ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ನ್ಯಾಯಾಲಯದ ವಿವಿಧ ಸೇವೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವ ಮಹತ್ವದ ಉದ್ದೇಶವನ್ನು ಇ-ಸೇವಾ ಕೇಂದ್ರ ಹೊಂದಿದೆ. ಹೀಗಾಗಿ ಈ ಕೇಂದ್ರದ ಮೂಲಕ ಪ್ರಕರಣಗಳ ಸ್ಥಿತಿ, ಮುಂದಿನ ವಿಚಾರಣೆಯ ದಿನಾಂಕ, ಆದೇಶಗಳ ಪ್ರತಿಗಳು, ತೀರ್ಪುಗಳ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆ ಸೇರಿದಂತೆ ಹಲವು ಸೇವೆಗಳನ್ನು ಸಾರ್ವಜನಿಕರು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ವಿಜಯಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ನ್ಯಾಯಾಲಯದ ವಿವಿಧ ಸೇವೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವ ಮಹತ್ವದ ಉದ್ದೇಶವನ್ನು ಇ-ಸೇವಾ ಕೇಂದ್ರ ಹೊಂದಿದೆ. ಹೀಗಾಗಿ ಈ ಕೇಂದ್ರದ ಮೂಲಕ ಪ್ರಕರಣಗಳ ಸ್ಥಿತಿ, ಮುಂದಿನ ವಿಚಾರಣೆಯ ದಿನಾಂಕ, ಆದೇಶಗಳ ಪ್ರತಿಗಳು, ತೀರ್ಪುಗಳ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆ ಸೇರಿದಂತೆ ಹಲವು ಸೇವೆಗಳನ್ನು ಸಾರ್ವಜನಿಕರು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ವಿಜಯಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ವಿಜಯಪುರ ಹಾಗೂ ಮುದ್ದೇಬಿಹಾಳ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಲಾದ ಇ-ಸೇವಾ ಕೇಂದ್ರದ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಆಶಯದಂತೆ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವುದು ನ್ಯಾಯಾಂಗದ ಪ್ರಮುಖ ಜವಾಬ್ದಾರಿಯಾಗಿದೆ. ಸಂವಿಧಾನದ ಚೌಕಟ್ಟಿನೊಳಗೆ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ನ್ಯಾಯಾಂಗ ಕಾರ್ಯನಿರ್ವಹಿಸಬೇಕಿದೆ. ಸುಮಾರು 140 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ನಾಲ್ಕೂವರೆ ಕೋಟಿ ಪ್ರಕರಣಗಳು ಬಾಕಿ ಇರುವುದು ಕಡಿಮೆ ಎಂದೇ ಹೇಳಬಹುದು. ನ್ಯಾಯಾಧೀಶರು ಹಾಗೂ ವಕೀಲರು ಸಮನ್ವಯದಿಂದ ಕರ್ತವ್ಯ ನಿರ್ವಹಿಸಿದರೆ ಆರು ತಿಂಗಳ ಅವಧಿಯಲ್ಲಿಯೇ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಿದೆ ಎಂದು ಹೇಳಿದರು.

ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹರೀಶ್ ಎ. ಮಾತನಾಡಿ, ಇ-ಸೇವಾ ಕೇಂದ್ರವು ನ್ಯಾಯಾಲಯದ ಹೃದಯವಿದ್ದಂತೆ. ಈ ಕೇಂದ್ರದ ಮೂಲಕ ವ್ಯಾಜ್ಯದಾರರು ತಮ್ಮ ಪ್ರಕರಣಗಳ ಪ್ರಸ್ತುತ ಸ್ಥಿತಿ, ಮುಂದಿನ ವಿಚಾರಣೆಯ ದಿನಾಂಕ ಹಾಗೂ ಇತರೆ ಪ್ರಮುಖ ವಿವರಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಇದರಿಂದ ಸಾರ್ವಜನಿಕರಿಗೆ ನ್ಯಾಯಾಲಯದ ಸೇವೆಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದರು.

