ಆನ್ಲೈನ್ ಗೇಮಿಂಗ್ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಜಾಲದ ವಿರುದ್ಧ ಬಾಗಲಕೋಟೆ ಸೈಬರ್ ಕ್ರೈಂ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಕ್ರಿಕೆಟ್ ಬೆಟ್ಟಿಂಗ್, ಕ್ಯಾಸಿನೋ, ರಮ್ಮಿ, ಲೂಡೋ ಸೇರಿ ವಿವಿಧ ಆನ್ಲೈನ್ ಗೇಮಿಂಗ್ಗೆ ಸಂಬಂಧಿಸಿದ ಸುಮಾರು 495 ಯುಆರ್ಎಲ್ಗಳನ್ನು ಪತ್ತೆಹಚ್ಚಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಆನ್ಲೈನ್ ಗೇಮಿಂಗ್ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಜಾಲದ ವಿರುದ್ಧ ಬಾಗಲಕೋಟೆ ಸೈಬರ್ ಕ್ರೈಂ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಕ್ರಿಕೆಟ್ ಬೆಟ್ಟಿಂಗ್, ಕ್ಯಾಸಿನೋ, ರಮ್ಮಿ, ಲೂಡೋ ಸೇರಿ ವಿವಿಧ ಆನ್ಲೈನ್ ಗೇಮಿಂಗ್ಗೆ ಸಂಬಂಧಿಸಿದ ಸುಮಾರು 495 ಯುಆರ್ಎಲ್ಗಳನ್ನು ಪತ್ತೆಹಚ್ಚಿದ್ದಾರೆ.ಕಳೆದ 5-6 ತಿಂಗಳಿನಿಂದ ಜಿಲ್ಲೆಯ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಂದ ಆನ್ಲೈನ್ ಗೇಮಿಂಗ್ ಹೆಸರಿನಲ್ಲಿ ಹಣ ಕಳೆದುಕೊಂಡಿರುವ ಬಗ್ಗೆ ದೂರುಗಳು ಹಾಗೂ ಮಾಹಿತಿ ಲಭ್ಯವಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರತಿನಿತ್ಯ ಅನಧಿಕೃತ ಆನ್ಲೈನ್ ಗೇಮ್ಗಳ ಜಾಹೀರಾತುಗಳು ಪ್ರಸಾರವಾಗುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಸೈಬರ್ ಕ್ರೈಂ ಪೊಲೀಸ್ ಠಾಣೆ ವತಿಯಿಂದ ನಡೆಸಿದ ಸೈಬರ್ ಶೀಲ್ಡ್ ಕಾರ್ಯಾಚರಣೆಯಲ್ಲಿ ಜಿಲ್ಲೆಯ ಸುಮಾರು 1,700 ಬ್ಯಾಂಕ್ ಮೂಲ ಖಾತೆದಾರರನ್ನು ಪತ್ತೆಹಚ್ಚುವ ಕಾರ್ಯ ಕೈಗೊಳ್ಳಲಾಗಿದೆ. ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಚೆಕ್ ಮೂಲಕ ಹಣ ವಿತ್ ಡ್ರಾ ಮಾಡಿದವರನ್ನೂ ಪತ್ತೆ ಹಚ್ಚಲಾಗಿದೆ.ಕಾರ್ಯಾಚರಣೆಯಲ್ಲಿ ಜಿಲ್ಲೆಯ ಏಳು ವಿವಿಧ ಬ್ಯಾಂಕ್ಗಳ 16 ಖಾತೆಗಳಿಗೆ 62 ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಈ ಹಣವನ್ನು ಖಾತೆದಾರರು ಒಟ್ಟು 19 ಚೆಕ್ಗಳ ಮೂಲಕ ವಿತ್ ಡ್ರಾ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸಂಬಂಧಿಸಿದ ಖಾತೆದಾರರನ್ನು ವಿಚಾರಣೆಗೆ ಒಳಪಡಿಸಿದಾಗ, ತಮ್ಮ ಬ್ಯಾಂಕ್ ಖಾತೆಗಳಿಗೆ ಆನ್ಲೈನ್ ಗೇಮಿಂಗ್ ಮೂಲಕ ಹಣ ವರ್ಗಾವಣೆಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಬ್ಯಾಂಕ್ ಖಾತೆಗಳು ಫ್ರೀಜ್ ಆಗಿರುವುದು ಅಥವಾ ಖಾತೆಗಳಲ್ಲಿ ಹಣಕ್ಕೆ ಲೀನ್ ಮಾರ್ಕ್ ಆಗಿರುವ ಕುರಿತು ಪ್ರತಿದಿನ ಸಾರ್ವಜನಿಕರು ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗಲೂ ಕೆಲವರು ತಮ್ಮ ಖಾತೆಗಳಿಗೆ ಆನ್ಲೈನ್ ಗೇಮಿಂಗ್ ಮೂಲಕ ಹಣ ವರ್ಗಾವಣೆಯಾಗಿರುವುದಾಗಿ ತಿಳಿಸಿದ್ದಾರೆ.495ಕ್ಕೂ ಅಧಿಕ ಯುಆರ್ಎಲ್ಗಳ ಪತ್ತೆ:
