾಜೀಗೌಡ್ರ, ನಾಗರಾಜ ಆನವೇರಿ, ಅಶೋಕ ಬಣಕಾರ, ಪ್ರಭುಗೌಡ ಬಿಷ್ಟನಗೌಡ್ರ, ಸಂಜೀವಕುಮಾರ ನೀರಲಗಿ, ಪ್ರಕಾಶಗೌಡ ಪಾಟೀಲ, ಆನಂದಸ್ವಾಮಿ ಗಡ್ಡದೇವರಮಠ, ಆರ್.ಶಂಕರ್, ನಂದಿಗಾವಿ ಶ್ರೀನಿವಾಸ ಇತರರು ಇದ್ದರು.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಪ್ರವೇಶದಲ್ಲಿ ಶೇ.15ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಇದರಲ್ಲಿ ಶೇ.7.5 ಅನ್ನು ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ. ಕನಕದಾಸರ ಕರ್ಮಭೂಮಿ ಕಾಗಿನೆಲೆಯನ್ನು ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಶ್ರೀಗಳು ಹಾಗೂ ಸಮಿತಿ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಕನಕದಾಸರು ಮನುಕುಲದ ಆಸ್ತಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರಿ ಕುರಿಗಾಹಿಗಳಿದ್ದಲ್ಲೇ ಪಡಿತರ ವಿತರಣೆಗೆ ಕ್ರಮ- ಸಿಎಂ ಡಿಕೆಶಿ ಭರವಸೆ
ಜಗತ್ತಿಗೆ ಮಾದರಿ ಸಂವಿಧಾನ ಕೊಟ್ಟಿದ್ದು ಅಂಬೇಡ್ಕರ್‌: ಕೆ.ಎಂ.ಸುರೇಶ