ಎಚ್‌.ಡಿ.ಕುಮಾರಸ್ವಾಮಿ, ದೇವರಾಜೇಗೌಡಗೆ ಬುದ್ಧಿ ಭ್ರಮಣೆಯಾಗಿದೆ: ಮಾಜಿ ಎಂಎಲ್ಸಿ ಗೋಪಾಲಸ್ವಾಮಿ

KannadaprabhaNewsNetwork |  
Published : May 21, 2024, 12:32 AM IST
20ಎಚ್ಎಸ್ಎನ್11 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್‌ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ. | Kannada Prabha

ಸಾರಾಂಶ

ಕುಮಾರಸ್ವಾಮಿ ವಕೀಲ ದೇವರಾಜೇಗೌಡ ಮೂಲಕ ಕಾಂಗ್ರೆಸ್‌ ನಾಯಕರ ಮೇಲೆ ಬಾಯಿಗೆ ಬಂದಂತೆ ಆರೋಪಗಳನ್ನು ಮಾಡಿಸುತ್ತಿದ್ದು, ಇಬರಿಬ್ಬರಿಗೂ ಬುದ್ಧಿ ಭ್ರಮಣೆಯಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಟೀಕಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೇವರಾಜೇಗೌಡ ಹೇಳಿದಂತೆ ಬೌರಿಂಗ್‌ ಕ್ಲಬ್‌ನಲ್ಲಿ 110ನೇ ನಂಬರ್‌ ರೂಮೇ ಇಲ್ಲ

ಕನ್ನಡಪ್ರಭ ವಾರ್ತೆ ಹಾಸನ

ಇತ್ತೀಚಿನ ದಿನಗಳಲ್ಲಿ ಪೆನ್‌ಡ್ರೈವ್‌ ವಿಚಾರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ವಕೀಲ ದೇವರಾಜೇಗೌಡ ಒಂದಾಗಿದ್ದು, ಒಕ್ಕಲಿಗ ಸಮುದಾಯದ ನಾಯಕತ್ವ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕುಮಾರಸ್ವಾಮಿ ವಕೀಲ ದೇವರಾಜೇಗೌಡ ಮೂಲಕ ಕಾಂಗ್ರೆಸ್‌ ನಾಯಕರ ಮೇಲೆ ಬಾಯಿಗೆ ಬಂದಂತೆ ಆರೋಪಗಳನ್ನು ಮಾಡಿಸುತ್ತಿದ್ದು, ಇಬರಿಬ್ಬರಿಗೂ ಬುದ್ಧಿ ಭ್ರಮಣೆಯಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಟೀಕಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾರ್‌ ಜತೆ 100 ಕೋಟಿ ರು.ಡೀಲ್‌ ಕುರಿತ ಆರೋಪಕ್ಕೆ ಉತ್ತರಿಸಿ, ‘ಬೌರಿಂಗ್‌ ಕ್ಲಬ್‌ನಲ್ಲಿ 110ನೇ ನಂಬರಿನ ರೂಮೇ ಇಲ್ಲ. ಬೌರಿಂಗ್‌ ಕ್ಲಬ್‌ನಲ್ಲಿ ನಾನು ಬಹು ವರ್ಷದಿಂದ ಸದಸ್ಯ. ಅಲ್ಲಿ ನಮ್ಮ ನಾಟಿ ಸ್ಟೈಲ್‌ನಲ್ಲಿ ಊಟ ಸಿಗುವುದರಿಂದ ನಾನು ಅಲ್ಲಿಯೇ ಹೋಗುತ್ತೇನೆ. ನಾನು ಅಲ್ಲಿ ವಕೀಲ ದೇವರಾಜೇಗೌಡ ಅವರನ್ನು ಭೇಟಿಯಾಗಿರಬಹುದು. ಏಕೆಂದರೆ ಈ ಹಿಂದೆ ದೇವರಾಜೇಗೌಡ ನಮ್ಮದೇ ಪಕ್ಷದಲ್ಲಿ ಇದ್ದ ವ್ಯಕ್ತಿ. ಆಗಾಗ ನನಗೆ ಫೋನ್‌ ಮಾಡುತ್ತಿದ್ದ. ಎಲ್ಲಾ ಪಕ್ಷದ ಮುಖಂಡರ ಬಗ್ಗೆಯೂ ಆರೋಪಗಳನ್ನು ಮಾಡುತ್ತಿದ್ದ. ಆದರೆ, ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್‌ ನನಗೆ 100 ಕೋಟಿ ರು. ಆಫರ್‌ ಮಾಡಿದ್ದರು. ಅದರಲ್ಲಿ ಅಡ್ವಾನ್ಸ್‌ ಆಗಿ 5 ಕೋಟಿ ರುಪಾಯಿಗಳನ್ನು ನನ್ನ ಮೂಲಕ ಬೌರಿಂಗ್‌ ಕ್ಲಬ್‌ನ ರೂಮ್‌ ನಂಬರ್‌ 110ಕ್ಕೆ ಗೋಪಾಲಸ್ವಾಮಿ ಮೂಲಕ ತಲುಪಿಸಿದ್ದರು ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಏಕೆಂದರೆ ಬೌರಿಂಗ್‌ ಕ್ಲಬ್‌ನಲ್ಲಿ 110 ಸಂಖ್ಯೆಯ ಕೊಠಡಿಯೇ ಇಲ್ಲ. ಅಲ್ಲಿಗೆ ದೇವರಾಜೇಗೌಡ ಎಂಥಾ ಸುಳ್ಳುಬುರುಕ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಗೋಪಾಲಸ್ವಾಮಿ ಕಿಡಿಕಾರಿದರು.

