ಬ್ಯಾಡಗಿ:ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) 19 ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅತಿಥೇಯ ಹಾವೇರಿ ಜಿಲ್ಲಾ ತಂಡ ಎಂಟರ ಘಟ್ಟಕ್ಕೆ ಪ್ರವೇಶ ಪಡೆಯಿತು.
ಬಾಗಲಕೋಟೆ ವಿರುದ್ದ ಮಂಡಿಯೂರಿದ ಚಿಕ್ಕೋಡಿ: ಕಳೆದ ಬಾರಿಯ ರನ್ನರ-ಅಪ ಆಗಿದ್ದ ಚಿಕ್ಕೋಡಿ ತಂಡ ಬಾಗಲಕೋಟೆ ವಿರುದ್ದ 05 ಅಂಕಗಳಿಂದ (35-40) ಪರಾಭವಗೊಳ್ಳುವ ಮೂಲಕ ನಿರಾಸೆ ಮೂಡಿಸಿತು, ಪಂದ್ಯದ ಮೊದಲಾರ್ಧದಲ್ಲಿ 05 (21-16) ಅಂಕಗಳಿಂದ ಮುನ್ನಡೆ ಸಾಧಿಸಿತ್ತು, ಗೆಲ್ಲುವ ಫೆವರೀಟ್ ಎನಿಸಿದ್ದ ಚಿಕ್ಕೋಡಿ ಈ ಬಾರಿ 16 ಘಟ್ಟದಲ್ಲೇ ಸೋತು ನಿರ್ಗಮಿಸಿದ್ದು ಪಂದ್ಯಾವಳಿಯ ಅಚ್ಚರಿ ಫಲಿತಾಂಶವಾಗಿದೆ. ಬಹುತೇಕ ರಾಷ್ಟ್ರೀಯ ಆಟಗಾರ್ತಿಯರನ್ನು ಹೊಂದಿದ್ದ ಚಿಕ್ಕೋಡಿ ಬಾಗಲಕೋಟೆ ತಂಡದ ಸಾಂಘಿಕ ಹೋರಾಟದ ಮುಂದೆ ಮಂಡಿಯೂರಿತು.
ದಕ್ಷಿಣ ಕನ್ನಡ ತಂಡಕ್ಕೆ ಜಯ: ಧಾರವಾಡ ವಿರುದ್ಧ ದಕ್ಷಿಣ ಕನ್ನಡ 42 ಅಂಕಗಳಿಂದ (63-21) ಜಯಗಳಿಸುವ ಮೂಲಕ ಎಂಟರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿತು. ಪಂದ್ಯದ ಮೊದಲಾರ್ಧದಲ್ಲಿ 28 (40-12) ಅಂಕಗಳ ಮುನ್ನಡೆ ಸಾಧಿಸಿತು. ರಾಯಚೂರು ವಿರುದ್ಧ ಶಿವಮೊಗ್ಗ 38 ಅಂಕಗಳಿಂದ (56-18) ಜಯಗಳಿಸುವ ಮೂಲಕ ಎಂಟರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿತು. ಪಂದ್ಯದ ಮೊದಲಾರ್ಧದಲ್ಲಿ 27 (33-06) ಅಂಕಗಳ ಮುನ್ನಡೆ ಸಾಧಿಸಿತ್ತು.ಚಿಕ್ಕಬಳ್ಳಾಪುರ ವಿರುದ್ಧ ಚಿಕ್ಕಮಗಳೂರು 19 ಅಂಕಗಳಿಂದ, ಬೆಂಗಳೂರು ಸೆಂಟ್ರಲ್ ವಿರುದ್ಧ ಕೋಲಾರ 45 ಅಂಕಗಳಿಂದ, ತುಮಕೂರು ವಿರುದ್ಧ ಉಡುಪಿ 35 ಅಂಕಗಳಿಂದ ಜಯಗಳಿಸುವ ಮೂಲಕ ಎಂಟರ ಘಟ್ಟಕ್ಕೆ ತಲುಪಿದವು.