ಮಾರ್ಚ್‌ 6ರಂದು ಹಾವೇರಿ ವಿವಿ ಘಟಿಕೋತ್ಸವ, 8 ವಿದ್ಯಾರ್ಥಿಗಳಿಗೆ ಸುವರ್ಣ ಪದಕ

KannadaprabhaNewsNetwork |  
Published : Apr 04, 2026, 02:00 AM IST
3ಎಚ್‌ವಿಆರ್‌1- ಸುರೇಶ ಜಂಗಮಶೆಟ್ಟಿ | Kannada Prabha

ಸಾರಾಂಶ

ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವು ಏ. 6ರಂದು ನಡೆಯಲಿದ್ದು, ರ್ಯಾಂ ಕ್ ಪಡೆದ 8 ವಿದ್ಯಾರ್ಥಿಗಳಿಗೆ ಸುವರ್ಣ ಪದಕ ಹಾಗೂ 10 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರಗಳನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಪ್ರದಾನ ಮಾಡಲಿದ್ದಾರೆ ಎಂದು ಹಾವೇರಿ ವಿವಿ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ತಿಳಿಸಿದರು.

ಹಾವೇರಿ: ಇಲ್ಲಿಯ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವು ಏ. 6ರಂದು ನಡೆಯಲಿದ್ದು, ರ‍್ಯಾಂಕ್ ಪಡೆದ 8 ವಿದ್ಯಾರ್ಥಿಗಳಿಗೆ ಸುವರ್ಣ ಪದಕ ಹಾಗೂ 10 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರಗಳನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಪ್ರದಾನ ಮಾಡಲಿದ್ದಾರೆ ಎಂದು ಹಾವೇರಿ ವಿವಿ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ಕೆಎಲ್‌ಇ ಸಂಸ್ಥೆಯ ಜಿ.ಎಚ್. ಕಾಲೇಜು ಸಭಾಂಗಣದಲ್ಲಿ ಏ. 6ರಂದು ಬೆಳಗ್ಗೆ 11ಕ್ಕೆ ಹಾವೇರಿ ವಿಶ್ವ ವಿದ್ಯಾಲಯದ ಪ್ರಥಮ ಘಟಿಕೋತ್ಸವ ಸಮಾರಂಭ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಪಾಲರು ಹಾಗೂ ವಿಶ್ವ ವಿದ್ಯಾಲಯದ ಕುಲಾಧಿಪತಿ ಥಾವರ್‌ಚಂದ್ ಗೆಹಲೋತ್ ಅವರು ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಉಪಸ್ಥಿತರಿರಲಿದ್ದಾರೆ. ಘಟಿಕೋತ್ಸವದ ಭಾಷಣವನ್ನು ಕರ್ನಾಟಕದ ಕಾನೂನು ಆಯೋಗದ ಅಧ್ಯಕ್ಷ ಹಾಗೂ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಅಶೋಕ ಹಿಂಚಿಗೇರಿ ಮಾಡಲಿದ್ದಾರೆ ಎಂದರು. ಸಮಾರಂಭಕ್ಕೆ ವಿಧಾನಸಭೆ ಉಪಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಸೇರಿದಂತೆ ಬಾಗಲಕೋಟೆ, ಚಾಮರಾಜನಗರ ವಿವಿ ಕುಲಪತಿಗಳು, ಜಿಲ್ಲಾ ಪ್ರಧಾನ ನ್ಯಾಯಾಧೀಶರು, ಜನಪ್ರತಿನಿಗಳಿಗೆ ಆಹ್ವಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ಹಾವೇರಿ ವಿವಿ ವ್ಯಾಪ್ತಿಯಲ್ಲಿ 1063 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದಾರೆ. 400 ವಿದ್ಯಾರ್ಥಿಗಳು ಭಾಗವಹಿಸುವುದಾಗಿ ಖಚಿತಪಡಿಸಿದ್ದಾರೆಂದು ತಿಳಿಸಿದರು.

