ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಕಿರಂಗೂರು ಗ್ರಾಮದ ಬನ್ನಿ ಮಂಟಪದ ಬಳಿ ೧೧.೩ ಕಿ.ಮೀ ಉದ್ದದ ೪೨.೪ ಕೋಟಿ ರು. ವೆಚ್ಚದ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಭೂಮಿ ಪೂಜೆ ನೆರವೇರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೇವರ್ಗಿ- ಚಾಮರಾಜನಗರ ಹೆದ್ದಾರಿಯ ಕಿರಂಗೂರು ಗ್ರಾಮದಿಂದ ಪಾಂಡವಪುರವರೆಗಿನ ಹೆದ್ದಾರಿ ರಸ್ತೆ ಅಗಲೀಕರಣ ಬಹು ದಿನಗಳ ಬೇಡಿಕೆಯಾಗಿದ್ದು, ಇದರ ಗುದ್ದಲಿ ಪೂಜೆಯನ್ನು ನೆರವೇರಿಸಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದ್ದೇನೆ ಎಂದರು.
ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಈ ಹಿಂದೆ ಶಾಸಕರಾಗಿದ್ದ ವೇಳೆ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿ, ಕಿರಂಗೂರು, ದರಸಗುಪ್ಪೆ, ಕಪರನಕೊಪ್ಪಲು ಗ್ರಾಮಗಳ ಹಾದುಹೋಗುವ ಜೇವರ್ಗಿ- ಚಾಮರಾಜನಗರ ಹೆದ್ದಾರಿಯಲ್ಲಿ ದಿನಕ್ಕೊಂದು ಅಪಘಾತ ನಡೆದು ಸಾವು, ನೋವುಗಳು ಸಂಭವಿಸುತ್ತಿವೆ. ಹೆದ್ದಾರಿ ಅಗಲೀಕರಣ ಮಾಡುವಂತೆ ಒತ್ತಾಯಿಸಿದ್ದರು. ಅವರ ಶ್ರಮದಿಂದಾಗಿ ಇಂದು ಕಾರ್ಯಗತಗೊಂಡು, ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಅವರು ಬೇರೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದರಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ರವೀಂದ್ರ ಶ್ರೀಕಂಠಯ್ಯ ಅವರ ಗೈರುಹಾಜರಿ ಬಗ್ಗೆ ಎಚ್‌ಡಿಕೆ ಉತ್ತರಿಸಿದರು.೧೦ ಲಕ್ಷ ರು. ಪರಿಹಾರಕ್ಕೆ ಮನವಿ:
ಹಲವು ವರ್ಷಗಳಿಂದ ಹೆದ್ದಾರಿ ಅಗಲೀಕರಣ ಮಾಡುವಂತೆ ಮನವಿ ಮಾಡುತ್ತಿದ್ದರೂ ಪ್ರಯೋಜವಾಗಿರಲಿಲ್ಲ. ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳು ನಡೆದು, ಸಾವು- ನೋವುಗಳು ಸಂಭವಿಸಿವೆ. ಅಪಘಾತದಲ್ಲಿ ಮೃತಪಟ್ಟಿರುವ ಕುಟುಂಬಗಳಿಗೆ ತಲಾ ೧೦ ಲಕ್ಷ ರು. ಪರಿಹಾರ ನೀಡುವಂತೆ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಶಂಕರ್ ಬಾಬು ಇದೇ ಸಂದರ್ಭದಲ್ಲಿ ಒತ್ತಾಯಿಸಿ ಸಚಿವರಿಗೆ ಮನವಿ ಮಾಡಿದರು. ಮನವಿಗೆ ಪೂರಕವಾಗಿ ಸ್ಪಂದಿಸಿದ ಎಚ್‌ಡಿಕೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಶೋಕ್, ಜೆಡಿಎಸ್ ಮುಖಂಡರಾದ ನಗುವನಹಳ್ಳಿ ಶಿವಸ್ವಾಮಿ, ಪಾಲಹಳ್ಳಿ ಚಂದ್ರಶೇಖರ್, ಪೈ.ಮುಕುಂದ, ನೆಲಮನೆ ಗುರುಪ್ರಸಾದ್, ಕಡತನಾಳು ಸಂಜಯ್, ತಿಲಕ್, ನಾರಾಯಣ ಇತರರಿದ್ದರು.