‘ಒಂದು ವೇಳೆ ನಾನು ಬೌರಿಂಗ್‌ ಕ್ಲಬ್‌ಗೆ 5 ಕೋಟಿ ರು. ಜತೆಗೆ ಹೋಗಿದ್ದೇ ಆದಲ್ಲಿ ಅಲ್ಲಿನ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿಸಲಿ. 5 ಕೋಟಿ ರು.ಗೆ ಎಷ್ಟು ಬ್ಯಾಗುಗಳಲ್ಲಿ ಹಣ ತುಂಬಿಕೊಂಡು ಹೋಗಬೇಕು. ಅಷ್ಟು ಬ್ಯಾಗುಗಳನ್ನು ನಾನೊಬ್ಬನೇ ಹೊತ್ತುಕೊಂಡು ಹೋಗಲಾಗುತ್ತದೆಯೇ? ದೇವರಾಜೇಗೌಡ ಬಿಜೆಪಿಯಲ್ಲೇ ಇದ್ದಾನೆ ತಾನೆ. ಅಂದ ಮೇಲೆ ಕೇಂದ್ರ ಬಿಜೆಪಿ ಸರ್ಕಾರದ ಹಿಡಿತದಲ್ಲೆ ಸಿಬಿಐ, ಇ.ಡಿ ಇಲಾಖೆಗಳು ಇವೆಯಲ್ಲಾ. ಅವರ ಮೂಲಕ ತನಿಖೆ ಮಾಡಿಸಲಿ. ದೇವರಾಜೇಗೌಡ ಯಾವ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆದನೋ ಗೊತ್ತಿಲ್ಲ. ಆತ ಲಾಯರ್‌ ಕೋಟ್‌ ಹಾಕಿರುವುದೇ ಇತ್ತೀಚಿನ ಮೂರ್ನಾಲ್ಕು ವರ್ಷಗಳಲ್ಲಿ. ಆತ ಪ್ರಜ್ವಲ್‌ನ ಸಂಸದ ಸ್ಥಾನದ ಅನರ್ಹತೆ ಕೇಸಿನಲ್ಲಿ ಹೋರಾಟ ಮಾಡಿರುವುದು ಬಿಟ್ಟರೆ ಯಾವ ಹೋರಾಟ ಮಾಡಿದ್ದಾನೆ’ ಎಂದು ಲೇವಡಿ ಮಾಡಿದರು.

‘ಪೆನ್‌ಡ್ರೈವ್‌ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ವಕೀಲ ದೇವರಾಜೇಗೌಡ ಒಂದಾಗಿದ್ದಾರೆ ಎನ್ನುವ ಅನುಮಾನ ಇದೆ. ಏಕೆಂದರೆ ಇದೀಗ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿ ಬೆಳೆಯುತ್ತಿದ್ದಾರೆ. ಇದನ್ನು ಸಹಿಸದ ಎಚ್‌.ಡಿ.ಕುಮಾರಸ್ವಾಮಿ ದೇವರಾಜೇಗೌಡ ಮೂಲಕ ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ಕೊಡಿಸುವ ಮೂಲಕ ಶಿವಕುಮಾರ್‌ ಅವರ ಚಾರಿತ್ರ್ಯವಧೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್‌ ತನ್ನೊಂದಿಗೆ ಮೊಬೈಲಿನಲ್ಲಿ ಮಾತನಾಡಿರುವ ಸಂಭಾಷಣೆಯನ್ನು ಅರ್ಧಂಬರ್ಧ ಪ್ರದರ್ಶನ ಮಾಡಿದ್ದಾನೆ. ಮೊಬೈಲಿನಲ್ಲಿ ಮಾತನಾಡಿದ ತಕ್ಷಣ ಅವರೆಲ್ಲಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುವುದಿಲ್ಲ. ದಾಖಲೆಗಳೇನಾದರೂ ಇದ್ದಲ್ಲಿ ಕೊಡು ಎಂದು ಕೇಳಿರಬಹುದು. ಅದನ್ನೇ ಮುಂದಿಟ್ಟುಕೊಂಡು ಶಿವಕುಮಾರ್‌ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ಮಾಡಿದ್ದಾರೆ’ ಎಂದು ದೂರಿದರು.

‘ಹಿಂದೆ ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡುತ್ತೇನೆ ಎಂದು ಹೇಳುತ್ತಿದ್ದ ವ್ಯಕ್ತಿ ಇಂದು ಅದೇ ಎಚ್‌.ಡಿ. ಕುಮಾರಸ್ವಾಮಿ ಜತೆ ಸೇರಿಕೊಂಡು ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸಿನ ನಾಲ್ವರು ಸಚಿವರ ಮೇಲೆ ಆಧಾರವಿಲ್ಲದ ಆರೋಪ ಮಾಡುತ್ತಿದ್ದಾನೆ.ಈ ರೀತಿ ಹೇಳಿಕೆ ನೀಡಲು ಎಚ್‌.ಡಿ.ಕುಮಾರಸ್ವಾಮಿ ದೇವರಾಜೇಗೌಡ ಅವರ ತಲೆಗೆ ಬಂದೂಕು ಇಟ್ಟು ಹೆದರಿಸಿರಬೇಕು’ ಎಂದು ಶಂಕೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