ಲೋಕ ಕಲ್ಯಾಣಕ್ಕೆ ಹವ್ಯಕರ ಕೊಡುಗೆ ಅನನ್ಯ: ಡಾ. ಗಿರಿಧರ ಕಜೆ

KannadaprabhaNewsNetwork |  
Published : Dec 02, 2024, 01:16 AM IST
ಸಿದ್ದಾಪುರದಲ್ಲಿ ಹವ್ಯಕ ಮಹಾಸಭೆ ಆಯೋಜಿಸಿದ್ದ ಪ್ರತಿಬಿಂಬ ಕಾರ್ಯಕ್ರಮವನ್ನು ಡಾ. ಗಿರಿಧರ ಕಜೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಹವ್ಯಕ ಸಮಾಜದ ಪ್ರತಿಯೊಂದು ಮನೆಯಲ್ಲಿ ಪ್ರತಿಭೆಗಳಿದ್ದಾರೆ. ಪಾಲಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು.

ಸಿದ್ದಾಪುರ: ಹವ್ಯಕ ಸಮುದಾಯ ಲೋಕ ಕಲ್ಯಾಣಕ್ಕಾಗಿ ಜ್ಞಾನವನ್ನು ಧಾರೆ ಎರೆದಿದೆ. ವಿವಿಧ ಕ್ಷೇತ್ರಗಳಲ್ಲಿ ಹವ್ಯಕರು ಸೇವೆ ಸಲ್ಲಿಸುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಾದ್ಯಂತ ೧೮ ಸಾವಿರಕ್ಕೂ ಹೆಚ್ಚು ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮನ್ನು ಇತ್ತೀಚಿನ ದಿನದಲ್ಲಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡರೂ ಸಾಂಪ್ರದಾಯವಾಗಿ ನಡೆಸಿಕೊಂಡು ಬರುತ್ತಿರುವ ಕೃಷಿಯನ್ನು ಬಿಟ್ಟಿರದ ಹವ್ಯಕರು ತಾವು ಬೆಳೆಯುವುದರ ಜತೆಗೆ ಎಲ್ಲ ಸಮಾಜದವರನ್ನು ಬೆಳೆಸಿದ್ದಾರೆ ಎಂದು ಅಖಿಲ ಹವ್ಯಕ ಮಹಾಸಾಭಾ ಅಧ್ಯಕ್ಷ ಡಾ. ಗಿರಿಧರ ಕಜೆ ತಿಳಿಸಿದರು.ಪಟ್ಟಣದ ಶಂಕರಮಠದಲ್ಲಿ ಅಖಿಲ ಹವ್ಯಕ ಮಹಾಸಭಾ ಸಿದ್ದಾಪುರ ಪ್ರಾಂತ್ಯದ ಹವ್ಯಕ ಪ್ರತಿಭೆಗಳಿಗಾಗಿ ಆಯೋಜಿಸಿದ್ದ ಪ್ರತಿಬಿಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹವ್ಯಕ ಸಮಾಜದ ಪ್ರತಿಯೊಂದು ಮನೆಯಲ್ಲಿ ಪ್ರತಿಭೆಗಳಿದ್ದಾರೆ. ಪಾಲಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಮುಂದಾಗಬೇಕು. ಅವರಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಮುಂದಾಗಬೇಕು ಎಂದರು.