ಇಂದು ಗೌಡಾ ಘೋಷಣೆ: ವಿಶ್ವ ವಿದ್ಯಾಲಯದಿಂದ ಮೂರು ಜನ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ. ಈಗಾಗಲೇ 7 ಸಾಧಕರಿಂದ ಪ್ರಸ್ತಾವನೆ ಬಂದಿದ್ದು, ಏ. 4ರಂದು ಬೆಳಗ್ಗೆ 11ಕ್ಕೆ ವಿವಿ ಕ್ಯಾಂಪಸ್‌ನಲ್ಲಿ ಸಿಂಡಿಕೇಟ್ ಸಭೆ ನಡೆಸಿ, ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗುವುದು ಎಂದರು.

ಕುಲಸಚಿವ ಎಸ್.ಜಿ. ಬಾಗಲಕೋಟೆ, ಸಿಡಿಸಿ ನಿರ್ದೇಶಕ ರಾಘವೇಂದ್ರ ಫತ್ತೇಪುರ, ರವೀಂದ್ರ ಬಣಕಾರ, ಚಿದಾನಂದ ಕಮ್ಮಾರ ಇದ್ದರು.

ಬಂಗಾರ ಪದಕ ವಿಜೇತರು: 2025-26ನೇ ಸಾಲಿನಲ್ಲಿ ಹಾವೇರಿ ವಿವಿಯ ವಿವಿಧ ಅಧ್ಯಯನ ವಿಭಾಗಗಳಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಓವರ್ ಆಲ್ ಟಾಪರ್ ಎಂ.ಎ. ಸಮಾಜಶಾಸ್ತ್ರ ವಿಭಾಗದ ನೇತ್ರಾ ಹರಿಜನಗೆ ಸುವರ್ಣ ಪದಕ ನೀಡಲಾಗುವುದು. ಎಂ.ಎ. ಅರ್ಥಶಾಸ್ತ್ರ ವಿಭಾಗದಲ್ಲಿ ಉಸ್ಮಾನಸಾಬ್ ಮುಲ್ಲಾ, ಎಂ.ಎ. ಇಂಗ್ಲಿಷ್‌ನಲ್ಲಿ ಕಾವ್ಯಾ ಪ್ರಸಾದಿಮಠ, ಕನ್ನಡ ವಿಭಾಗದಲ್ಲಿ ಪ್ರಿಯಾಂಕಾ ಈಳಿಗೇರ, ಸಮಾಜಶಾಸ್ತ್ರದಲ್ಲಿ ನೇತ್ರಾ ಹರಿಜನ, ವಾಣಿಜ್ಯಶಾಸ್ತ್ರದಲ್ಲಿ ಐಶ್ವರ್ಯ ಮುದಿಗೌಡ್ರ, ಸಮಾಜಕಾರ್ಯ ವಿಭಾಗದಲ್ಲಿ ಧನಲಕ್ಷ್ಮೀ ಪಾಟೀಲ, ಬಿ.ಎ. ಶಿಕ್ಷಣಶಾಸ್ತ್ರದಲ್ಲಿ ನಾಗಲಕ್ಷ್ಮೀ ಬೇವಿನಮರದಗೆ ಸುವರ್ಣಪದಕಗಳನ್ನು ನೀಡಲಾಗುವುದು ಎಂದು ಕುಲಪತಿಗಳು ತಿಳಿಸಿದರು. ಹಾವೇರಿ ವಿವಿ ಪ್ರಥಮ ಘಟಿಕೋತ್ಸವ ಮತ್ತು 3ನೇ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಗೌರವಾನ್ವಿತ ರಾಜ್ಯಪಾಲರು ಘಟಿಕೋತ್ಸವ ಮುಕ್ತಾಯದ ನಂತರ ಹಾವೇರಿ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿ, ವಿವಿ ಆವರಣದಲ್ಲಿ ಸಸಿ ನೆಡಲಿದ್ದಾರೆ. ಜತೆಗೆ ಸರಸ್ವತಿ ವಿಗ್ರಹ ಅನಾವರಣ ಮತ್ತು ವಿಚಾರ ಸಂಕಿರಣ ಸಭಾಂಗಣದ ಮಾರ್ಪಾಡಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ

ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ ಮುಖ್ಯ
ಬಳ್ಳಾರಿ ಮಹಾನಗರ ಪಾಲಿಕೆ ಸಹಾಯಕ ಎಂಜಿನಿಯರ್‌ ಮೇಲೆ ಪಾಲಿಕೆ ಸದಸ್ಯನ ಹಲ್ಲೆ