ಬಾಗಲಕೋಟೆ ಸೈಬರ್ ಕ್ರೈಂ ಪೊಲೀಸರು ವಿವಿಧ ಓಪನ್ ಸೋರ್ಸ್ ಇಂಟೆಲಿಜೆನ್ಸ್ ಟೂಲ್ ಗಳು ಹಾಗೂ ಕೀ-ವರ್ಡ್ಗಳನ್ನು ಬಳಸಿಕೊಂಡು ಆನ್ಲೈನಲ್ಲಿ ಪರಿಶೀಲನೆ ನಡೆಸಿದಾಗ ಕ್ರಿಕೆಟ್ ಬೆಟ್ಟಿಂಗ್, ಕ್ಯಾಸಿನೋ, ರಮ್ಮಿ, ಲೂಡೋ, ಲೂಡೋಕಿಂಗ್ ಸೇರಿ ವಿವಿಧ ಆನ್ಲೈನ್ ಗೇಮಿಂಗ್ಗೆ ಸಂಬಂಧಿಸಿದ ಸುಮಾರು 495 ಯುಆರ್ಎಲ್ಗಳು ಪತ್ತೆಯಾಗಿವೆ. ಈ ಯುಆರ್ಎಲ್ಗಳು ವಿವಿಧ ದೇಶಗಳಿಗೆ ಸಂಬಂಧಿಸಿರುವುದು ಗೊತ್ತಾಗಿದೆ.ಈ ಜಾಲದ ಮೂಲಕ ಸಾಮಾಜಿಕ ಜಾಲತಾಣಗಳು ಹಾಗೂ ವಿವಿಧ ಬ್ರೌಸರ್ ಅಪ್ಲಿಕೇಷನ್ಗಳ ಮೂಲಕ ಸಾರ್ವಜನಿಕರನ್ನು ಆಕರ್ಷಿಸಿ, ಹಣ ಹೂಡಿದರೆ ಹೆಚ್ಚಿನ ಮೊತ್ತ ನೀಡುವುದಾಗಿ, ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೆಲ ಪ್ರಕರಣಗಳಲ್ಲಿ ಸಾರ್ವಜನಿಕರ ವೈಯಕ್ತಿಕ ಮಾಹಿತಿ ಪಡೆದುಕೊಳ್ಳುವುದು, ಹೂಡಿಕೆ ಮಾಡಿದ ಹಣ ಮರಳಿಸದೇ ಇರುವುದು ಹಾಗೂ ಸೈಬರ್ ಅಪರಾಧದಿಂದ ಬಂದ ಹಣವನ್ನು ಗೇಮ್ನಲ್ಲಿ ಗೆದ್ದವರಿಗೆ ನೀಡುವ ಮೂಲಕ ಹಣ ವರ್ಗಾವಣೆ ಮಾಡಿರುವ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಸಂಬಂಧ ಬಾಗಲಕೋಟೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪತ್ತೆಯಾಗಿರುವ ಯುಆರ್ಎಲ್ಗಳು ಆನ್ಲೈಲ್ನಲ್ಲಿ ಪ್ರಸಾರವಾಗದಂತೆ ಬ್ಲಾಕ್ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಕಾರ್ಯಾಚರಣೆ ಮುಂದುವರಿದಿದ್ದು, ಸಾರ್ವಜನಿಕರು ಯಾವುದೇ ಅಪರಿಚಿತ ಅಥವಾ ಅನಧಿಕೃತ ಆನ್ಲೈನ್ ಗೇಮಿಂಗ್, ಬೆಟ್ಟಿಂಗ್ ಆ್ಯಪ್ಗಳು ಹಾಗೂ ಜಾಹೀರಾತುಗಳಿಗೆ ಮರುಳಾಗಿ ಹಣ ಹೂಡಬಾರದು. ಹಣ ದ್ವಿಗುಣಗೊಳಿಸುವುದು, ಹೆಚ್ಚಿನ ಲಾಭ ನೀಡುವುದಾಗಿ ಬರುವ ಆಮಿಷಗಳಿಗೆ ಒಳಗಾಗದೆ ಎಚ್ಚರಿಕೆ ವಹಿಸುವಂತೆ ಸೈಬರ್ ಕ್ರೈಂ ಪೊಲೀಸರು ಮನವಿ ಮಾಡಿದ್ದಾರೆ.ಕಾರ್ಯಾಚರಣೆಯನ್ನು ಡಿಜಿಪಿ ಪ್ರಣವ್ ಮೊಹಂತಿ ಅವರ ನಿರ್ದೇಶನದಂತೆ, ಡಿಐಜಿಪಿ ಆನಂದಕುಮಾರ್ ಹಾಗೂ ಎಸ್ಪಿ ಉಮಾ ಪ್ರಶಾಂತಿ ಅವರ ಮಾರ್ಗದರ್ಶನದಲ್ಲಿ, ಬಾಗಲಕೋಟೆ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿಎಸ್ಪಿ ಗಿರೀಶ್ ಎಚ್. ಭೋಜನ್ನವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಕೈಗೊಂಡಿದ್ದಾರೆ.