ರಾಮನಗರ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೋಲಾರ ಲೋಕಸಭೆ ಕ್ಷೇತ್ರದ ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳ ಜತೆ ಮಹತ್ವದ ಸಮಾಲೋಚನೆ ನಡೆಸಿದರು.
ಮಾಜಿ ಸಚಿವರಾದ ಬಂಡೆಪ್ಪ ಕಾಷೇಂಪೂರ್ ಅವರೊಂದಿಗೆ ಪಕ್ಷದ ಕೋಲಾರ ಜಿಲ್ಲಾಧ್ಯಕ್ಷ ಹಾಗೂ ಶಾಸಕರಾದ ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಮೇಲೂರು ರವಿ, ಮಾಜಿ ಉಪ ಸಭಾಪತಿ ಕೆ.ಎಂ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಮಾಲೂರಿನ ರಾಮೇಗೌಡ, ಬಂಗಾರಪೇಟೆಯ ಮಲ್ಲೇಶ್ ಬಾಬು, ಕೋಲಾರದ ಸಿಎಂಆರ್ ಶ್ರೀನಾಥ್ ಸೇರಿ ಪ್ರಮುಖ ನಾಯಕರು ಸಭೆಯಲ್ಲಿ ಹಾಜರಿದ್ದು ತಮ್ಮ ಅಭಿಪ್ರಾಯಗಳನ್ನು ಕುಮಾರಸ್ವಾಮಿ ಅವರಿಗೆ ತಿಳಿಸಿದರು.
ಕ್ಷೇತ್ರಗಳ ಹಂಚಿಕೆ ಚರ್ಚೆ:ಕೋಲಾರ ಕ್ಷೇತ್ರದಲ್ಲಿ ಮೂವರು ಶಾಸಕರಿದ್ದು, ಕಳೆದ ವಿಧಾನಸಭೆಯಲ್ಲಿ ಅತ್ಯುತ್ತಮ ಮತ ಪ್ರಮಾಣವನ್ನು ಜೆಡಿಎಸ್ ಗಳಿಸಿದೆ. ಹೀಗಾಗಿ ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪಕ್ಷದ ನಿಷ್ಠಾವಂತ ದಲಿತ ನಾಯಕರೊಬ್ಬರನ್ನು ಗೆಲ್ಲಿಸಿಕೊಳ್ಳಬಹುದು ಎಂದು ಎಲ್ಲಾ ಮುಖಂಡರು ಕುಮಾರಸ್ವಾಮಿ ಅವರಿಗೆ ಸಲಹೆ ಮಾಡಿದರು.
ಮೈತ್ರಿ ಧರ್ಮ ಪಾಲನೆ ಮಾಡಿ:
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಜಿಲ್ಲೆಯಲ್ಲಿ ಯಾವುದೇ ಗೊಂದಲ ಇಲ್ಲ. ಪರಸ್ಪರ ಹೊಂದಾಣಿಕೆ ಹಾಗೂ ಸಹಮತ ಭಾವದ ವಾತಾವರಣ ಇದೆ ಎಂದು ಮುಖಂಡರು ಮಾಜಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.ಮೈತ್ರಿ ಧರ್ಮ ಪಾಲನೆ ಮಾಡಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬದ್ಧತೆ, ನಿಷ್ಠೆಯಿಂದ ಕೆಲಸ ಮಾಡಬೇಕು. ಜತೆಗೆ, ಕ್ಷೇತ್ರದಲ್ಲಿ ಆಗಬೇಕಿರುವ ಪಕ್ಷದ ಕೆಲಸ, ಸಂಘಟನೆ ಬಗ್ಗೆ ಮುಖಂಡರಿಗೆ ಕೆಲ ಸಲಹೆ, ಸೂಚನೆಗಳನ್ನು ನೀಡಿದರು.
ಈ ವೇಳೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಇತರರಿದ್ದರು.3ಕೆಆರ್ ಎಂಎನ್ 20ಜೆಪಿಜಿ
ರಾಮನಗರ ಬಿಡದಿಯ ತೋಟದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೋಲಾರ ಲೋಕಸಭೆ ಕ್ಷೇತ್ರದ ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳ ಜತೆ ಮಹತ್ವದ ಸಮಾಲೋಚನೆ ನಡೆಸಿದರು.