ಇಂದಿನಿಂದ ಡಂಬಳದಲ್ಲಿ ಹಜರತ್ ಜಮಾಲಶಾವಲಿ ಶರಣರ ಉರೂಸ್

KannadaprabhaNewsNetwork |  
Published : Feb 05, 2026, 02:45 AM IST
ಡಂಬಳ ಗ್ರಾಮದ ಹಜರತ್ ಜಮಾಲಶಾವಲಿ ಶರಣರ ದರ್ಗಾ. | Kannada Prabha

ಸಾರಾಂಶ

ಉರೂಸ್ ದಿನವಾದ ಫೆ. 6ರಂದು ಬೆಳಗ್ಗೆಯಿಂದ ಸಂಜೆಯವರೆಗೆ ರೈತರು ತಮ್ಮ ಎತ್ತುಗಳನ್ನು ವಿವಿಧ ವಾದ್ಯಗಳ ಮೂಲಕ ಮೆರವಣಿಗೆ ಮಾಡಿಕೊಂಡು ದರ್ಗಾದ ಸುತ್ತ ಐದು ಸುತ್ತು ಹಾಕಿ ಸಕ್ಕರೆ ಓದಿಸುತ್ತಾರೆ.

ರಿಯಾಜಅಹಮ್ಮದ ಎಂ. ದೊಡ್ಡಮನಿ

ಡಂಬಳ: ಗ್ರಾಮದ ಸೂಫಿ ಸಂತ ಹಜರತ್ ಜಮಾಲಶಾವಲಿ ಶರಣರ 2 ದಿನಗಳ ಕಾಲ ಉರೂಸ್‌ ನಡೆಯಲಿದ್ದು, ಫೆ. 5ರಂದು ಗಂಧ, ಫೆ. 6ರಂದು ಭಾವೈಕ್ಯತೆಯ ಉರೂಸ್‌ ಜರುಗಲಿದೆ.

ಫೆ. 5ರಂದು ಗಂಧದ ಮೆರವಣಿಗೆ ರಾತ್ರಿ ಪ್ರಾರಂಭವಾಗಲಿದೆ. ಈ ವೇಳೆ ಕುದುರೆ ಮೆರವಣಿಗೆ ನಡೆಯಲಿದೆ. ರಾಮಣ್ಣ ಗದಗ ಅವರ ಮನೆತನದವರ ಚಕ್ಕಡಿಯಲ್ಲಿ ನಗಾರಿ ಹೊತ್ತ ಎತ್ತುಗಳ ಮೆರವಣಿಗೆ ವಿವಿಧ ಬಡಾವಣೆಗಳಲ್ಲಿ ಸಾಗಿ ವಾದ್ಯಗಳ ಮೂಲಕ ದರ್ಗಾ ತಲುಪುವುದು.

ಉರೂಸ್ ದಿನವಾದ ಫೆ. 6ರಂದು ಬೆಳಗ್ಗೆಯಿಂದ ಸಂಜೆಯವರೆಗೆ ರೈತರು ತಮ್ಮ ಎತ್ತುಗಳನ್ನು ವಿವಿಧ ವಾದ್ಯಗಳ ಮೂಲಕ ಮೆರವಣಿಗೆ ಮಾಡಿಕೊಂಡು ದರ್ಗಾದ ಸುತ್ತ ಐದು ಸುತ್ತು ಹಾಕಿ ಸಕ್ಕರೆ ಓದಿಸುತ್ತಾರೆ. 5 ಕ್ವಿಂಟಲ್ ಬುಂದಿ, 10 ಕ್ವಿಂಟಲ್‌ ಅಕ್ಕಿ ಅನ್ನ ತಯಾರಿಸಲಾಗುತ್ತದೆ. ಬಳಿಕ ಅನ್ನಸಂತರ್ಪಣೆ ಜರುಗಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಎತ್ತುಗಳ ಮೆರವಣಿಗೆ: ಗ್ರಾಮದಲ್ಲಿ ಎಲ್ಲ ರೈತಾಪಿ ವರ್ಗ ಉರೂಸ್‌ನಂದು ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ಹಲವು ವಾದ್ಯಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದರ್ಗಾದ ಸುತ್ತ ಐದು ಬಾರಿ ಸುತ್ತನ್ನು ಹಾಕಿಸಿ ಸಕ್ಕರೆಯ ಪೂಜೆ ಮಾಡಿಸುವ ಮೂಲಕ ಭಕ್ತಿ ಮೆರೆಯುವುದು ಇಲ್ಲಿನ ವಿಶೇಷ.

