ಎಚ್‌ಡಿಕೆ ಮಂಡ್ಯ ಮೈತ್ರಿ ಅಭ್ಯರ್ಥಿ: ಸಿ.ಎಸ್‌.ಪುಟ್ಟರಾಜು

KannadaprabhaNewsNetwork | Published : Mar 22, 2024 1:09 AM

ಸಾರಾಂಶ

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ, ಪಾಂಡವಪುರಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಆದಷ್ಟು ಬೇಗ ಗುಣಮುಖರಾಗಿ ಬರಲಿದ್ದಾರೆ. ಅವರು ಸುಮ್ಮನೆ ಬಂದು ಅರ್ಜಿ ಹಾಕಿ ಹೋದರೆ ಸಾಕು. ನಾನೇ ಮುಂದೆ ನಿಂತು ಪ್ರಚಂಡ ಬಹುಮತದಿಂದ ಅವರನ್ನು ಗೆಲ್ಲಿಸುತ್ತೇನೆ ಎಂದು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದ ಮತ್ತು ಪ್ರಧಾನಿ ಮೋದಿ ಅವರ ಸಹಕಾರದಿಂದ ಅತ್ಯಂತ ಬಹುಮತದಿಂದ ಗೆಲ್ಲಿಸಲಿದ್ದೇವೆ. ಕುಮಾರಸ್ವಾಮಿ ಅವರು ಸ್ಪರ್ಧಿಸಬೇಕೆಂಬುದೇ ಜಿಲ್ಲಾ ನಾಯಕರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ನಡೆಸುವುದರೊಂದಿಗೆ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವುದಾಗಿ ವಿಶ್ವಾಸದಿಂದ ನುಡಿದರು.

ಕೋಲಾರ, ಮಂಡ್ಯ, ಹಾಸನ ಸೇರಿದಂತೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ. ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಬಗೆಹರಿಸುವುದಾಗಿ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ನಾಳೆ ಬಿಜೆಪಿ ಹೈಕಮಾಂಡ್ ಜೆಡಿಎಸ್‌ಗೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ ಎನ್ನುವುದನ್ನು ತಿಳಿಸಲಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಪಕ್ಷ ಸೇರುವಂತೆ ಆಹ್ವಾನಿಸಿದ್ದಾರೆಯೇ ಎಂಬ ಪ್ರಶ್ನೆಗೆ, ನಾನು ದೇವೇಗೌಡರ ಮನೆ ಮಗನಾಗಿದ್ದೇನೆ. ನನ್ನ ಕೊನೆ ಉಸಿರು ಇರುವವರೆಗೂ ದೇವೇಗೌಡರ ಮನೆ ಮಗನಾಗಿಯೇ ಇರುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಸೇರುವ ದುರ್ಗತಿ ನನಗೆ ಎದುರಾಗಿಲ್ಲ ಎಂದರು.ಸುಮಲತಾ ಅಂಬರೀಶ್ ಬಗ್ಗೆ ಕೇಳಿದಾಗ, ಹಿಂದೆ ರಾಜಕೀಯವಾಗಿ ಹಲವಾರು ವ್ಯತ್ಯಾಸಗಳಾಗಿವೆ. ರಾಜಕೀಯದಲ್ಲಿ ಶಾಶ್ವತವಾಗಿ ಯಾರು ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಮೈತ್ರಿ ಕಾರಣದಿಂದ ಜೆಡಿಎಸ್ ಸ್ವಂತ ನಿರ್ಧಾರಗಳನ್ನು ಮಾಡಲಾಗುತ್ತಿಲ್ಲ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ನಮ್ಮ ಹೆಡ್ ಮಾಸ್ಟರ್. ಅವರು ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ಅವರಿಲ್ಲದೆ ನಾವು ಕಂಗಾಲಾಗಿದ್ದೇವೆ. ಈ ಮಾತನ್ನು ಅವರು ಹೇಳಬೇಕಾದದ್ದೇ ಎಂದು ಹೇಳಿದರು.

ಕುಮಾರಸ್ವಾಮಿ ಅವರನ್ನು ಜನರು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಸ್ಟಾರ್ ಚಂದ್ರು ಯಾವುದೋ ದುಡ್ಡು ತಂದು ತಾತ್ಕಾಲಿಕ ಮನೆ ಸೆಟಪ್ ಮಾಡಿದರೆ ಜನ ಮೆಚ್ಚುವುದಿಲ್ಲ. ಸ್ಟಾರ್ ಚಂದ್ರು ಮನೆ ಇರೋದು ಡಾಲರ್ಸ್‌ ಕಾಲೋನಿಯಲ್ಲಿ, ಕುಮಾರಸ್ವಾಮಿ ಮನೆ ಇರೋದು ಬಿಡದಿ ತೋಟದ ಮನೆ. ನಮ್ಮ ನಾಯಕರ ಮನೆಗೆ ೨೦ ನಿಮಿಷದ ಪ್ರಯಾಣ. ಚಂದ್ರು ಮನೆಗೆ ಒಂದೂವರೆ ಗಂಟೆ ಬೇಕು. ಯಾರು ದೂರದಲ್ಲಿದ್ದಾರೆ ಎಂಬುದನ್ನು ಮಂಡ್ಯ ಜನರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡೋಲ್ಲ ಎಂಬ ಡಿಎಂಕೆ ಹೇಳಿಕೆ ಬಗ್ಗೆ ಕೇಳಿದಾಗ, ಅಂತವರ ಸಹವಾಸ ಮಾಡಿರೋ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು. ಈ ರಾಜ್ಯದ ಜನರು ಕಾಂಗ್ರೆಸ್‌ನವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

--------------------------

ಕುಮಾರಸ್ವಾಮಿಯೇ ಅಭ್ಯರ್ಥಿ: ಸಹಕಾರ ಕೊಡಿ

ಪಾಂಡವಪುರ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿ ಮಾಡಿದ್ದೇವೆ. ಅವರ ಗೆಲುವಿಗೆ ಸಹಕಾರ ನೀಡುವಂತೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮನವಿ ಮಾಡಿದರು. ಪಾಂಡವಪುರ ಪಟ್ಟಣದಲ್ಲಿ ವೈರಮುಡಿಯನ್ನು ಹೊತ್ತ ವಾಹನವನ್ನು ಸ್ವಾಗತಿಸುವ ಸಮಯದಲ್ಲಿ ಶಾಸಕ ದರ್ಶನ್ ಮತ್ತು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮುಖಾಮುಖಿಯಾದರು. ಪರಸ್ಪರ ನಗುಮೊಗದೊಂದಿಗೆ ಹಸ್ತಲಾಘವ ನೀಡಿದ ವೇಳೆ, ಪುಟ್ಟರಾಜು ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ನಿಮ್ಮ ಬೆಂಬಲ, ಸಹಕಾರ ನೀಡುವಂತೆ ಕೋರಿದರು. ಪುಟ್ಟರಾಜು ಮಾಡಿದ ಮನವಿಗೆ ಯೆಸ್, ನೀವು ಹೇಳಿದಂತೆ ಕೇಳುತ್ತೇವೆ ಎಂದ ದರ್ಶನ್ ಪುಟ್ಟಣ್ಣಯ್ಯ ನಯವಾಗಿಯೇ ಉತ್ತರಿಸಿದರು.

Share this article