ಇದೇ ಸಂಧರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ ಹಾಗೂ ನಿವೃತ್ತ ಶಿಕ್ಷಕ ವಯೋವೃದ್ಧ ಮಂಜುನಾಥ ಹೆಗಡೆ ದೊಡ್ಮನೆ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಪ್ರಸಾರಕ ಸಮಿತಿಯ ಕಾರ್ಯಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಮಾತನಾಡಿದರು. ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಶ್ರೀಧರ ಜೆ. ಭಟ್ಟ ಕೆಕ್ಕಾರ, ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ್ವರ ಸಂಪ, ಪ್ರಶಾಂತ ಭಟ್ಟ ಮಲವಳ್ಳಿ, ಕೃಷ್ಣಮೂರ್ತಿ ಭಟ್ಟ, ಪತ್ರಕರ್ತ ನಾಗರಾಜ ಹೆಗಡೆ ಮತ್ತಿಗಾರ, ರವೀಂದ್ರ ಹೆಗಡೆ ಹಿರೇಕೈ, ರಮೇಶ ಹೆಗಡೆ ಕೊಡ್ತಗಣಿ, ಎಸ್.ಜಿ. ಭಟ್ಟ ಚಟ್ನಳ್ಳಿ, ಎಂ.ಜಿ. ಜೋಶಿ, ರಮಾನಂದ ಹೆಗಡೆ, ಶಶಾಂಕ ಹೆಗಡೆ ಶಿಗೇಹಳ್ಳಿ, ಎನ್.ಬಿ. ಹೆಗಡೆ ಮತ್ತಿಹಳ್ಳಿ, ರಾಘವೇಂದ್ರ ಶಾಸ್ತ್ರಿ ಇತರರಿದ್ದರು.ನಂತರ ಸಿದ್ದಾಪುರ ಪ್ರಾಂತ್ಯದ ಹವ್ಯಕ ಮಕ್ಕಳಿಗಾಗಿ ಹಾಗೂ ಮಹಿಳೆಯರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

27ರಿಂದ ತೃತೀಯ ವಿಶ್ವ ಹವ್ಯಕ ಸಮ್ಮೇಳನ

ಸಿದ್ದಾಪುರ: ಡಿ. ೨೭, ೨೮ ಹಾಗೂ ೨೯ರಂದು ತೃತೀಯ ವಿಶ್ವ ಹವ್ಯಕ ಸಮ್ಮೇಳನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಇದು ಕೇವಲ ಹವ್ಯಕ ಜಾತಿಯ ಸಮಾವೇಶ ಅಲ್ಲ. ಸಮಾಜದ ಸಮ್ಮೇಳನವಾಗಿದೆ ಎಂದು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹವ್ಯಕ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಸಮ್ಮೇಳನದಲ್ಲಿ ಹವ್ಯಕರ, ಆಚಾರ, ಸಂಪ್ರದಾಯ, ವಿಚಾರಗಳು, ಗೋಷ್ಠಿ, ಸನ್ಮಾನಗಳು ಜರುಗಲಿದೆ. ಹವ್ಯಕರ ಭಾಷೆ ಸಮೃದ್ದವಾದ ಸಾಹಿತ್ಯವನ್ನು ಒಳಗೊಂಡಿದ್ದು, ಸಮ್ಮೇಳನದಲ್ಲಿ ೬ ಸಾವಿರ ಪುಸ್ತಕಗಳ, ೧೦೦ಕ್ಕೂ ಹೆಚ್ಚು ಪಾರಂಪರಿಕ ವಸ್ತುಗಳ ಹಾಗೂ ೧೦೮ ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹವ್ಯಕ ಸಮಾಜದ ೫೬೭ ಜನರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮುಖ್ಯವಾಗಿ ಗಾಯತ್ರಿ ಮಂತ್ರದ ಮಹತ್ವದ ಕುರಿತು ಮಾಹಿತಿ ನೀಡಲಾಗುತ್ತಿದೆ. ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಮಾಜದ ಮೂರು ಪೀಠಾಧಿಪತಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಅಲ್ಲದೇ ವಿವಿಧ ಸಮಾಜದ ಸ್ವಾಮಿಗಳು, ಕೇಂದ್ರ ಹಾಗೂ ರಾಜ್ಯ ಸಚಿವರು, ಪ್ರಮುಖರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ೧.೫ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ಸಾಧ್ಯತೆ ಇದೆ ಎಂದರು.ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷರಾದ ಶ್ರೀಧರ ಜೆ. ಭಟ್ಟ ಕೆಕ್ಕಾರು, ಆರ್.ಎಂ. ಹೆಗಡೆ ಬಾಳೇಸರ, ಪ್ರಮುಖರಾದ ಡಾ. ಶಶಿಭೂಷಣ ಹೆಗಡೆ, ಆರ್.ಎಸ್. ಹೆಗಡೆ ಹರಗಿ, ಸಿ.ಎ. ವೇಣುವಿಘ್ನೇಶ್ವರ ಸಂಪ, ಪ್ರಶಾಂತ ಮಲವಳ್ಳಿ, ಕೃಷ್ಣಮೂರ್ತಿ ಭಟ್ಟ ಇತರರಿದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