ಪವಾಡಗಳ ದರ್ಗಾ: ಈಗಲೂ ಎತ್ತುಗಳ ಆರೋಗ್ಯದಲ್ಲಿ ಏರುಪೇರಾದರೆ ರೈತರು ಜಮಾಲಶಾವಲಿ ಶರಣರ ದರ್ಗಾಕ್ಕೆ ಬಂದು ಭಕ್ತಿ ಸಮರ್ಪಿಸುತ್ತಾರೆ. ಎತ್ತುಗಳ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ ಎನ್ನುವ ಅಪಾರ ನಂಬಿಕೆ ರೈತರಲ್ಲಿದೆ. ಅಲ್ಲದೇ ಭಕ್ತರ ಆಶಯಗಳು, ಇಷ್ಟಾರ್ಥಗಳು ಈಡೇರುತ್ತವೆ ಎಂದು ಅನಾದಿ ಕಾಲದಿಂದಲೂ ನಂಬಿಕೆಯಿದೆ.

ಮಠಕ್ಕೂ ಜಮಾಲಶಾವಲಿ ಶರಣರ ಅವಿನಾಭಾವ ಸಂಬಂಧ ತೋಂಟದಾರ್ಯ ಜಾತ್ರೆ ಮುಗಿದ ನಂತರ ಈ ಹಿಂದಿನ ಮಠದ ಶ್ರೀಗಳಿಂದ ಗಂಧ ಮತ್ತು ಉರೂಸ್ ಆಚರಿಸಲಾಗುತ್ತಿತ್ತು. ಅಲ್ಲದೆ ಉರೂಸ್‌ನ ದಿನ ಜರುಗುವ ಅನ್ನಸಂತರ್ಪಣೆಯಂದು ಮೊದಲು ಮಠದಲ್ಲಿರುವ ವೇದ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನೂರಾರು ವರ್ಷಗಳಿಂದ ಜಾತ್ರೆ ಮುಗಿದ ಬಳಿಕ ಉರೂಸ್ ಜರುಗುತ್ತಿದ್ದು, ಜನಮಾನಸದ ಭಕ್ತರ ಜಾತ್ರೆಯಾಗಿ ರೂಪುಗೊಂಡಿದೆ.

ಜಮಾಲಶಾವಲಿ ದರ್ಗಾ ಸಮಿತಿಯ ಗೌರವಾಧ್ಯಕ್ಷ ಹನುಮಂತಪ್ಪ ಗದಗಿನ, ಅಧ್ಯಕ್ಷ ಅಲ್ಲಿಸಾಬ ಮೂಲಿಮನಿ, ಉಪಾಧ್ಯಕ್ಷ ಶಫೀ ಮೂಲಿಮನಿ, ಇಂತಿಯಾಜ ದಫೇದಾರ, ಮೋದಿನ ಚಾಂದಖಾನವರ, ಖಾಜಾಹುಸೇನ ಹೊಸಪೇಟಿ, ಬಂದುಸಾಬ ಜಲಾಲನವರ, ಕರಿಂಸಾಬ ಸರಖಾವಾಸ, ಮುರ್ತುಜಾ ಮನಿಯಾರ, ಬುಡ್ನೆಸಾಬ ಅತ್ತಾರ, ಹುಸೇನ ದೊಡ್ಡಮನಿ, ಇಬ್ರಾಹಿಂ ಹೊಸಪೇಟಿ, ಕಾಸಿಂಸಾಬ ದೊಡ್ಡಮನಿ, ಡಿ.ಡಿ. ಸೊರಟೂರ,‌ ರಾಜು ಹಳ್ಳಿಕೇರಿ, ಅಲ್ಲಾವುದ್ದಿನ ಹೊಂಬಳ, ಬಾಬುಸಾಬ ಸರಕಾವಾಸ, ಇಮಾಸಾಬ ಹೊಂಬಳ ಸದಸ್ಯರು‌, ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಪಾಲ್ಗೊಳ್ಳಲಿದ್ದಾರೆ.