ಮುದ್ದೇಬಿಹಾಳ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಇ-ಸೇವಾ ಕೇಂದ್ರದ ಮೂಲಕ ಜೈಲಿನಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ಮುಂಗಡ ಸಮಯ ನಿಗದಿಪಡಿಸುವುದು, ಉಚಿತ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯುವ ಮಾಹಿತಿ ಪಡೆದುಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುದ್ದೇಬಿಹಾಳದಲ್ಲಿ ದಿವಾಣಿ ನ್ಯಾಯಾಲಯ ಸ್ಥಾಪನೆ ಹಾಗೂ ತಾಳಿಕೋಟೆ ತಾಲೂಕಿನಲ್ಲಿ ಪೂರ್ಣ ಪ್ರಮಾಣದ ನ್ಯಾಯಾಲಯ ಸ್ಥಾಪನೆಗೆ ಸಾರ್ವಜನಿಕರು ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ್ ಕೌಶಿಕ್ ಆರ್.ಎನ್., ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ರವೀಂದ್ರಕುಮಾರ ಕಟ್ಟಿಮನಿ, ದಿವಾಣಿ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ರಾಮಮೂರ್ತಿ ಆರ್.ಎನ್., ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಪಿ. ಗೌಡರ, ಬಿ.ಪಿ. ಮ್ಯಾಗೇರಿ, ಖಜಾಂಚಿ ಎಸ್.ಇ. ಹಿರೇಮಠ ಸೇರಿದಂತೆ ಜಿಲ್ಲಾ ಹಾಗೂ ತಾಲೂಕುಗಳ ನ್ಯಾಯವಾದಿಗಳ ಸಂಘದ ಅಧ್ಯಕ್ಷರು, ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು. ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಚ್.ಎ. ನಾಗೋಡ ಸ್ವಾಗತಿಸಿದರು. ನ್ಯಾಯವಾದಿ ಎನ್.ಆರ್. ಮಕೋಶಿ ಹಾಗೂ ಶಿಕ್ಷಕ ಎಂ.ಬಿ. ಗುಡಗುಂಟಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪಿ.ಪಿ. ಗೌಡರ ವಂದಿಸಿದರು. ಸಂಗಮೇಶ ಶಿವಣಗಿ ಗಾಯನ ಬಳಗದವರು ವಂದೇ ಮಾತರಂ ಹಾಗೂ ನಾಡಗೀತೆ ಹಾಡಿದರು.

ಹಳೇ ಕೋರ್ಟ್ ಜಾಗ ಪುರಸಭೆಗೆ ಹಸ್ತಾಂತರಕ್ಕೆ ನಿರ್ಧಾರ

ಪಟ್ಟಣದ ಮುಖ್ಯ ಬಜಾರ್‌ದಲ್ಲಿರುವ ಹಳೇ ಕೋರ್ಟ್‌ನ ಜಾಗವನ್ನು ಪುರಸಭೆಗೆ ಹಸ್ತಾಂತರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕೆ ಪರ್ಯಾಯವಾಗಿ ಪುರಸಭೆಗೆ ಸೇರಿದ ಜಾಗವನ್ನು ಹೆಚ್ಚುವರಿ ಕೋರ್ಟ್‌ಗಳ ಸ್ಥಾಪನೆ, ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣಕ್ಕೆ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ವಿಜಯಪುರ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದರು.

ಪಟ್ಟಣದ ಹಳೇ ಕೋರ್ಟ್ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸದ್ಯದ ಹೊಸ ತರಕಾರಿ ಮಾರುಕಟ್ಟೆ ಜಾಗದ ಹಿಂದೆ ಪುರಸಭೆಗೆ ಸೇರಿದ 2.10 ಎಕರೆ ಜಮೀನಿದ್ದು ಅದನ್ನು ಭವಿಷ್ಯದಲ್ಲಿ ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣಕ್ಕೆ ಹಾಗೂ ಹೆಚ್ಚುವರಿ ಕೋರ್ಟ್‌ಗಳ ಸ್ಥಾಪನೆಗೆ ಅಥವಾ ನ್ಯಾಯಾಲಯಕ್ಕೆ ಸಂಬಂಧಿ ಚಟುವಟಿಕೆಗಳನ್ನು ನಡೆಸಲು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಹೊಸ ತರಕಾರಿ ಮಾರುಕಟ್ಟೆ ಹಿಂಭಾಗದಲ್ಲಿರುವ ಪುರಸಭೆಯ ಜಾಗೆಗೆ ಭೇಟಿ ನೀಡಿದ ನ್ಯಾಯಮೂರ್ತಿಗಳು ನ್ಯಾಯಾಲಯದ ಚಟುವಟಿಕೆಗಳಿಕೆ ಸೂಕ್ತವಾಗುವ ವಿಶ್ವಾಸ ವ್ಯಕ್ತಪಡಿಸಿದರು.