ಜಾತ್ಯತೀತ ಸಂತ ಹಜರತ್ ಜಮಾಲಶಾವಲಿ ಶರಣರ ಜಾತ್ಯತೀತ, ಧಾರ್ಮಿಕ ಸಂತರು. ಅದಕ್ಕಿಂತ ಮಿಗಿಲಾಗಿ ಅಖಂಡ ಮಾನವ ಸಮುದಾಯದ ಹಿತಾಸಕ್ತಿ ಬಗ್ಗೆ, ಕ್ರಿಯಾಶೀಲ ಬದುಕಿನ ಬಗ್ಗೆ, ಧರ್ಮದ ಗಡಿ ದಾಟಿ ಲೋಕ ಸಂಚಾರ ಮಾಡಿದರು. ತಾವು ಕಂಡ ಜ್ಞಾನವನ್ನು ಸರಳವಾಗಿ ಪ್ರಸಾರ ಮಾಡಿದ ಮಾನವ, ವಿಶ್ವಧರ್ಮಿಗಳಾಗಿದ್ದರು. ಕಲ್ಯಾಣಕ್ಕಾಗಿ ಅವರ ಪವಾಡಗಳು ಇಂದಿಗೂ ಮನೆಮಾತಾಗಿದೆ.

ಹಜರತ್ ಜಮಾಲಶಾವಲಿ ಶರಣರ ಜಾತ್ಯತೀತ ಧಾರ್ಮಿಕ ಸಂತರು. ಇವರು ಗ್ರಾಮದಲ್ಲಿ ನೆಲೆಸಿ ಧರ್ಮ ಸಮನ್ವಯ ದೃಷ್ಟಿಯಿಂದ ಸಾಮರಸ್ಯತ್ವ ಮೂಡಿಸಿ, ವಿವಿಧತೆಯಲ್ಲಿ ಏಕತೆಯನ್ನು ಸಾರಿ, ಜಾತ್ಯತೀತ ತತ್ವವನ್ನು ಮೂಡಿಸಿದರು. ಭಕ್ತರ ಪಾಲಿನ ಆಶಾಕಿರಣವಾಗಿ ಭಕ್ತರ ಜೀವನೋತ್ಸಾಹ ತುಂಬುತ್ತಿರುವ ಜಮಾಲಶಾವಲಿ ಶರಣರು ಹಾಕಿಕೊಟ್ಟ ಸದ್ವಿಚಾರಗಳು ಸದಾಕಾಲ ಇರುತ್ತವೆ ಎಂದು ಸಮಾಜ ಸೇವಕ ಮಹಮ್ಮದರಫೀಕಸಾಬ ಅಲ್ಲಾವುದ್ದಿನಸಾಬ ಹೊಸಪೇಟಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಸಿತ ಭಾರತ ನಿರ್ಮಾಣವೇ ವಿಬಿ-ಜಿ ರಾಮ್-ಜಿ ಗುರಿ: ಹರಿಪ್ರಕಾಶ ಕೋಣೆಮನೆ
ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿ ಪ್ರತಿಭಟನೆ